ADVERTISEMENT

7ರಂದು ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಜಿಲ್ಲಾಡಳಿತ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 9:38 IST
Last Updated 25 ಸೆಪ್ಟೆಂಬರ್ 2013, 9:38 IST

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅ. 7ರಂದು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುವ ಮುಹೂರ್ತ ನಿಗದಿಯಾಗಿದೆ.
ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿ ಕಾರ್ಯಕ್ರಮದ ರೂಪರೇಷೆಯೊಂದಿಗೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ವಿಧಾನಸಭಾ ಚುನಾವಣೆ ವೇಳೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಪರವಾಗಿ ನಗರದ ಹಳೆಯ ಬಸ್‌ನಿಲ್ದಾಣದ ಬಳಿ ನಡೆದ ಪ್ರಚಾರ ಸಭೆಯಲ್ಲಿ ತಾವು ಮುಖ್ಯಮಂತ್ರಿಯಾದರೆ ಕೂಡಲೇ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುವುದಾಗಿ ಘೋಷಿಸಿದ್ದರು. ಈಗ ಅಲ್ಲಿಯೇ ಕಾರ್ಯಕ್ರಮ ಆಯೋಜಿಸಲಾಗಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದು 4 ತಿಂಗಳ ನಂತರ ಅವರು ಬರುತ್ತಿದ್ದು, ಮುಖ್ಯಮಂತ್ರಿಯ ಸ್ವಾಗತಕ್ಕೆ ಜಿಲ್ಲಾಡಳಿತ  ಸಿದ್ಧತೆ ನಡೆಸುತ್ತಿದೆ.

‘ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ ‘ಮನಸ್ವಿನಿ’ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಿರುವ 1,765 ಅವಿವಾಹಿತ ಮತ್ತು ವಿಚ್ಛೇದನ ಪಡೆದಿರುವ ಮಹಿಳೆಯರನ್ನು ಗುರುತಿಸಲಾಗಿದೆ. ಇವರಿಗೆ ಸೌಲಭ್ಯ ನೀಡಿದ ನಂತರ ಉಳಿದ ತಾಲ್ಲೂಕಿನಲ್ಲಿರುವ ಅರ್ಹರಿಗೆ ಕಂದಾಯ ಇಲಾಖೆಯಿಂದ ಸೌಲಭ್ಯ ನೀಡಲಾಗುವುದು’ ಎಂದು ಮಹದೇವಪ್ರಸಾದ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಲೋಕೋಪಯೋಗಿ ಇಲಾಖೆಯಿಂದ ಹೊಂಗಲವಾಡಿ ಬಳಿ ನಿರ್ಮಿಸಿರುವ ಸೇತುವೆ ಉದ್ಘಾಟಿಸುವರು. ತೆಂಗು ಸಂಸ್ಕರಣಾ ಘಟಕ ನಿರ್ಮಾಣ, ₨ 22.5 ಲಕ್ಷ ವೆಚ್ಚದಡಿ ಹಾರ್ಟಿ ಕ್ಲಿನಿಕ್‌ ಸ್ಥಾಪನೆಗೆ ಚಾಲನೆ ನೀಡುವರು. ತಲಾ 3.02 ಕೋಟಿ ವೆಚ್ಚದಡಿ ಮಲ್ಲಯ್ಯನಪುರ ಹಾಗೂ ಮಲ್ಲಿಗೆಹಳ್ಳಿ ಗೇಟ್‌ ಬಳಿ ಸರ್ಕಾರಿ ಆದರ್ಶ ವಿದ್ಯಾಲಯಗಳ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಲಿದ್ದಾರೆ ಎಂದರು. ಹರದನಹಳ್ಳಿಯಲ್ಲಿ ನಿರ್ಮಿಸಿರುವ 6 ಹಾಸ್ಟೆಲ್‌ ಕಟ್ಟಡ ಸೇರಿದಂತೆ ಒಟ್ಟು 11 ಹಾಸ್ಟೆಲ್‌ ಕಟ್ಟಡ ಉದ್ಘಾಟಿಸಲಿದ್ದಾರೆ. ₨ 3.72 ಕೋಟಿ ವೆಚ್ಚದಡಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಸುತ್ತುಗೋಡೆ, ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡುವರು. ಮಂಗಲದಲ್ಲಿ ಪಶು ಚಿಕಿತ್ಸಾಲಯ ಹಾಗೂ ಕಾಳನಹುಂಡಿ ಬಳಿ ₨ 14 ಕೋಟಿಯಲ್ಲಿ ನಿರ್ಮಿಸಿರುವ 25 ಟನ್‌ ಸಾಮರ್ಥ್ಯದ 5 ಉಗ್ರಾಣ, ಚಂದಕವಾಡಿಯಲ್ಲಿ ನಿರ್ಮಿಸಿರುವ ವಿದ್ಯುತ್‌ ವಿತರಣಾ ಕೇಂದ್ರ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕಿಗೆ ಕಾರ್ಯಕ್ರಮ ಸೀಮಿತಗೊಳಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್‌ಗಾಗಿ 46 ಸಾವಿರ ಅರ್ಜಿ ಬಂದಿವೆ. ಪರಿಶೀಲನೆ ನಡೆಸಿ ಅರ್ಹರಿಗೆ ಕಾರ್ಡ್‌ ವಿತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಜಿಲ್ಲಾಡಳಿತ ಭವನದ ಮುಂಭಾಗದ ಅಂಬೇಡ್ಕರ್‌ ಪುತ್ಥಳಿಯನ್ನು ಉದ್ಘಾಟಿಸುವುದಿಲ್ಲ. ಅ. 3 ಅಥವಾ 4ರಂದು ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವರು ಜಿಲ್ಲೆಗೆ ಭೇಟಿ ನೀಡಲಿದ್ದು, ಅಂದು ಪುತ್ಥಳಿ ಅನಾವರಣ ಗೊಳಿಸಲಾಗುವುದು ಎಂದರು.

ಖರಾಬು ವಿವಾದ
ಭರಚುಕ್ಕಿ ಪ್ರದೇಶದ ಸತ್ತೇಗಾಲದ ಬಳಿ ಅರಣ್ಯ ಭೂಮಿ ಸರ್ಕಾರಿ ಖರಾಬು ಭೂಮಿಯನ್ನಾಗಿ ಪರಿವರ್ತಿಸಲಾಗಿದೆ ಎಂಬ ಆರೋಪ ಸಂಬಂಧ ಪ್ರಶ್ನೆಗೆ ಉತ್ತರಿಸಿದ ಅವರು, ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದರು.

ಮಹಿಳಾ ಠಾಣೆ
ಜಿಲ್ಲಾ ಕೇಂದ್ರದಲ್ಲಿ ಸಂಚಾರ ಠಾಣೆ ಹಾಗೂ ಮಹಿಳಾ ಪೊಲೀಸ್‌ ಠಾಣೆ ತೆರೆಯಲು ನಿರ್ಧರಿಸಲಾಗಿದೆ. ಕಾರ್ಯಕ್ರಮ ನಡೆಯುವ ವೇಳೆಗೆ ಈ ಎರಡು ಠಾಣೆಗಳಿಗೆ ಅನುಮೋದನೆ ಪಡೆಯಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಆರ್‌. ನರೇಂದ್ರ, ಎಸ್‌. ಜಯಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಿ. ನಾಗಶ್ರೀ, ಉಪಾಧ್ಯಕ್ಷ ಪಿ. ಮಹದೇವಪ್ಪ, ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎಚ್‌. ನರಸಿಂಹಮೂರ್ತಿ ಹಾಜರಿದ್ದರು.

365 ಹಳ್ಳಿಗಳಿಗೆ ಕುಡಿಯುವ ನೀರು
ಚಾಮರಾಜನಗರ: ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯ ಅಂತಿಮ ಅಂದಾಜು ಪಟ್ಟಿ ಸಿದ್ಧಗೊಂಡಿದೆ. ಸಚಿವ ಸಂಪುಟ ಸಭೆಯಲ್ಲಿಟ್ಟು ಅನುಮೋದನೆ ಪಡೆದ ನಂತರ ಯೋಜನೆಗೆ ಚಾಲನೆ ನೀಡಲಾಗುವುದು’ ಎಂದು ಸಚಿವ ಮಹದೇವಪ್ರಸಾದ್‌ ತಿಳಿಸಿದರು.

ಚಾಮರಾಜನಗರ ತಾಲ್ಲೂಕಿನ 234 ಹಳ್ಳಿಗಳಿಗೆ ₨ 214 ಕೋಟಿ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ 131 ಹಳ್ಳಿಗಳಿಗೆ ₨ 148.98 ಕೋಟಿ ವೆಚ್ಚದಡಿ ನದಿಮೂಲದಿಂದ ಕುಡಿಯುವ ನೀರು ಪೂರೈಸುವ ಯೋಜನೆಗೆ ಅಂದಾಜುಪಟ್ಟಿ ಸಿದ್ಧಗೊಂಡಿದೆ. ಹೆಚ್ಚುವರಿ ಅನುದಾನಕ್ಕೆ ಸಂಪುಟದ ಅನುಮೋದನೆ ಪಡೆದು ಟೆಂಡರ್‌ ಕರೆಯಲಾಗುವುದು ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 50ರಿಂದ 60 ಕಿ.ಮೀ. ಉದ್ದದ ಜಿ. ಪಂ. ರಸ್ತೆಯನ್ನು ಎಂಡಿಆರ್‌ ರಸ್ತೆಯಾಗಿ ಮೇಲ್ದರ್ಜೆ ಗೇರಿಸಲಾಗುವುದು. 20ರಿಂದ 30 ಕಿ.ಮೀ. ಉದ್ದದ ಎಂಡಿಆರ್‌ ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆ ಗೇರಿಸಲು ನಿರ್ಧರಿಸಲಾಗಿದೆ ಎಂದರು.

ಸತ್ತೇಗಾಲದ ವೆಸ್ಲಿ ಸೇತುವೆ ಬಳಿ ಹೆಚ್ಚುವರಿ ಸೇತುವೆ, ಯಡಿಕುರಿಯ ಗ್ರಾಮಕ್ಕೆ ಸಂಪರ್ಕ ಸೇತುವೆ ನಿರ್ಮಾಣ ಹಾಗೂ ಕೊಳ್ಳೇಗಾಲದಲ್ಲಿ ನೂತನ ಪ್ರವಾಸಿ ಮಂದಿರ ನಿರ್ಮಿಸಲಾಗುವುದು ಎಂದರು.

ಬಹಿರಂಗ ಪ್ರಗತಿ ಪರಿಶೀಲನಾ ಸಭೆ
ಚಾಮರಾಜನಗರ: ಅಂದು ಮಧ್ಯಾಹ್ನ 3ಗಂಟೆಗೆ ನಗರದ ಪೊಲೀಸ್ ಮೈದಾನದಲ್ಲಿ ಸಾರ್ವಜನಿಕರು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಅಭಿವೃದ್ಧಿ ಕಾರ್ಯಕ್ರಮ ಸಂಬಂಧ ಸಿದ್ದರಾಮಯ್ಯ ಬಹಿರಂಗ ಪ್ರಗತಿ ಪರಿಶೀಲನಾ ಸಭೆ ಕೂಡ ನಡೆಸಲಿದ್ದಾರೆ.

‘ಜನಸಾಮಾನ್ಯರ ಮುಂದೆಯೇ ಅಭಿವೃದ್ಧಿ ಯೋಜನೆಗಳ ಪರಾಮರ್ಶೆಯ ವಿನೂತನ ಪರಿಕಲ್ಪನೆಗೆ ಚಾಲನೆ ಸಿಗಲಿದೆ’ ಎಂದು ಸಚಿವ ಮಹದೇವಪ್ರಸಾದ್‌ ತಿಳಿಸಿದರು.

ಸಭೆಗೆ ಜಿಲ್ಲೆಯ 120 ಗ್ರಾಮ ಪಂಚಾಯಿತಿ ಅಧ್ಯಕ್ಷರು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಭಾಗವಹಿಸಲು ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗುತ್ತದೆ. ಮತ್ತೊಂದು ಬದಿಯಲ್ಲಿ ನಾಗರಿಕರಿಗೂ ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು.

ಆಡಳಿತದಲ್ಲಿ ಅನುಸರಿಸುತ್ತಿರುವ ಪಾರದರ್ಶಕತೆಯನ್ನು ಮನದಟ್ಟು ಮಾಡುವ ಉದ್ದೇಶದಿಂದ ಈ ವಿಭಿನ್ನ ಪ್ರಗತಿ ಪರಿಶೀಲನಾ ಸಭೆಯನ್ನು ಮುಖ್ಯಮಂತ್ರಿ ಅವರು ನಡೆಸಲಿದ್ದಾರೆ ಎಂದು ವಿವರಿಸಿದರು.ಸಭೆಗೆ ಸಚಿವರಾದ ವಿ. ಶ್ರೀನಿವಾಸಪ್ರಸಾದ್, ಡಾ.ಎಚ್.ಸಿ. ಮಹದೇವಪ್ಪ, ಎಚ್.ಕೆ. ಪಾಟೀಲ್ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.