ADVERTISEMENT

ಹನೂರು: ಕಾಂಗ್ರೆಸ್‌ಗೆ ಪ್ರಯಾಸದ ಗೆಲುವು

ಅಚ್ಚರಿಗೆ ಕಾರಣವಾದ ಜೆಡಿಎಸ್ ಮತಗಳಿಗೆ ಪ್ರಮಾಣ; ಸೋಲು ಕಂಡ ಪ್ರೀತನ್ ನಾಗಪ್ಪ

​ಪ್ರಜಾವಾಣಿ ವಾರ್ತೆ
Published 16 ಮೇ 2018, 10:47 IST
Last Updated 16 ಮೇ 2018, 10:47 IST

ಚಾಮರಾಜನಗರ: ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆರ್.ನರೇಂದ್ರ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರೂ ಅದು ಅವರಿಗೆ ಸುಲಭದ ಜಯವಾಗಿರಲಿಲ್ಲ. ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ಕೊನೆ ಗಳಿಗೆಯವರೆಗೂ ಪೈಪೋಟಿ ನಡೆಸಿ ಪ್ರಯಾಸದ ಗೆಲುವು ಪಡೆದಿದ್ದಾರೆ. ಕಳೆದ ಬಾರಿ ಅವರು 11,549 ಮತಗಳ ಸುಲಭದ ಜಯ ಪಡೆದಿದ್ದರು.‌

ಹಾಗೆ ನೋಡಿದರೆ ಆರಂಭದ ಸುತ್ತುಗಳಲ್ಲಿ ನರೇಂದ್ರ 3ನೇ ಸ್ಥಾನದಲ್ಲಿದ್ದರು. ಒಂದು ಹಂತದಲ್ಲಿ ಗೆಲ್ಲುವ ಸಾಧ್ಯತೆ ಕ್ಷೀಣಿಸಿತ್ತು. ಬಿಜೆಪಿಯ ಡಾ.ಪ್ರೀತನ್ ನಾಗಪ್ಪ ಹಾಗೂ ಜೆಡಿಎಸ್‌ನ ಮಂಜುನಾಥ್ ನಡು ವೆಯೇ ನೇರ ಪೈಪೋಟಿ ಇತ್ತು. ಆದರೆ, ನಂತರದ ಸುತ್ತುಗಳಲ್ಲಿ ಹಾಗೂ ಕೊನೆಯ ಸುತ್ತುಗಳಲ್ಲಿ ನರೇಂದ್ರ ಜಯ ಪಡೆದರು.‌

ತೀರಾ ಅಚ್ಚರಿಗೆ ಕಾರಣವಾಗಿದ್ದು ಎಂದರೆ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಅವರ ಮತಗಳಿಕೆಯ ಪ್ರಮಾಣ. 44,957 ಮತಗಳನ್ನು ಪಡೆಯುವ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್‌ ಇನ್ನೂ ಜೀವಂತ ಇದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇವರು ಪಡೆದ ಮತಗಳು ಕಳೆದ ಬಾರಿ 2ನೇ ಸ್ಥಾನ ಪಡೆದಿದ್ದ ಪರಿಮಳಾ ನಾಗಪ್ಪ (44,135) ಅವರು ಪಡೆದ ಮತಗಳಿಗಿಂತ ಅಧಿಕ ಎಂಬುದು ಗಮನಿಸಬೇಕಾದ ಅಂಶ. ಕ್ಷೇತ್ರಕ್ಕೆ ಚುನಾವಣೆ ನಡೆಯುವ ಕೇವಲ 20 ದಿನಗಳ ಹಿಂದೆಯಷ್ಟೇ ಬಂದು, ಪ್ರಚಾರ ನಡೆಸಿ ಕ್ಷೇತ್ರದ ಜನರ ವಿಶ್ವಾಸ ಗಳಿಸುವಲ್ಲಿ ಇವರು ಸಫಲರಾಗಿದ್ದಾರೆ.

ADVERTISEMENT

ವೈದ್ಯ ವೃತ್ತಿಯಿಂದ ರಾಜಕಾರಣಕ್ಕೆ ಧುಮುಕಿ ಯುವ ಜನರ ವಿಶ್ವಾಸ ಗಳಿಸುವಲ್ಲಿ ಇನ್ನಿ‍ಲ್ಲದ ಕಸರತ್ತು ನಡೆಸಿದ್ದ ಬಿಜೆಪಿಯ ಡಾ.ಪ್ರೀತನ್ ನಾಗಪ್ಪ ಮೊದಲ ಬಾರಿಯ
ತಮ್ಮ ಚುನಾವಣೆಯಲ್ಲಿ ಮುಗ್ಗರಿಸಿದ್ದರೂ ಅವರು ಮತ ಗಳಿಗೆ ಪ್ರಮಾಣ ನಿರಾಶದಾಯಕವಾಗೇನೂ ಇಲ್ಲ.

ಹ್ಯಾಟ್ರಿಕ್ ಸಾಧನೆ ಸಹ ಕ್ಷೇತ್ರದಲ್ಲಿ ಇದೇ ಮೊದಲು. ನರೇಂದ್ರ ತಂದೆ ರಾಜೂಗೌಡ 1985 ಮತ್ತು 1989ರಲ್ಲಿ ಸತತವಾಗಿ ಗೆದ್ದು ಹ್ಯಾಟ್ರಿಕ್ ಹೊಸ್ತಿಲಲ್ಲಿ ಮುಗ್ಗರಿಸಿದ್ದರು. ನಂತರ, 1999ರಲ್ಲಿ ಇವರು ಮತ್ತೆ ಜಯ ಗಳಿಸಿದ್ದರು. ಇದೀಗ ತಮ್ಮ ತಂದೆಯ ಕನಸನ್ನು ನರೇಂದ್ರ ನನಸು ಮಾಡಿದ್ದಾರೆ.

ಸಾವಿರ ಮುಟ್ಟದ ಇತರರು!

ಹನೂರಿನಲ್ಲಿ 15 ಮಂದಿ ಸ್ಪರ್ಧಿಗಳು ಇದ್ದರು. ಇವರಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳೇ ಶೇ 95ರಷ್ಟು ಮತ ಪಡೆದಿದ್ದಾರೆ. ಉಳಿದ ಇತರೆ ಪಕ್ಷಗಳು ಹಾಗೂ ಪಕ್ಷೇತರರು  ಸಾವಿರ ಮತಗಳನ್ನೂ ಮುಟ್ಟಿಲ್ಲ. ಒಬ್ಬರು ಮಾತ್ರ 500 ಮತಗಳನ್ನು ದಾಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.