ADVERTISEMENT

ಹೆದ್ದಾರಿಯಲ್ಲಿ ಒಕ್ಕಣೆ: ಸಂಚಾರಕ್ಕೆ ಸಂಚಕಾರ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 7:30 IST
Last Updated 5 ಫೆಬ್ರುವರಿ 2011, 7:30 IST

ಕೊಳ್ಳೇಗಾಲ: ರಾಷ್ಟ್ರೀಯ ಹೆದ್ದಾರಿಯನ್ನೇ ರೈತರು ಕಣವಾಗಿಸಿಕೊಂಡು ಒಕ್ಕಣೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದು, ವಾಹನ ಚಾಲಕರು ಹಾಗೂ ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಗಿದೆ.

ತಾಲ್ಲೂಕಿನ ಚಿಲಕವಾಡಿ ಬೆಟ್ಟದ ಬಳಿ ಕೊಳ್ಳೇಗಾಲ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ತಾವು ಬೆಳೆದ ಹುರುಳಿ ಬೆಳೆಯನ್ನು ಹಾಕಿಕೊಂಡು ಒಕ್ಕಣೆ ಮಾಡುತ್ತಿದ್ದಾರೆ. ಈ ರಸ್ತೆಯಲ್ಲಿ ನಿತ್ಯವೂ ನೂರಾರು ವಾಹನ ಸಂಚರಿಸುತ್ತವೆ. ರೈತರು ರಸ್ತೆಯನ್ನೇ ಕಣವಾಗಿಸಿಕೊಂಡು ಒಕ್ಕಣೆ ಮಾಡುತ್ತಿರುವ ಪರಿಣಾಮ ಅಪಘಾತವಾಗುವ ಸಂಭವವೂ ಹೆಚ್ಚಿದೆ.  ರಸ್ತೆ ಪೂರ್ತಿ ಹುರುಳಿ ಗಿಡವನ್ನು ಎತ್ತರವಾಗಿ ಹರಡಿರುವುದರಿಂದ ಪಕ್ಕದಲ್ಲಿಯೂ ಯಾವುದೇ ವಾಹನ ಸಂಚರಿಸಲು ಸ್ಥಳಾವಕಾಶ ಇಲ್ಲದಂತಾಗಿದೆ. ಹರಡಿರುವ ಹುರುಳಿ ಗಿಡಗಳ ರಾಶಿ ಮೇಲೆಯೇ ವಾಹನ ಚಲಿಸಬೇಕಿದೆ. ಹುರುಳಿ ಗಿಡಗಳು ವಾಹನದ ತಳಭಾಗಕ್ಕೆ ಸಿಲುಕಿ ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಕೆಲವೊಮ್ಮೆ ಘರ್ಷಣೆಯಿಂದ ಹುರುಳಿ ಗಿಡಕ್ಕೆ ಬೆಂಕಿ ಹತ್ತಿಕೊಂಡರೆ ವಾಹ ನದಲ್ಲಿರುವ ಮಂದಿಯ ಪ್ರಾಣಕ್ಕೆ ಸಂಚಕಾರ ಬರಲಿದೆ.

ದೂಳಿನಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ದ್ವಿಚಕ್ರವಾಹನ ಸವಾರರ ಕಣ್ಣಿಗೆ ದೂಳು ಬಿದ್ದು ಸಣ್ಣಪುಟ್ಟ ಅಪಘಾತಕ್ಕೂ ಎಡೆಮಾಡಿ ಕೊಟ್ಟಿರುವ ನಿದರ್ಶನವಿದೆ. ಪ್ರಯಾಣಿಕರು ಹಾಗೂ ವಾಹನಗಳ ಮಾಲೀಕರಿಗೆ ಉಂಟಾಗುತ್ತಿರುವ ಈ ಕಿರಿಕಿರಿ ತಪ್ಪಿಸಲು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಆಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಮುಂದಾಗಿಲ್ಲ.  ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ಮೇಲಿನ ಒಕ್ಕಣೆಯಿಂದ ಉಂಟಾಗುತ್ತಿರುವ ತೊಂದರೆ ತಪ್ಪಿಸಲು ಮುಂದಾಗಬೇಕು ಎಂದು ಪ್ರಯಾಣಿಕರು, ವಾಹನ ಚಾಲಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.