ಕೊಳ್ಳೇಗಾಲ: ‘ದಾನಗಳಲ್ಲಿ ರಕ್ತದಾನ ಮಹಾದಾನ. ಜನರ ಜೀವ ರಕ್ಷಣೆಗೆ ರಕ್ತ ಅತ್ಯವಶ್ಯಕ, ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ರಕ್ತದಾನ ಮಾಡುವುದರ ಮೂಲಕ ಎಲ್ಲರು ಜನರ ಅಮೂಲ್ಯ ಜೀವ ರಕ್ಷಣೆಗೆ ಮುಂದಾಗಬೇಕು’ ಎಂದು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ವೈದ್ಯ ಡಾ.ಬಸವರಾಜು ಹೇಳಿದರು.
ನಗರದಲ್ಲಿ ಶನಿವಾರ ಡಾ.ಬಿ.ಆರ್ ಅಂಬೇಡ್ಕರ್ ಅವರ 134 ನೇ ಜಯಂತಿ ಅಂಗವಾಗಿ ಭೀಮ ನಗರದ ವೈದ್ಯರ ಬಳಗದಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರದ ಕಾರ್ಯಕ್ರಮ ಉದ್ಘಾಟನೆ ಮಾಡಿ ನಂತರ ಮಾತನಾಡಿದರು.
‘ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳು ಹೆಚ್ಚಾಗಿ ನಡೆಯಬೇಕು. ಕೃತಕವಾಗಿ ಎಲ್ಲವನ್ನು ಸಷ್ಟಿ ಮಾಡಬಹುದು. ಆದರೆ, ರಕ್ತವನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ರಕ್ತದಾನ ಪುಣ್ಯದ ಕೆಲಸವಾಗಿದೆ. ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು. ಇದರಿಂದ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಮನುಷ್ಯರಿಗೆ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ. ಮುಖ್ಯವಾಗಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇತ್ತೀಚಿನ ದಿನದಲ್ಲಿ ರಕ್ತಕ್ಕೆ ಬಹಳ ಬೇಡಿಕೆ ಇದ್ದು, ತುರ್ತು ಪರಿಸ್ಥಿತಿಯಲ್ಲಿ ಒಬ್ಬರ ಜೀವ ಉಳಿಸಿದಂತಾಗುತ್ತದೆ’ ಎಂದರು.
‘ಒಂದು ಪ್ರದೇಶದ ಜನರ ಸರ್ವಾಂಗೀಣ ಅಭಿವೃದ್ಧಿಗೆ ಆರೋಗ್ಯ ಅತ್ಯಂತ ಅವಶ್ಯಕವಾಗಿದೆ. ಪ್ರತಿಯೊಬ್ಬರು ಆರೋಗ್ಯ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕು. ಹಲವು ರೋಗಗಳನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ ಅವುಗಳನ್ನು ಗುಣಪಡಿಸಬಹುದು. ಜನರು ಮತ್ತು ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಸದಾ ಜಾಗತರಾಗಿರಬೇಕು’ ಎಂದರು.
ಆರೋಗ್ಯ ತಪಾಸಣಾ ಶಿಬಿರದಲ್ಲಿ 15ಕ್ಕೂ ಹೆಚ್ಚು ನುರಿತ ತಜ್ಞರು ಇದ್ದು ಸುಮಾರು 1570 ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡರು. ರಕ್ತದಾನ ಶಿಬಿರದಲ್ಲಿ 103 ಮಂದಿ ರಕ್ತದಾನ ಮಾಡಿದರು.
ಶಿಬಿರದಲ್ಲಿ ಡಾ. ರಾಜಶೇಖರ್, ಡಾ. ಲೋಕೇಶ್ವರಿ ಡಾ. ದಿಲೀಪ್, ಡಾ. ಶ್ರೀಧರ್, ಡಾ. ಸಹನಾ, ಮುಖಂಡ ಚಿಕ್ಕ ಮಾಳಿಗೆ, ವರದರಾಜು, ನಟರಾಜು, ಸಿದ್ದಾರ್ಥ, ದಿಲೀಪ್ ಸಿದ್ದಪ್ಪಾಜಿ, ಶಂಕರ್ ಚೇತನ್, ಸಿದ್ದಪ್ಪಾಜಿ, ಕಿರಣ್, ಜೈ ಶಂಕರ್, ಗುರುಮೂರ್ತಿ, ರವಿ, ಮಾದೇಶ್ ಸೇರಿದಂತೆ ಅನೇಕ ಮಂದಿ ಮುಖಂಡರು ಹಾಗೂ ನಿವಾಸಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.