ADVERTISEMENT

ನೂತನ ಪಿಂಚಣಿ ಯೋಜನೆ ರದ್ದತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 9:17 IST
Last Updated 19 ಜನವರಿ 2018, 9:17 IST

ಚಾಮರಾಜನಗರ: ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಯೋಜನೆಯನ್ನೇ ಜಾರಿ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲೆಯ ವಿವಿಧೆಡೆ ಗುರುವಾರ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಟನೆ ನಡೆಯಿತು. ಜಿಲ್ಲಾಡಳಿತ ಭವನದ ಮುಂಭಾಗ ಸಮಾವೇಶಗೊಂಡ ಸಂಘದ ಸದಸ್ಯರು ಹಾಗೂ ನೌಕರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕೇಂದ್ರ ಸರ್ಕಾರ 2004ರಲ್ಲಿ ಅವೈಜ್ಞಾನಿಕ ಸಿದ್ಧಾಂತದ ಹಾಗೂ ಅಭದ್ರತೆಯಿಂದ ಕೂಡಿದ ಎನ್‌ಪಿಎಸ್‌್ ಯೋಜನೆ ಜಾರಿಗೊಳಿಸಿದ ಬಳಿಕ 2006ರಲ್ಲಿ ರಾಜ್ಯ ಸರ್ಕಾರ ಅದನ್ನು ಅಳವಡಿಸಿಕೊಂಡಿದೆ. 2006ರ ಬಳಿಕ ನೇಮಕಗೊಂಡ ನೌಕಕರಿಗೆ ಪಿಂಚಣಿ ಸೌಲಭ್ಯದಲ್ಲಿ ಅನೇಕ ಸಮಸ್ಯೆಗಳು ಎದುರಾಗಿವೆ ಎಂದು ದೂರಿದರು.

ಯೋಜನೆಯನ್ನು ಟ್ರಸ್ಟ್‌ ಮ್ಯಾನೇಜ್‌ಮೆಂಟ್‌ ನಿರ್ವಹಿಸಲಿದ್ದು, ಇದರ ಆರ್ಥಿಕ ಕಾರ್ಯನಿರ್ವಹಣೆಯಲ್ಲಿ ಯಾವುದೇ ಬದ್ಧತೆಯಿಲ್ಲ. ಈ ಪಿಂಚಣಿ ಯೋಜನೆ ಅನಿಶ್ಚಿತವಾಗಿದೆ. ಇದರಿಂದ ರಾಜ್ಯದಲ್ಲಿನ 1.80 ಲಕ್ಷ ಸರ್ಕಾರಿ ನೌಕರರು ಸೇವಾ ನಿವೃತ್ತಿಯ ವೇಳೆಯಲ್ಲಿ ಪಿಂಚಣಿ ಮತ್ತು ಇತರೆ ಸೌಲಭ್ಯದಿಂದ ವಂಚಿತರಾಗಿ ಸಾಮಾಜಿಕ ಅನ್ಯಾಯಕ್ಕೆ ಒಳಗಾಗಲಿದ್ದಾರೆ ಎಂದು ತಿಳಿಸಿದರು.

ADVERTISEMENT

ಯೋಜನೆ ಜಾರಿಗೊಂಡು 10 ವರ್ಷವಾದರೂ ಇದುವರೆಗೂ ನೌಕರರಿಗೆ ಯಾವುದೇ ಮಾಹಿತಿ ನೀಡಿಲ್ಲ. ಎನ್‌ಪಿಎಸ್ ಯೋಜನೆಯ ಉಸ್ತುವಾರಿ ವಹಿಸಿಕೊಂಡಿರುವ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರವು ವಿವಿಧ ರೀತಿಯ ಸೇವಾ ಶುಲ್ಕವನ್ನು ವೇತನದ ಮೊತ್ತದಿಂದಲೇ ತೆಗೆದುಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎನ್‌ಪಿಎಸ್‌ ಯೋಜನೆಗೆ ಒಳಪಡುವ ನೌಕರರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ ಕ್ರಮವಹಿಸಬೇಕು. ನೌಕರರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಆರ್. ರಾಜಪ್ಪ, ಗೌರವಾಧ್ಯಕ್ಷ ಎಸ್‌. ರಂಗಸ್ವಾಮಿ, ಖಜಾಂಚಿ ಶಾಂತಮ್ಮ, ಪ್ರಧಾನ ಕಾರ್ಯದರ್ಶಿ, ಮಹದೇವಸ್ವಾಮಿ, ಆಂತರಿಕ ಲೆಕ್ಕ ಪರಿಶೋಧಕ ಎಚ್.ಎಸ್‌. ಗಂಗಾಧರ, ಉಪಾಧ್ಯಕ್ಷರಾದ ಬಿ. ಮಹದೇವಯ್ಯ, ಬಿ. ಬಸವರಾಜು, ಕೆ. ಬಸವರಾಜು, ಎಚ್.ವಿ. ನಾಗರಾಜು, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಇತರರು ಪಾಲ್ಗೊಂಡಿದ್ದರು.

ಕೊಳ್ಳೇಗಾಲ ವರದಿ: ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಹಾಗೂ ರಾಜ್ಯ 6ನೇ ವೇತನ ಆಯೋಗಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಗುರುವಾರ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆಯಿಂದ ತಹಶೀಲ್ದಾರ್ ಮಹೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎ. ಫ್ರಾನ್ಸಿಸ್‌, ಕಾರ್ಯದರ್ಶಿ ಜೋಸೆಫ್ ಅಲೆಕ್ಸಾಂಡರ್, ರಾಜ್ಯ ಪರಿಷತ್ ಸದಸ್ಯ ಉಮಾಶಂಕರ್, ಪದಾಧಿಕಾರಿಗಳಾದ ಆನಂದ್‌ರಾಜ್, ಶಿವಕುಮಾರ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬುಕಾನಿ, ಹನೂರು ಘಟಕದ ಅಧ್ಯಕ್ಷ ಜಾನ್ ಬ್ರಿಟೊ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.