ಹನೂರು: ತಾಲ್ಲೂಕಿನ ಕಾವೇರಿ ಹಾಗೂ ಮಲೆಮಹದೇಶ್ವರ ವನ್ಯಧಾಮಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು, ದಿನದಿಂದ ದಿನಕ್ಕೆ ಬೆಂಕಿಯ ಕೆನ್ನಾಲಿಗೆ ತನ್ನ ವ್ಯಾಪ್ತಿಯುನ್ನು ವಿಸ್ತರಿಸಿಕೊಳ್ಳುತ್ತಿದೆ.
ಕಳೆದ 15 ದಿನಗಳಿಂದ ಎರಡೂ ವನ್ಯಧಾಮಗಳಲ್ಲೂ ನಿರಂತರವಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಹಗಲು ರಾತ್ರಿಯೆನ್ನದೇ ಬೆಂಕಿ ನಂದಿಸಲು ಶ್ರಮಿಸುತ್ತಿದ್ದರೂ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ. ಇದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಅರಣ್ಯ ಪ್ರದೇಶ ಬೆಟ್ಟ ಗುಡ್ಡಗಳಿಂದ ಕೂಡಿದ್ದು, ಒಂದು ಕಡೆ ಬೆಂಕಿ ನಂದಿಸುತ್ತಿದ್ದಂತೆ ಮತ್ತೊಂದು ಕಡೆ ಬೆಂಕಿ ಕಾಣಿಸಿಕೊಳ್ಳುತ್ತಿದೆ.
ಕಂಟಕವಾದ ಹುಲ್ಲುಗಾವಲು: ಕಳೆದ ವರ್ಷ ಉತ್ತಮ ಮಳೆಯಾದ ಪರಿಣಾಮ ಕುರುಚಲು ಹುಲ್ಲುಗಾವಲು ಇಡೀ ಅರಣ್ಯವನ್ನೇ ವ್ಯಾಪಿಸಿದೆ. ಕಿಡಿಗೇಡಿಗಳು ಒಂದು ಕಡೆ ಬೆಂಕಿ ಕೊಟ್ಟರೇ ಕ್ಷಣ ಮಾತ್ರದಲ್ಲೇ ಸುತ್ತಮುತ್ತಲಿನ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿಕೊಳ್ಳುತ್ತಿದೆ. ಇದರ ಮಧ್ಯೆ ಲಂಟಾನ ಸಸ್ಯಗಳು ಒಣಗಿರುವುದರಿಂದ ಬೆಂಕಿಯ ಜ್ವಾಲೆ ಮತ್ತಷ್ಟು ಹೆಚ್ಚಾಗಿದೆ. ಪೂರ್ವಭಾವಿಯಾಗಿ ಬೆಂಕಿ ತಡೆಗಟ್ಟಲು ಇಲಾಖೆ ಈಗಾಗಲೇ ರಸ್ತೆ ಬದಿ ಹಾಗೂ ಕಾಡಿನ ಒಳಗಡೆ ಬೆಂಕಿ ರೇಖೆಗಳನ್ನು ನಿರ್ಮಿಸಿದ್ದರೂ ಕಿಡಿಗೇಡಿಗಳ ಕೃತ್ಯದಿಂದಾಗಿ ಸಮೃದ್ಧವಾದ ಕಾಡು ಹೊತ್ತಿ ಉರಿಯುತ್ತಿದೆ.
ಎಲ್ಲೆಲ್ಲಿ ಬೆಂಕಿ: ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಬೆಂಕಿ ಈಗ ಫೆಬ್ರವರಿಯಲ್ಲಿ ಕಾಣಿಸಿಕೊಂಡಿದೆ. ಪ್ರತಿ ವರ್ಷದಂತೆ ಕಾವೇರಿ ವನ್ಯಧಾಮದ ಕೊತ್ತನೂರು ವನ್ಯಜೀವಿ ವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಈ ಬಾರಿಯೂ ಬೆಂಕಿ ಕಾಣಿಸಿಕೊಂಡು ಬಾಳಗುಣಸೆ ಬೀಟ್ ಅರಣ್ಯ ಸುಟ್ಟು ಹೋಗಿದೆ. ಹನೂರು ವನ್ಯಜೀವಿ ವಲಯದಲ್ಲಿ ಕಳೆದ ಮೂರು ವರ್ಷಗಳಿಂದಲೂ ಬೆಂಕಿ ಕಾಣಿಸಿಕೊಂಡಿರಲಿಲ್ಲ. ಈ ಬಾರಿ ಬಂಡಳ್ಳಿ ಬೆಟ್ಟ, ಶಾಗ್ಯ ಬೀಟ್‌ನ ಕೆಲವು ಭಾಗಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೌದಳ್ಳಿ ವನ್ಯಜೀವಿ ವಲಯದಲ್ಲೂ ನಿರಂತರವಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಹಿರಿಯ ಅಧಿಕಾರಿಗಳ ಸಮೇತವಾಗಿ ಬೆಂಕಿ ನಂದಿಸುವಲ್ಲಿ ಇಲಾಖೆ ಸಿಬ್ಬಂದಿ ನಿರತರಾಗಿದ್ದಾರೆ.
ಮಲೆಮಹದೇಶ್ವರ ವನ್ಯಧಾಮದ ಹನೂರು ಬಫರ್ ವಲಯದ ಮಹಾಲಿಂಗನಕಟ್ಟೆ, ಬೆಳತ್ತೂರು ಗುಡ್ಡ, ಹೂಗ್ಯಂ ವನ್ಯಜೀವಿ ವಲಯದ ನರೆನ್ ಪಾಳ್ಯ ಅರಣ್ಯ ಪ್ರದೇಶ, ಪಿ.ಜಿ ವನ್ಯಜೀವಿ ವಲಯದ ಸತ್ಯಮಂಗಲ ಅರಣ್ಯಪ್ರದೇಶಗಳು ಅಲ್ಲಲ್ಲಿ ಬೆಂಕಿಗಾಹುತಿಯಾಗಿದೆ. ಕಳೆದ ಐದಾರು ವರ್ಷಗಳಿಂದ ಮಲೆಮಹದೇಶ್ವರ ವನ್ಯಧಾಮದಲ್ಲಿ ಈ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿರಲಿಲ್ಲ. ಬೆಂಕಿ ನಂದಿಸುತ್ತಿದ್ದರೂ ನಿಯಂತ್ರಣಕ್ಕೆ ಬರುತ್ತಲೇ ಇಲ್ಲ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.
ಕಿಡಿಗೇಡಿಗಳಿಂದ ಕೃತ್ಯ: ಅರಣ್ಯದ ರಸ್ತೆ ಬದಿಗಳಲ್ಲಿ ಹಾಗೂ ಅರಣ್ಯದ ಒಳಗೆ ಬೆಂಕಿ ಹಾಕುವುದರಿಂದ ಹೊಸದಾಗಿ ಹುಲ್ಲು ಚಿಗುರುತ್ತದೆ ಎಂಬ ದೃಷ್ಟಿಯಿಂದ ಕಿಡಿಗೇಡಿಗಳು ಕಾಡಿಗೆ ಬೆಂಕಿ ಇಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಅರಣ್ಯದಂಚಿನ ಗ್ರಾಮಗಳಲ್ಲಿ ಗಸ್ತು ಆರಂಭಿಸಲಾಗಿದೆ. ಇದರ ಜತೆಗೆ ಕಾಡಿನಂಚಿನಲ್ಲಿ ಅನುಮಾನಾಸ್ಪದವಾಗಿ ಹಾಗೂ ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡುವರ ಬಗ್ಗೆ ಇಲಾಖೆ ನಿಗಾ ಇರಿಸಿದೆ.
ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ; ಅರಣ್ಯ ಇಲಾಖೆ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಬೆಂಕಿ; ಆತಂಕ ಗ್ರಾಮ, ರಸ್ತೆ ಅಂಚಿನಲ್ಲಿ ಸಿಬ್ಬಂದಿಯಿಂದ ಗಸ್ತು
ಈ ಬಾರಿ ಫೆಬ್ರವರಿಯಲ್ಲೇ ತಾಪಮಾನ ಹೆಚ್ಚಾಗಿದೆ. ಈಗಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಎಲ್ಲೇ ಬೆಂಕಿ ಕಂಡರೂ ಸಿಬ್ಬಂದಿ ನಂದಿಸುತ್ತಿದ್ದಾರೆ. ಅರಣ್ಯದಂಚಿನಲ್ಲೂ ಗಸ್ತು ತಿರುಗುತ್ತಿದ್ದಾರೆ.ಸುರೇಂದ್ರ ಡಿಸಿಎಫ್ ಕಾವೇರಿ ವನ್ಯಧಾಮ
ಕಾಡಿಗೆ ಬೆಂಕಿ ಇಟ್ಟಿದ್ದ ಇಬ್ಬರನ್ನು ಈಗಾಗಲೇ ರಾಮಾಪುರ ವನ್ಯಜೀವಿ ವಲಯದಲ್ಲಿ ಬಂಧಿಸಲಾಗಿದೆ. ಪೊಲೀಸ್ ಇಲಾಖೆ ಸಹಕಾರ ಪಡೆದು ಮತ್ತಷ್ಟು ಕಿಡಿಗೇಡಿಗಳನ್ನು ಬಂಧಿಸಲಾಗುವುದುಕೆ.ಪರಮೇಶ್ ಡಿಸಿಎಫ್ ಮಲೆಮಹದೇಶ್ವರ ವನ್ಯಧಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.