ADVERTISEMENT

ಹಾಲಿನ ದರ ಏರಿಕೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 11:29 IST
Last Updated 13 ಸೆಪ್ಟೆಂಬರ್ 2013, 11:29 IST

ಚಾಮರಾಜನಗರ: ಹಾಲಿನ ದರ ಏರಿಕೆ ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಕಪ್ಪು ಟೀ ತಯಾರಿಸಿ ಸಾವರ್ಜನಿಕರಿಗೆ ವಿತರಿಸುವ ಮೂಲಕ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಕೆಎಸ್‌ಆರ್‌ಟಿಸಿ ಬಸ್‌ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಅವೈಜ್ಞಾನಿಕವಾಗಿ ಏರಿಸುತ್ತಿದೆ. ಇದರಿಂದ, ಜನ­ಸಾಮಾನ್ಯರಿಗೆ ಜೀವನ ನಡೆಸಲು ತೊಂದರೆಯಾಗುತ್ತಿದೆ ಎಂದು ದೂರಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಒಂದು ರೂಪಾಯಿಗೆ ಕೆಜಿ ಅಕ್ಕಿ ವಿತರಣೆ ಮಾಡಿ ಮತ್ತೊಂದೆಡೆ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಕೆಎಂಎಫ್‌ನಲ್ಲಿ ಹಾಲಿನ ಪೌಡರ್‌ ಉಳಿದಿರುವುದರಿಂದ ‘ಕ್ಷೀರ ಭಾಗ್ಯ’ ಯೋಜನೆ ಮಾಡಿ ರೈತರನ್ನು ಮತ್ತು ಗ್ರಾಹಕರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.

ಕೂಡಲೇ, ಹಾಲಿನ ದರವನ್ನು ಕಡಿತಗೊಳಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಆಲೂರು ಮಲ್ಲು, ರಾಜಶೇಖರ್‌, ಮಹೇಶ್‌, ಮಂಜು, ಕೆಂಪರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.