ADVERTISEMENT

`ಹನೂರು ತಾಲ್ಲೂಕು ರಚನೆ: ಸಿಎಂಗೆ ಮನವಿ'

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 8:27 IST
Last Updated 21 ಡಿಸೆಂಬರ್ 2012, 8:27 IST

ಚಾಮರಾಜನಗರ: `ಹನೂರು ತಾಲ್ಲೂಕು ರಚನೆಗೆ ಸೂಕ್ತ ಕ್ರಮಕೈಗೊಳ್ಳಬೇಕು. ಕಿತ್ತೂರು ಮಾದರಿಯಲ್ಲಿಯೇ ತ್ವರಿತವಾಗಿ ತಾಲ್ಲೂಕು ಘೋಷಣೆಗೆ ಕ್ರಮವಹಿಸಲು ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ಗೆ ಕೋರಿದ್ದೇನೆ' ಎಂದು ಸಚಿವ ಸೋಮಣ್ಣ ಹೇಳಿದರು.

ಸಭೆಯಲ್ಲಿ ಮಾತನಾಡಿದ ಅವರು, `ಹನೂರು ತಾಲ್ಲೂಕು ಮಾಡಬೇಕೆಂಬುದು ಆ ಭಾಗದ ಜನರ ಹಲವು ದಶಕದ ಕನಸು. ಈ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶೀಘ್ರವೇ ಘೋಷಿಸಲು ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಗಿದೆ' ಎಂದರು.

ಶಾಸಕರಾದ ಆರ್. ನರೇಂದ್ರ ಮತ್ತು ಎಚ್.ಎಸ್. ಮಹದೇವಪ್ರಸಾದ್ ಮಾತನಾಡಿ, `ಈಗಾಗಲೇ, ಕಿತ್ತೂರು ತಾಲ್ಲೂಕು ಘೋಷಿಸಲಾಗಿದೆ. ಅದೇ ಮಾದರಿಯಲ್ಲಿಯೇ ಹನೂರು ತಾಲ್ಲೂಕು ಘೋಷಿಸಬೇಕು. ಇದರಿಂದ ಗುಡ್ಡಗಾಡು ಪ್ರದೇಶದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ' ಎಂದು ಒತ್ತಾಯಿಸಿದರು.

ಶಿಕ್ಷಕರ ಕೊರತೆ
ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್. ಚಂದ್ರೇಗೌಡ ಮಾತನಾಡಿ, `ಪ್ರಸ್ತುತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ.

ಹೀಗಾಗಿ, ಹೊಸದಾಗಿ ಶಿಕ್ಷಕರ ನೇಮಕಾತಿ ನಡೆಯುತ್ತಿಲ್ಲ. ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ಶಿಕ್ಷಕರ ಕೊರತೆಯಿದೆ' ಎಂದರು.ವಿಧಾನ ಪರಿಷತ್ ಸದಸ್ಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಮಾತನಾಡಿ, ಚಾಮರಾಜನಗರ ತಾಲ್ಲೂಕಿನಲ್ಲಿಯೇ 154 ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆಯಿದೆ.

ಇದರಲ್ಲಿ 10 ಶಿಕ್ಷಕರ ನೇಮಕಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದರು.ಶಾಸಕರಾದ ಆರ್. ನರೇಂದ್ರ ಹಾಗೂ ಸಿ. ಪುಟ್ಟರಂಗಶೆಟ್ಟಿ ಕೂಡ ತಮ್ಮ ಕ್ಷೇತ್ರದ ವ್ಯಾಪ್ತಿ ಶಿಕ್ಷಕರ ಕೊರತೆ ಇರುವ ಬಗ್ಗೆ ಪ್ರಸ್ತಾಪಿಸಿದರು.

ಸಚಿವ ಸೋಮಣ್ಣ ಮಾತನಾಡಿ, `ಎಷ್ಟು ಶಿಕ್ಷಕರ ಅಗತ್ಯವಿದೆ ಎಂಬ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಅಧ್ಯಕ್ಷರೊಂದಿಗೆ ಚರ್ಚಿಸಿ ವರದಿ ಸಿದ್ಧಪಡಿಸಬೇಕು. ಬೆಂಗಳೂರಿಗೆ ಬಂದರೆ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಶಿಕ್ಷಕರ ನೇಮಕಕ್ಕೆ ಕ್ರಮಕೈಗೊಳ್ಳಲಾಗುವುದು' ಎಂದರು.

ಶಾಲೆಗಳಿಗೆ ಅಡುಗೆ ಅನಿಲ ಸಿಲಿಂಡರ್ ಕೊರತೆ ನೆಪದಲ್ಲಿ ಮಕ್ಕಳಿಂದ ಹಣ ವಸೂಲಿ ಮಾಡಿ ಸಿಲಿಂಡರ್ ಖರೀದಿಸಬಾರದು ಎಂದು ಅಕ್ಷರದಾಸೋಹ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

 

ಫ್ಲೋರೈಡ್ ಅಂಶ ಪತ್ತೆ

ADVERTISEMENT

ಚಾಮರಾಜನಗರ: `ಜಿಲ್ಲೆಯ ಬಂಡಳ್ಳಿ, ತಮ್ಮಡಹಳ್ಳಿ, ಮರಿಯಾಲದಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಇರುವುದು ಪತ್ತೆಯಾಗಿದೆ' ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಿ. ನಾಗಶ್ರೀ ಹೇಳಿದರು.

ಸಭೆಯಲ್ಲಿ ಮಾತನಾಡಿದ ಅವರು, `ಫ್ಲೋರೈಡ್‌ನಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ವರದಿ ನಂತರ ಪರ್ಯಾಯವಾಗಿ ಗ್ರಾಮೀಣರಿಗೆ ನೀರು ಪೂರೈಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.