ADVERTISEMENT

ಜಿಲ್ಲಾಧಿಕಾರಿ ಕಚೇರಿ ಅವ್ಯವಹಾರ: ಆರೋಪಿ ಬಂಧನ

ಚೆಕ್‌ಗೆ ಎಡಿಸಿ ನಕಲಿ ಸಹಿ ಹಾಕಿ ಹಣ ವರ್ಗಾವಣೆ; ₹1.24 ಕೋಟಿಗೆ ಏರಿದ ಮೊತ್ತ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 6:31 IST
Last Updated 28 ಮಾರ್ಚ್ 2023, 6:31 IST

ಚಾಮರಾಜನಗರ: ಜಿಲ್ಲಾಧಿಕಾರಿ ಕಚೇರಿಯ ಆಡಳಿತ ಶಾಖೆಯ ಬ್ಯಾಂಕ್‌ ಖಾತೆಯ ಚೆಕ್‌ಗೆ ಹೆಚ್ಚುವರಿ ಜಿಲ್ಲಾಧಿಕಾರಿಯವರ ಸಹಿಯನ್ನು ಫೋರ್ಜರಿ ಮಾಡಿ ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿದ ಆರೋಪಿ ರಾಜೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಆರಂಭದಲ್ಲಿ ₹32.64 ಲಕ್ಷ ಹಣವನ್ನು ಜಿಲ್ಲಾಧಿಕಾರಿ ಅನುಮತಿ ಪಡೆಯದೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಈಗ ಈ ಮೊತ್ತ ₹1.24 ಕೋಟಿಗೆ ಏರಿದೆ.

ಹಣ ವಂಚನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರು ಪಟ್ಟಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು, ಸೋಮವಾರ ಮುಂಜಾನೆ ಬೆಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆದುಕೊಂಡು ಬಂದಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಆಡಳಿತ ಶಾಖೆಯಲ್ಲಿ ರಾಜೇಶ್‌ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.

ADVERTISEMENT

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆಕ್‌ ನಿರ್ವಹಣೆ ಜವಾಬ್ದಾರಿ ಹೊಂದಿದ್ದ ದ್ವಿತೀಯ ದರ್ಜೆ ಸಹಾಯಕಿ ಸೌಮ್ಯ ಅವರನ್ನು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.

ಹಿಂದಿನ ಎಡಿಸಿ ಸಹಿ ಫೋರ್ಜರಿ: ಡಿಸಿ ಕಚೇರಿಯ ಆಡಳಿತ ಶಾಖೆಯು ಗ್ರಾಮೀಣ ರಸಪ್ರಶ್ನೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಎಸ್‌ಬಿಐ ಶಾಖೆಯಲ್ಲಿ ಖಾತೆ ತೆರೆದಿತ್ತು. ಈ ಖಾತೆಯ ಚೆಕ್‌ ಪುಸ್ತಕದಿಂದ 13 ಚೆಕ್‌ ಹಾಳೆಗಳನ್ನು ಬಳಸಿಕೊಂಡು ಹಿಂದಿನ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್‌ ಅವರ ಸಹಿಯನ್ನು ಫೋರ್ಜರಿ ಮಾಡಿ ರಾಜೇಶ್‌ ತಮ್ಮ ಖಾತೆ ಹಾಗೂ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

2022ರ ನವೆಂಬರ್‌ 1ರಿಂದ ಮಾರ್ಚ್‌ 21ರ ನಡುವೆ ಹಣ ವರ್ಗಾವಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಬ್ಯಾಂಕ್‌ ಸಿಬ್ಬಂದಿ ವಿರುದ್ಧ ದೂರು: ಆನಂದ್‌ ಅವರು ವರ್ಗಾವಣೆಗೊಂಡು ಎರಡು ವರ್ಷ ಆಗುತ್ತಾ ಬಂದಿದೆ. ಅವರ ನಕಲಿ ಸಹಿಯನ್ನು ಚೆಕ್‌ಗೆ ಹಾಕಲಾಗಿದೆ. ಎಸ್‌ಬಿಐ ಸಿಬ್ಬಂದಿ ಕೂಡ ಇದನ್ನು ಗಮನಿಸಿಲ್ಲ. ಎಡಿಸಿ ಸಹಿ ಎಂಬ ಕಾರಣಕ್ಕೆ ಹಣ ವರ್ಗಾವಣೆ ಮಾಡಿದ್ದಾರೆ. ಅಲ್ಲಿಯ ಸಿಬ್ಬಂದಿಯಿಂದಲೂ ಲೋಪ ಆಗಿದೆ. ಅವರ ವಿರುದ್ಧವೂ ದೂರು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿ‌ ದೊಡ್ಡರಾಯಪೇಟೆಯ ರಾಜೇಶ್‌ ಬಂಧನವನ್ನು ಪೊಲೀಸರು ಖಚಿತಪಡಿಸಿದ್ದು, ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.

ವಂಚನೆ ಗೊತ್ತಾಗಿದ್ದು ಹೇಗೆ?
100 ಹಾಳೆಯ ಚೆಕ್‌ಪುಸ್ತಕಗಳಲ್ಲಿ ಹಿಂಭಾಗದಿಂದ ಹಾಳೆಗಳನ್ನು ತೆಗೆದು ಹಣ ವರ್ಗಾವಣೆ ಮಾಡಲಾಗಿತ್ತು. ಹಿರಿಯ ಅಧಿಕಾರಿಗಳು ಚೆಕ್‌ ಪುಸ್ತಕವನ್ನು ನೋಡುವ ಸಂದರ್ಭದಲ್ಲಿ ಪುಸ್ತಕದ ಮಧ್ಯದಲ್ಲಿ ಚೆಕ್‌ ಹಾಳೆಗಳನ್ನು ಹರಿಯಲಾಗಿತ್ತು. ಅನುಮಾನ ಬಂದು ಪರಿಶೀಲಿಸಿದಾಗ, ಬ್ಯಾಂಕ್‌ ಖಾತೆಯಿಂದ ಬೇರೆ ಖಾತೆಗಳಿಗೆ ಹೋಗಿರುವುದು ಬೆಳಕಿಗೆ ಬಂತು ಎಂದು ಮೂಲಗಳು ತಿಳಿಸಿವೆ.

‘ಅಷ್ಟೊತ್ತಿಗಾಗಲೇ ಭಾರಿ ಪ್ರಮಾಣದ ಹಣ ವರ್ಗಾವಣೆಯಾಗಿತ್ತು. ಚೆಕ್‌ ಪುಸ್ತಕ ನಿರ್ವಹಿಸುವವರು ಕೂಡ ಇದನ್ನು ಗಮನಿಸಿರಲಿಲ್ಲ. ಅವರು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.