ADVERTISEMENT

74 ಕೇಂದ್ರಗಳಲ್ಲಿ ಆಧಾರ್ ನೋಂದಣಿ

ಆಧಾರ್ ನೋಂದಣಿ, ಪರಿಷ್ಕರಣೆ ಚುರುಕುಗೊಳಿಸಿ: ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:59 IST
Last Updated 26 ಜುಲೈ 2025, 6:59 IST
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಮಟ್ಟದ ಆಧಾರ್ ನೋಂದಣಿ ಸಮನ್ವಯ ಸಮಿತಿ ಸಭೆ ನಡೆಯಿತು
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಮಟ್ಟದ ಆಧಾರ್ ನೋಂದಣಿ ಸಮನ್ವಯ ಸಮಿತಿ ಸಭೆ ನಡೆಯಿತು   

ಚಾಮರಾಜನಗರ: ಜಿಲ್ಲೆಯಲ್ಲಿ ಆಧಾರ್ ನೋಂದಣಿ ಹಾಗೂ ಪರಿಷ್ಕರಣೆ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ಆಧಾರ್ ನೋಂದಣಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಮಕ್ಕಳನ್ನು ಶಾಲೆಗೆ ಸೇರಿಸಲು ಆಧಾರ್ ಅತಿ ಅವಶ್ಯವಾದ ದಾಖಲೆಯಾಗಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ 23, ಗುಂಡ್ಲುಪೇಟೆಯಲ್ಲಿ 11, ಹನೂರು 19, ಕೊಳ್ಳೇಗಾಲದಲ್ಲಿ 14 ಹಾಗೂ ಯಳಂದೂರು ತಾಲ್ಲೂಕಿನ 7 ಸೇರಿದಂತೆ ಜಿಲ್ಲೆಯಲ್ಲಿ 74 ಕೇಂದ್ರಗಳನ್ನು ಆಧಾರ್ ನೋಂದಣಿಗೆ ತೆರೆಯಲಾಗಿದೆ. ನಾಡಕಚೇರಿ, ತಾಲ್ಲೂಕು ಕಚೇರಿ, ಅಟಲ್ ಜೀ ಜನಸ್ನೇಹಿ ಕೇಂದ್ರ, ಬಾಪೂಜಿ ಸೇವಾಕೇಂದ್ರ, ಬಿ.ಎಸ್.ಎನ್.ಎಲ್, ಅಂಚೆಕಚೇರಿ ಹಾಗೂ ಬ್ಯಾಂಕ್‌ಗಳಲ್ಲಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಆಧಾರ್ ನೋಂದಣಿಯಿಂದ ಯಾರೂ ವಂಚಿತರಾಗದಂತೆ ಅಧಿಕಾರಿಗಳು ಜಾಗ್ರತೆ ವಹಿಸಬೇಕು ಎಂದರು.

ADVERTISEMENT

ಜಿಲ್ಲೆಯಲ್ಲಿ 31,000ಕ್ಕೂ ಹೆಚ್ಚು ಅಂಗನವಾಡಿ ಮಕ್ಕಳ ಆಧಾರ್ ನೋಂದಣಿಯಾಗಿಲ್ಲ. ಅಂಗನವಾಡಿ ಮಕ್ಕಳು 5 ವರ್ಷದೊಳಗಿರುವುದರಿಂದ ಪೋಷಕರ ಬಯೋಮೆಟ್ರಿಕ್ ಪಡೆದು ಆಧಾರ್ ನೋಂದಣಿ ಮಾಡಿಸಬೇಕು. ಆಧಾರ್ ನೋಂದಣಿಯಾದ ಬಳಲಿಕ 10 ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಅಪ್‌ಡೇಟ್ ಮಾಡಿಸಬೇಕು. ಜಿಲ್ಲೆಯಲ್ಲಿ ಹಾಡಿ ಪೋಡುಗಳಲ್ಲಿನ ಕೆಲವು ಮಕ್ಕಳಿಗೆ ಜನನ ಪ್ರಮಾಣ ಪತ್ರ ಲಭ್ಯವಿರುವುದಿಲ್ಲ. ಈ ಸಮಸ್ಯೆಗಳನ್ನು ಪರಿಹರಿಸಲು ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ‘ಆಧಾರ್ ಮಾಸ’ ಕಾರ್ಯಕ್ರಮವನ್ನು ಆಂದೋಲನ ಮಾದರಿಯಲ್ಲಿ ಹಮ್ಮಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ಅಂಗನವಾಡಿಗಳನ್ನು ಆಯಾ ಭಾಗದ ಅಂಚೆ ಕಚೇರಿಗಳಿಗೆ ಮ್ಯಾಪಿಂಗ್ ಮಾಡಬೇಕು. ಎಲ್ಲ ಪೋಸ್ಟ್ ಮಾಸ್ಟರ್‌ಗಳಿಗೂ ಆಧಾರ್ ನೋಂದಣಿಯ ಸರ್ಟಿಫೀಕೇಷನ್ ಹಾಗೂ ಬಯೋಮೆಟ್ರಿಕ್ ತರಬೇತಿ ನೀಡಬೇಕು. ಪ್ರತಿ ವಾರ ಒಂದೊಂದು ಅಂಗನವಾಡಿಗೆ ಖುದ್ದು ಭೇಟಿನೀಡಿ ಮಕ್ಕಳಿಗೆ ಆಧಾರ್ ನೋಂದಣಿ ಮಾಡಿಸಬೇಕು. ಈ ಪ್ರಕ್ರಿಯೆ ಸೆ.15ರೊಳಗೆ ಪೂರ್ಣಗೊಳ್ಳಬೇಕು.

3 ವರ್ಷಗಳಿಂದೀಚೆಗೆ ಹುಟ್ಟಿದ ಮಕ್ಕಳ ಪೂರ್ಣ ಮಾಹಿತಿ ಕಲೆ ಹಾಕಿ ಜನನ ಪ್ರಮಾಣ ಪತ್ರ ಲಭ್ಯವಿಲ್ಲದ ಮಕ್ಕಳ ವಿವರವನ್ನು ವಾರದೊಳಗೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಆಧಾರ್ ನೋಂದಣಿ ಕಾರ್ಯವನ್ನು ಚುರುಕುಗೊಳಿಸಲು ನೋಡೆಲ್ ಅಧಿಕಾರಿಗಳಾಗಿ ನೇಮಿಸಿರುವ ಶಿರಸ್ತೇದಾರರು ನಾಡಕಚೇರಿ, ಸಿ.ಎಸ್.ಸಿ ಕೇಂದ್ರಗಳು, ಅಂಚೆ ಕಚೇರಿಗಳು ಹಾಗೂ ಬ್ಯಾಂಕ್‌ಗಳಿಗೆ ಭೇಟಿನೀಡಿ ನೋಂದಣಿ ಪ್ರಕ್ರಿಯೆ ಪರಿಶೀಲಿಸಬೇಕು. ಆಧಾರ್ ನೋಂದಣಿ ನಿರ್ವಹಿಸುವ ನಾಗರಿಕ ಸೇವಾಕೇಂದ್ರಗಳು ಜನಸ್ನೇಹಿಯಾಗಿ ವರ್ತಿಸುಬೇಕು. ಗ್ರಾಮಒನ್ ಕೇಂದ್ರಗಳನ್ನು ಸಕ್ರಿಯಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಡಿಡಿಪಿಐ ರಾಮಚಂದ್ರರಾಜೇ ಅರಸ್, ಬೆಂಗಳೂರಿನ ಯುಐಡಿ ಯೋಜನಾ ವ್ಯವಸ್ಥಾಪಕ ವಿಜಯ್‌ ಕುಮಾರ್, ಯು.ಐ.ಡಿ ರಾಜ್ಯಮಟ್ಟದ ಸಂಯೋಜಕ ಪ್ರಭುಸ್ವಾಮಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಸುರೇಖಾ, ಜಿಲ್ಲಾ ಸಂಯೋಜಕ ಮಧುಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.

10 ವರ್ಷಗಳಿಗೊಮ್ಮೆ ಅಪ್‌ಡೇಟ್‌’

ಆಧಾರ್ ನೋಂದಣಿ ಮಾಡಿಸಿಕೊಂಡವರು ಹತ್ತು ವರ್ಷಗಳಿಗೊಮ್ಮೆ ಅಪ್‌ಡೇಟ್ ಮಾಡಿಸಬೇಕು. ತಪ್ಪಿದಲ್ಲಿ ಪಿಂಚಣಿ ಅಥವಾ ಪಡಿತರ ಚೀಟಿ ನೋಂದಣಿ ಸ್ಥಗಿತವಾಗಲಿದೆ. ಈ ಬಗ್ಗೆ ಸಂಪೂರ್ಣ ವಿವರಗಳನ್ನೊಳಗೊಂಡ ಮಾಹಿತಿ ಫಲಕಗಳನ್ನು ಎಲ್ಲ ಗ್ರಾಮ ಪಂಚಾಯಿತಿ ಕಚೇರಿಗಳ ಮುಂಭಾಗ ಅಳವಡಿಸಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.