ADVERTISEMENT

ಹಕ್ಕಿ ಹಬ್ಬ: ಬಿಆರ್‌ಟಿ ಕಾನನದಲ್ಲಿ ಪಕ್ಷಿಗಳ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 16:01 IST
Last Updated 6 ಜನವರಿ 2021, 16:01 IST
ಪಕ್ಷಿ ವೀಕ್ಷಣೆಗೆ ತೆರಳಿದ್ದ ಆದರ್ಶ ಅರಸ್‌ ಅವರ ಕ್ಯಾಮೆರಾದಲ್ಲಿ ಸೆರೆಯಾದ ನೀಲಿ ನೊಣಹಿಡುಕ ಮತ್ತು ಕಂದು ಮರಕುಟಿಗ 
ಪಕ್ಷಿ ವೀಕ್ಷಣೆಗೆ ತೆರಳಿದ್ದ ಆದರ್ಶ ಅರಸ್‌ ಅವರ ಕ್ಯಾಮೆರಾದಲ್ಲಿ ಸೆರೆಯಾದ ನೀಲಿ ನೊಣಹಿಡುಕ ಮತ್ತು ಕಂದು ಮರಕುಟಿಗ    

ಚಾಮರಾಜನಗರ: ಅರಣ್ಯ ಇಲಾಖೆ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ ಜಂಟಿಯಾಗಿ ಬಿಆರ್‌ಟಿ ಅರಣ್ಯದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಏಳನೇ ಹಕ್ಕಿ ಹಬ್ಬದ ಎರಡನೇ ದಿನ ಪಕ್ಷಿ ಕುತೂಹಲಿಗಳು ವಿವಿಧ ಕಾಡಿನ ಹಾದಿಗಳಲ್ಲಿ ಸಂಚರಿಸಿ ಪಕ್ಷಿಗಳ ವೀಕ್ಷಣೆ ಮಾಡಿದರು.

85 ಮಂದಿ ನೋಂದಣಿ ಮಾಡಿಕೊಂಡಿದ್ದು, ತಲಾ ಆರು ಮಂದಿಯ 14 ತಂಡಗಳನ್ನು ಮಾಡಲಾಗಿತ್ತು. ಯಳಂದೂರು ವಲಯ, ಕೆ.ಗುಡಿ ಹಾಗೂ ಬೂದಿಪಡಗ ಪ್ರದೇಶಗಳ ವಿವಿಧ ಕಡೆಗಳಲ್ಲಿರುವ ರಸ್ತೆಗಳಲ್ಲಿ, ಜಲಮೂಲಗಳ ಬಳಿಯಲ್ಲಿ ಪಕ್ಷಿಗಳಿಗಾಗಿ ಹುಡುಕಾಟ ನಡೆಸಿದರು. ಈ ತಂಡಗಳೊಂದಿಗೆ ಅರಣ್ಯ ಇಲಾಖೆಯ ಸಿಬ್ಬಂದಿಯೂ‌ ಜೊತೆಗಿದ್ದರು.

ಕಾಡಿದ ಮಳೆ:ಬೆಳಿಗ್ಗೆ 6.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 6 ಗಂಟೆಯವರೆಗೆ ಪಕ್ಷಿ ವೀಕ್ಷಣೆ ಮಾಡಿ ವಿವರಗಳನ್ನು ದಾಖಲಿಸಿಕೊಂಡರು. ಸಂಜೆ 5 ಗಂಟೆಯ ಹೊತ್ತಿಗೆ ಮಳೆ ಬಂದಿದ್ದರಿಂದ ವೀಕ್ಷಣೆಗೆ ಕೊಂಚ ಅಡಚಣೆಯಾಯಿತು. ಬುಧವಾರ ಚಳಿ ವಾತಾವರಣ ಇದ್ದುದರಿಂದ ಕಡಿಮೆ ಹಕ್ಕಿಗಳು ಕಂಡು ಬಂದವು‌ ಎಂದು ವೀಕ್ಷಣೆಗೆ ತೊಂದರೆಯಾಯಿತು ಎಂದು ವೀಕ್ಷಣೆಗೆ ತೆರಳಿದ್ದವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮೊದಲ ದಿನ ವೀಕ್ಷಣೆಯ ಮಾಹಿತಿಗಳು ಇನ್ನಷ್ಟೇ ಸಿಗಬೇಕಿದೆ. ಹೊಸ ಪ್ರಭೇದಗಳು ಪತ್ತೆಯಾಗಿದೆಯೇ ಎಂಬುದನ್ನು ಪರಿಶೀಲಿಸಿ ಗುರುವಾರ ಮಾಹಿತಿ ನೀಡಲಾಗುವುದು’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ ಕುಮಾರ್‌ ಅವರು ತಿಳಿಸಿದರು.

ವಿಶಿಷ್ಟ ಅನುಭವ: ಪಕ್ಷಿ ವೀಕ್ಷಣೆಗೆ ತೆರಳಿದ್ದ ತಂಡವೊಂದರಲ್ಲಿದ್ದ ಚಾಮರಾಜನಗರದ ಉದ್ಯಮಿ ಆದರ್ಶ್‌ ಅರಸ್‌ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಪಕ್ಷಿ ವೀಕ್ಷಣೆ ಹೊಸ ಅನುಭವ ನೀಡಿದೆ. ಚಳಿಯ ವಾತಾವರಣ ಇದ್ದುದರಿಂದ ಕಡಿಮೆ ಹಕ್ಕಿಗಳು ಕಾಣಿಸಿಕೊಂಡವು. ನಿಗದಿ ಪಡಿಸಿರುವ ಎಲ್ಲ ಸ್ಥಳಗಳಲ್ಲಿ ಸುತ್ತಾಟ ನಡೆಸಿದ್ದೇವೆ. ಬೇರೆ ಕಡೆಯಿಂದ ವಲಸೆ ಬಂದಿದ್ದ ಒಂದೆರಡು ಅಪರೂಪದ ಪಕ್ಷಿಗಳು ಕಾಣಸಿಕ್ಕಿವೆ’ ಎಂದು ಹೇಳಿದರು.

ಗುರುವಾರ ಕೊನೆ: ಮೂರುದಿನಗಳ ಹಕ್ಕಿ ಹಬ್ಬಕ್ಕೆ ಗುರುವಾರ ತೆರೆಬೀಳಲಿದೆ. ಗುರುವಾರವೂ ಬೆಳಿಗ್ಗೆ ಕುತೂಹಲಿಗಳು ಪಕ್ಷಿ ವೀಕ್ಷಣೆಗೆ ತೆರಳಲಿದ್ದಾರೆ. ಬೆಳಿಗ್ಗೆ 11 ಗಂಟೆವರೆಗೆ ಪಕ್ಷಿಗಳನ್ನು ‌ಗುರುತಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.