ADVERTISEMENT

‘ಸ್ವಾಗತ ಕಾರ್ಯಕ್ರಮ ಸ್ನೇಹದ ಬೆಸುಗೆಗೆ ಸಹಕಾರಿ’

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 10:19 IST
Last Updated 28 ನವೆಂಬರ್ 2014, 10:19 IST

ಚಾಮರಾಜನಗರ: ‘ಕಿರಿಯ ವಿದ್ಯಾರ್ಥಿ ಗಳನ್ನು ಪರಿಚಯ ಮಾಡಿಕೊಳ್ಳುವ ಉದ್ದೇಶದಿಂದ ಕಾಲೇಜುಗಳಲ್ಲಿ ಹಿರಿಯ ವಿದ್ಯಾರ್ಥಿಗಳು ನಡೆಸುವ ಸ್ವಾಗತ ಕಾರ್ಯಕ್ರಮವು ಸ್ನೇಹದ ಬೆಸುಗೆಗೆ ನಾಂದಿಯಾಗಲಿದೆ’ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎಚ್. ನರಸಿಂಹಮೂರ್ತಿ ಹೇಳಿದರು.

ನಗರದ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಉಪಕೇಂದ್ರದಿಂದ ಕಿರಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಿರಿಯ ವಿದ್ಯಾರ್ಥಿಗಳಲ್ಲಿರುವ ಭಯ, ದುಗುಡ ದೂರಮಾಡಲು ಸ್ವಾಗತ ಕಾರ್ಯಕ್ರಮಗಳು ಪೂರಕವಾಗಿವೆ. ಜತೆಗೆ, ಶಿಕ್ಷಣ ಕಲಿಯಲು ಸಹಕಾರಿಯಾಗಿವೆ ಎಂದರು.

ಶಾಲಾ– ಕಾಲೇಜುಗಳಲ್ಲಿ ನಡೆಯುವ ಬೀಳ್ಕೊಡುಗೆ ಸಮಾ ರಂಭದಂತೆ ಸ್ವಾಗತ ಕಾರ್ಯಕ್ರಮ ನಡೆಸುವುದು ಉತ್ತಮ ಬೆಳವಣಿಗೆ ಎಂದ ಅವರು, ಇಂದಿನ ಶೈಕ್ಷಣಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಕಲಿಯಲು ಸಾಕಷ್ಟು ಅವಕಾಶಗಳಿವೆ. ಉತ್ತಮ ವಿಚಾರದ ಬಗ್ಗೆ ಹೆಚ್ಚು ಚರ್ಚಿಸಬೇಕಿದೆ ಎಂದರು.

ಸ್ವಾಗತ ಕಾರ್ಯಕ್ರಮದ ಮೂಲಕ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಲ್ಲಿರುವ ಆತಂಕವನ್ನು ಹೋಗಲಾಡಿಸಬೇಕು. ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ವಿಚಾರ ಕುರಿತು ಚರ್ಚಿಸಿ ವಿಷಯ ವಿನಿಮಯ ಮಾಡಿಕೊಳ್ಳಬೇಕು. ಇದನ್ನು ಹೊರತುಪಡಿಸಿ ಇತರೇ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದು ಸಲಹೆ ನೀಡಿದರು.

ಮಕ್ಕಳ ತಜ್ಞ ಡಾ.ಬಸವರಾಜು ಮಾತನಾಡಿ, ‘ವಿದ್ಯಾರ್ಥಿ ಜೀವನ ಭವಿಷ್ಯದಲ್ಲಿ ಮೆಲುಕು ಹಾಕು ವಂತಹುದು. ಜತೆಗೆ, ಅತ್ಯಮೂಲ್ಯ ವಾದುದು ಎಂದು ಹೇಳಿದರು.

ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸ್ನೇಹಿತರ ಪರಿಚಯ ಮಾಡಿಕೊಳ್ಳಬೇಕು. ಜೀವನ ಉದ್ದಕ್ಕೂ ನೆನಪು ತರುವಂತಹ ಉತ್ತಮ ಸ್ನೇಹ ನೆಮ್ಮದಿ ನೀಡುತ್ತದೆ. ಉಲ್ಲಾಸದಿಂದ ಇರುವಂತೆ ಮಾಡುತ್ತದೆ. ಸಜ್ಜನರ ಸ್ನೇಹದಿಂದ ಸೇವಾ ಮನೋಭಾವ ಬೆಳೆಯುತ್ತದೆ ಎಂದು ಹೇಳಿದರು.

ಪ್ರಾಧ್ಯಾಪಕ ರಾಮಚಂದ್ರನ್ ಮಾತನಾಡಿ, ‘ಹೊಸ ವಿಚಾರಗಳ ವಿನಿಮಯಕ್ಕೆ ಸ್ವಾಗತ ಕಾರ್ಯಕ್ರಮ ಸಹಕಾರಿಯಾಗಿದೆ. ಈಗಿನ ಕಿರಿಯ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಶಿಕ್ಷಣಕ್ಕೆ ಪೂರಕವಾದ ವಿಚಾರಗಳನ್ನು ಮುಂದಿನ ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಬಡ್ಡಿ ವಿಜೇತರಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕೇಂದ್ರದ ಸಂಯೋಜಕ ಪ್ರೊ.ಶಿವಬಸವಯ್ಯ, ವಾಣಿಜ್ಯ ವಿಭಾಗದ ಮುಖ್ಯಸ್ಥ ತಿಮ್ಮರಾಯಪ್ಪ, ಇಂಗ್ಲಿಷ್ ವಿಭಾಗದ ಲಕ್ಷ್ಮಣ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.