ADVERTISEMENT

ಮತಾಂತರ ನಿಷೇಧ ಕಾಯ್ದೆ ಜಾರಿಗೆ ಒತ್ತಾಯ

ಮತಾಂತರ ಯತ್ನ ಆಜಾದ್‌ ಹಿಂದೂ ಸೇನೆ ಖಂಡನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 15:09 IST
Last Updated 11 ಅಕ್ಟೋಬರ್ 2019, 15:09 IST
ಸಿ.ಎಂ.ಶಿವರಾಜ್
ಸಿ.ಎಂ.ಶಿವರಾಜ್   

ಚಾಮರಾಜನಗರ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೆಲವು ಚರ್ಚ್‌ಗಳು ಹಿಂದೂಗಳನ್ನು ಮತಾಂತರ ಮಾಡುತ್ತಿವೆ ಎಂದು ಆರೋಪಿಸಿರುವ ಆಜಾದ್‌ ಹಿಂದೂ ಸೇನೆ ಮುಖಂಡರು, ಇದರ ವಿರುದ್ಧ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾನೂನು ಜಾರಿಗೆ ತರಬೇಕು ಎಂದೂ ಒತ್ತಾಯಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಆಜಾದ್‌ ಸೇನೆಯ ಮುಖಂಡ ಹಾಗೂ ನಗರಸಭಾ ಸದಸ್ಯ ಸಿ.ಎಂ.ಶಿವರಾಜ್‌ ಅವರು, ‘ಕೊಳ್ಳೇಗಾಲ ತಾಲ್ಲೂಕಿನ ಕುಣಗಳ್ಳಿ ಗ್ರಾಮದ ಉಪ್ಪಾರ ಬೀದಿ ಹಾಗೂ ನಾಯಕರ ಬೀದಿಯಲ್ಲಿ ಕ್ರಿಶ್ಚಿಯನ್‌ ಸಮುದಾಯದ ತಂಡವೊಂದು ಗ್ರಾಮಸ್ಥರನ್ನು ಮತಾಂತರ ಮಾಡಲು ಯತ್ನಿಸಿದೆ. ಆರೋಗ್ಯ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಅವರಿಗೆ ಆಮಿಷವೊಡ್ಡಿ ಮುಗ್ಧ ಜನರನ್ನು, ದಲಿತರನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಮಾಡುವ ಯತ್ನವನ್ನು ನಾವು ಖಂಡಿಸುತ್ತೇವೆ’ ಎಂದು ಹೇಳಿದರು.

‘ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ಇದೆ. ಸ್ವತಂತ್ರವಾಗಿ ಬದಲು ಎಲ್ಲರೂ ಅರ್ಹರು. ಹಾಗಿದ್ದರೂ, ಜನರು ಇನ್ನೂ ಗುಲಾಮಿತನದಲ್ಲಿ ಬದುಕಬೇಕು ಎಂಬ ಉದ್ದೇಶದಿಂದ ಮತಾಂತರ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಕುಣಗಳ್ಳಿ ಪ್ರಕರಣವು ಮಾಧ್ಯಮಗಳಲ್ಲಿ ವರದಿಯಾಗಿದೆ.ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಬೇಕಿತ್ತು. ಆದರೆ, ಇನ್ನೂ ದಾಖಲಿಸಿಕೊಂಡಿಲ್ಲ.ಶೀಘ್ರವಾಗಿ ನಾವೇ ದೂರು ನೀಡುತ್ತೇವೆ. ಮತಾಂತರವನ್ನು ಖಂಡಿಸಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆಯನ್ನೂ ನಡೆಸುತ್ತೇವೆ’ ಎಂದರು.

‘ಕ್ರಿಶ್ಚಿಯನ್‌ ಸಂಸ್ಥೆಗಳು ಇದೇ ರೀತಿ ಮತಾಂತರ ಯತ್ನ ಮುಂದುವರಿಸಿದಲ್ಲಿ ನಾವು ಕೂಡ ಕಂಡಾಯಗಳನ್ನು ಚರ್ಚ್‌ಗಳಲ್ಲಿ ಇಟ್ಟು, ಅವರನ್ನು ಮತಾಂತರ ಮಾಡುತ್ತೇವೆ. ರಾಜ್ಯದಾದ್ಯಂತ ಚರ್ಚ್‌ಗಳಿಗೆ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಸಿದರು.

ಆಜಾದ್‌ ಹಿಂದೂ ಸೇನೆಯ ಗೌರವಾಧ್ಯಕ್ಷ ಸುಂದರ್‌ರಾಜ್‌,ಉಪ್ಪಾರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಲಿಂಗರಾಜು, ಉಪಾಧ್ಯಕ್ಷ ನೀಲಶೇಖರ, ಮುಖಂಡ ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.