ADVERTISEMENT

ಯಳಂದೂರು: ಗಾಳಿ, ಮಳೆ: ಹಾರಿದ ಶಾಲೆ ಹೆಂಚು

ಸಿನಿಮಾ ನಟರು, ಕವಿಗಳು ಓದಿದ ಯಳಂದೂರು ಶತಮಾನದ ಶಾಲೆ ದುಸ್ಥಿತಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 10:18 IST
Last Updated 10 ಜೂನ್ 2020, 10:18 IST
ಯಳಂದೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಮಾಡು ಇತ್ತೀಚೆಗೆ ಸುರಿದ ಮಳೆ, ಗಾಳಿಗೆ ಉದುರಿಬಿದ್ದಿದೆ
ಯಳಂದೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಮಾಡು ಇತ್ತೀಚೆಗೆ ಸುರಿದ ಮಳೆ, ಗಾಳಿಗೆ ಉದುರಿಬಿದ್ದಿದೆ   

ಯಳಂದೂರು: ಗಾಳಿ, ಮಳೆಗೆ ಪಟ್ಟಣದ ಶತಮಾನ ಪೂರೈಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಹೆಂಚುಗಳು ಹಾರಿ ಬಿದ್ದಿವೆ.

‘ಪೇಟೆ ಪ್ರೈಮರಿ’ ಎಂದೇ ಖ್ಯಾತವಾದ ಶಾಲೆಯೂ ಐತಿಹಾಸಿಕ ಜಹಗೀರ್‌ದಾರ್‌ ಬಂಗಲೆಯಲ್ಲಿ ನಡೆಯುತ್ತಿದೆ. ಆಗಾಗ ಸುರಿಯುತ್ತಿರುವ ಮಳೆಗೆ ಗೋಡೆಯ ಮಣ್ಣು ಮತ್ತು ಇಟ್ಟಿಗೆ ಉದುರುತ್ತಿದ್ದು, ತಳಪಾಯ ಸೇರುತ್ತಿದೆ. ಇದರಿಂದ ಶಾಲೆಯ ಅಕ್ಕಪಕ್ಕದ ಕೊಠಡಿಗಳಿಗೂ ಮಳೆ ನೀರು ಸೇರಿ, ಶಿಥಿಲವಾಗುವ ಆತಂಕ ಪೋಷಕರನ್ನು ಕಾಡುತ್ತಿದೆ.

‘ಶಾಲೆಯಲ್ಲಿ ಸಿನಿಮಾ ನಟ ಅವಿನಾಶ್‌, ಚಲನಚಿತ್ರ ಗೀತ ರಚನೆಕಾರ ಎಂ.ಎನ್.ವ್ಯಾಸರಾವ್ ಹಾಗೂ ಹಲವು ಲೇಖಕರು ಓದಿದ ಐತಿಹಾಸಿಕ ತಾಣ. ಈಗ ದಿನೇ ದಿನೇ ಮಳೆ, ಬಿಸಿಲಿಗೆ ಸೊರಗುತ್ತಿದೆ. ಮಾಡಿನ ಸುತ್ತಲೂ ಸಸಿಗಳು ಬೆಳೆದು, ಗೋಡೆಗಳ ಶಿಥಿಲಗೊಳ್ಳುತ್ತಿವೆ. ಮಕ್ಕಳು ಶಾಲೆಗೆ ಬರುವ ಮೊದಲು ಶಾಲೆಯ ಕಟ್ಟಡದ ದೃಢತೆಯ ಬಗ್ಗೆ ತಜ್ಞರಿಂದ ಪರೀಕ್ಷಿಸಬೇಕು. ನಂತರ ತರಗತಿಗಳನ್ನು ನಡೆಸಬೇಕು’ ಎನ್ನುತ್ತಾರೆ ಎಸ್‌ಡಿಎಂಸಿ ಸದಸ್ಯ ರಾಜು.

ADVERTISEMENT

‘ಇದು ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾದ ಐತಿಹಾಸಿಕ ಕಟ್ಟಡ. ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ಹಾಗಾಗಿ, ಶಿಕ್ಷಣ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಲು ಅವಕಾಶ ಇಲ್ಲ. ಹಾಗಾಗಿ, ಶಾಸಕ ಎನ್‌.ಮಹೇಶ್‌ ಅವರು ಕಟ್ಟಡದ ದುರಸ್ತಿಗಾಗಿ ₹ 18 ಲಕ್ಷ ವೆಚ್ಚದ ಕಾಮಗಾರಿಗೆ ಯೋಜನೆ ರೂಪಿಸಲು ತಿಳಿಸಿದ್ದಾರೆ.

‘ಮಕ್ಕಳ ಮತ್ತು ಶಿಕ್ಷಕರ ಸುರಕ್ಷತೆಯ ದೃಷ್ಟಿಯಿಂದ ಶಾಲೆಯ ಮುಂಭಾಗ ಮತ್ತು ಹಿಂಭಾಗದ ಕೊಠಡಿಗಳಲ್ಲಿ ತರಗತಿ ನಡೆಸುವಂತೆ
ಸೂಚಿಸಲಾಗಿದೆ. ಕಟ್ಟಡದ ಮಧ್ಯ ಭಾಗದಲ್ಲಿ ಯಾರು ಪ್ರವೇಶ ಮಾಡದಂತೆ ಸಂಪೂರ್ಣ ಬಂದ್‌ ಮಾಡಲಾಗಿದೆ’ ಎಂದು ಬಿಇಒ ತಿರುಮಲಾಚಾರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.