ADVERTISEMENT

10 ಆಮ್ಲಜನಕ ಬೆಡ್‌ ಉದ್ಘಾಟನೆಗೆ ಸಜ್ಜು

ಹನೂರು ತಾಲ್ಲೂಕಿನ ರಾಮಾಪುರ ಸಮುದಾಯ ಆರೋಗ್ಯ ಕೇಂದ್ರ

ಬಿ.ಬಸವರಾಜು
Published 20 ಮೇ 2021, 4:02 IST
Last Updated 20 ಮೇ 2021, 4:02 IST
ಹನೂರು ತಾಲ್ಲೂಕಿನ ರಾಮಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕ ಬೆಡ್ ಸಿದ್ಧ ಮಾಡಿರುವುದು (ಎಡಚಿತ್ರ). ಹನೂರು ಸಮೀಪದ ಕಾಮಗೆರೆಯಲ್ಲಿರುವ ಹೋಲಿಕ್ರಾಸ್ ಆಸ್ಪತ್ರೆ
ಹನೂರು ತಾಲ್ಲೂಕಿನ ರಾಮಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕ ಬೆಡ್ ಸಿದ್ಧ ಮಾಡಿರುವುದು (ಎಡಚಿತ್ರ). ಹನೂರು ಸಮೀಪದ ಕಾಮಗೆರೆಯಲ್ಲಿರುವ ಹೋಲಿಕ್ರಾಸ್ ಆಸ್ಪತ್ರೆ   

ಹನೂರು: ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ರಾಮಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ 10 ಆಮ್ಲಜನಕ ಬೆಡ್‌ಗಳನ್ನು ಅಳವಡಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಅಗತ್ಯ ಸಿದ್ಧತೆ ಭರದಿಂದ ಸಾಗಿದೆ.

ಮೂರು ಹೋಬಳಿಗಳನ್ನು ಹೊಂದಿರುವ ಹನೂರು ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಜತೆಗೆ, ಕೋವಿಡ್‌ನಿಂದ ಉಂಟಾಗುತ್ತಿರುವ ಸಾವಿನ ಸಂಖ್ಯೆಯೂ ಜನರಲ್ಲಿ ಭಯ ಮೂಡಿಸಿದೆ. ಐದು ದಿನಗಳ ಅವಧಿಯಲ್ಲಿ 411 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 9 ಮಂದಿ ಮೃತಪಟ್ಟಿದ್ದಾರೆ.

ಬಹುತೇಕ ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಹನೂರು ತಾಲ್ಲೂಕಿನ ಜನರಿಗೆ ಗುಣಮಟ್ಟದ ಚಿಕಿತ್ಸೆ ಎಂಬುದು ಮರೀಚಿಕೆಯಾಗಿದೆ. ಇಂಥ ಸಂದರ್ಭದಲ್ಲಿ ಕೊರೊನಾ ಸೋಂಕು ಗ್ರಾಮೀಣ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದೆ. ವಿಸ್ತಾರವಾಗಿರುವ ಹನೂರು ತಾಲ್ಲೂಕಿನಲ್ಲಿ ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಕಲ್ಪಿಸಬೇಕು ಎಂಬ ಕೂಗು ಒಂದು ತಿಂಗಳಿನಿಂದ ಕೇಳಿ ಬರುತ್ತಿತ್ತು. ಈಗ ಅದು ಕಾರ್ಯರೂಪಕ್ಕೆ ಬರುತ್ತಿದೆ.

ADVERTISEMENT

ರಾಮಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ 10 ಆಕ್ಸಿಜನ್ ಬೆಡ್ ಅಳವಡಿಸಲಾಗುತ್ತಿದೆ. ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅದನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕೋವಿಡ್ ದೃಢಪಟ್ಟವರಿಗೆ ಉಸಿರಾಟದ ಸಮಸ್ಯೆಯಿದ್ದರೆ ಆಮ್ಲಜನಕ ನೀಡಿ ಬಳಿಕ ಕೋವಿಡ್ ಸೆಂಟರ್‌ಗೆ ದಾಖಲಿಸಲಾಗುತ್ತದೆ. ಉಸಿರಾಟದ ಸಮಸ್ಯೆ ತೀವ್ರವಾದರೆ ಅವರನ್ನು ಕೊಳ್ಳೇಗಾಲ ಅಥವಾ ಚಾಮರಾಜನಗರಕ್ಕೆ ಕಳುಹಿಸಿಕೊಡಲಾಗುವುದು.

ಹೋಲಿಕ್ರಾಸ್‌ನಲ್ಲಿ 14 ಆಮ್ಲಜನಕದ ಬೆಡ್: ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಐಸಿಯು ಎರಡು ಬೆಡ್ ಸೇರಿದಂತೆ ಒಟ್ಟು 14 ಆಮ್ಲಜನಕದ ಬೆಡ್ ಸಿದ್ಧಮಾಡಲಾಗಿದೆ. ಆದರೆ, ದೂರದ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೋಕಿತರು ಇಲ್ಲಿಗೆ ಬರುತ್ತಿರುವುದರಿಂದ ಇಲ್ಲಿಯೂ ಸಮಸ್ಯೆ ಹೆಚ್ಚಾಗಿದೆ.

ಜಿಲ್ಲಾಡಳಿತದ ಆದೇಶದಂತೆ ನಮ್ಮ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ 50 ಬೆಡ್ ಮೀಸಲಿರಿಸಲಾಗಿದೆ. ಈ ಪೈಕಿ 14 ಬೆಡ್‌ಗಳಿಗೆ ಮಾತ್ರ ಆಮ್ಲಜನಕ ವ್ಯವಸ್ಥೆಯಿದೆ. ಹೀಗಾಗಿ ಬರುವ ಎಲ್ಲಾ ರೋಗಿಗಳಿಗೂ ಚಿಕಿತ್ಸೆ ನೀಡಲು ಸಮಸ್ಯೆಯಾಗುತ್ತಿದೆ. ತೀವ್ರ ಉಸಿರಾಟದ ಸಮಸ್ಯೆಯಿರುವ ರೋಗಿಗಳಿಗೆ ಕನಿಷ್ಠ 10 ರಿಂದ 12 ಲೀ. ಆಮ್ಲಜನಕ ಬೇಕು. ಇದಕ್ಕೆ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ನಮಗೆ 10 ಲೀ.ನ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಒದಗಿಸಿದರೆ ಮತ್ತಷ್ಟು ಆಮ್ಲಜನಕದ ಬೆಡ್ ಹೆಚ್ಚಿಸಬಹುದು ಎನ್ನುತ್ತಾರೆ ಹೋಲಿಕ್ರಾಸ್ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಕ್ಯಾಥೋಲಿನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.