ಯಳಂದೂರು (ಚಾಮರಾಜನಗರ ಜಿಲ್ಲೆ): ಪುರಾಣ ಪ್ರಸಿದ್ಧ ಸ್ಥಳವಾದ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಶನಿವಾರ ವೈಭವದ ಬ್ರಹ್ಮ ರಥೋತ್ಸವ ನಡೆಯಿತು. ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಭಕ್ತಿ ಭಾವಗಳಲ್ಲಿ ಮಿಂದೆದ್ದರು.
ಶಂಖ, ಜಾಗಟೆಯ ಸದ್ದು, ಭಕ್ತರ ಜಯಘೋಷಗಳ ನಡುವೆ ಬ್ರಹ್ಮ ರಥವನ್ನು ಎಳೆದ ಭಕ್ತರು ಧನ್ಯತೆ ಮೆರೆದರು. ರಥ ಸಾಗುವ ಮಾರ್ಗದ ಇಕ್ಕಲಗಳಲ್ಲಿ ಜಮಾಯಿಸಿ ರಂಗನಾಥನ ಸ್ಮರಣೆ ಮಾಡಿದರು. ಈ ವೇಳೆ ಗರುಡ ಪಕ್ಷಿಯು ರಥದ ಸುತ್ತಲೂ ಪ್ರದಕ್ಷಿಣೆ ಹಾಕಿ ಗಮನ ಸೆಳೆಯಿತು.
ಕಬ್ಬು, ಬಾಳೆ, ಹೂ ಮಾಲೆ, ಧವಸ, ಧಾನ್ಯ, ನಾಣ್ಯಗಳನ್ನು ದೇವರಿಗೆ ಸಮರ್ಪಿಸಿ ಸಮೃದ್ಧ ಮಳೆ–ಬೆಳೆಗೆ ಪ್ರಾರ್ಥಿಸಲಾಯಿತು. ನವ ದಂಪತಿಗಳು ರಥಕ್ಕೆ ಹಣ್ಣು, ದವನ ತೂರಿದರು. ಕರ್ಪೂರದಾರತಿ, ಸುಗಂಧ ಕಡ್ಡಿ, ಧೂಪದ ಪರಿಮಳ ರಂಗಪ್ಪನ ಬನವನ್ನು ಆವರಿಸಿಕೊಂಡಿತ್ತು. ದೇವರಿಗೆ ಅರ್ಪಿಸಿದ್ದ ಹೂ, ಹಣ್ಣಿನ ಪ್ರಸಾದಕ್ಕೆ ಭಕ್ತರು ಮುಗಿಬಿದ್ದರು. ರಥಕ್ಕೆ ಉದ್ದಂಡ ನಮಸ್ಕಾರ ಹಾಕಿ ಭಕ್ತಿ ಪ್ರದರ್ಶಿಸಿದರು.
ಬಿಸಿಲ ತಾಪದಿಂದ ಬಸವಳಿದಿದ್ದ ಭಕ್ತರಿಗೆ ನೀರು ಮಜ್ಜಿಗೆ, ಪಾನಕ ವಿತರಿಸಲಾಯಿತು. ವಾಹನಗಳ ದಟ್ಟಣೆ ನಿಯಂತ್ರಿಸಲು ಕ್ಷೇತ್ರಕ್ಕೆ ದ್ವಿಚಕ್ರ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿತ್ತು. ಭಕ್ತರಿಗೆ ಕೆಎಸ್ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.