ADVERTISEMENT

ಸಂತೇಮರಹಳ್ಳಿ: ಬಾಲ್ಯವಿವಾಹದ ಜಾಗೃತಿಗೆ ನಾಟಕದ ಮೊರೆ

ಮಹದೇವ್ ಹೆಗ್ಗವಾಡಿಪುರ
Published 28 ಅಕ್ಟೋಬರ್ 2023, 7:41 IST
Last Updated 28 ಅಕ್ಟೋಬರ್ 2023, 7:41 IST
ಸಂತೇಮರಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ನಾಟಕದ ಮೂಲಕ ಬಾಲ್ಯ ವಿವಾಹದ ವಿರುದ್ಧ ಜಾಗೃತಿ ಮೂಡಿಸಿದರು
ಸಂತೇಮರಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ನಾಟಕದ ಮೂಲಕ ಬಾಲ್ಯ ವಿವಾಹದ ವಿರುದ್ಧ ಜಾಗೃತಿ ಮೂಡಿಸಿದರು   

ಸಂತೇಮರಹಳ್ಳಿ: ಬಾಲ್ಯ ವಿವಾಹ ಜಿಲ್ಲೆಯನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ವಿವಿಧ ಸಮುದಾಯಗಳಲ್ಲಿ 18 ವರ್ಷ ತುಂಬುವ ಮೊದಲೇ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವುದು ಈಗಿನ ದಿನಗಳಲ್ಲೂ ಮುಂದುವರಿದಿದೆ.

ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21 ವರ್ಷವಾದ ನಂತರವಷ್ಟೇ ಮದುವೆ ಮಾಡಬೇಕು ಎಂದು ಕಾನೂನು ಹೇಳುತ್ತದೆ. ಪೋಷಕರ ಅಜ್ಞಾನ, ಮೂಢನಂಬಿಕೆ, ಶಿಕ್ಷಣದ ಕೊರತೆಯಿಂದ ಆಡಿ ಬೆಳೆಯಬೇಕಾದ ವಿದ್ಯಾರ್ಥಿಗಳಿಗೆ ಕದ್ದುಮುಚ್ಚಿ ಮದುವೆ ಮಾಡುತ್ತಿರುವ ಘಟನೆಗಳು ಸಾಮಾಜಿಕ ಸಮಸ್ಯೆಯನ್ನು ಉಂಟು ಮಾಡುತ್ತಿವೆ. 

ಪೋಷಕರು ಮತ್ತು ಮಕ್ಕಳಲ್ಲಿ ಬಾಲ್ಯ ವಿವಾಹದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ನಿರಂತರವಾಗಿ ಪ್ರಯತ್ನಿಸುತ್ತಲೇ ಇವೆ. ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿವೆ. 

ADVERTISEMENT

ಮಕ್ಕಳಲ್ಲಿ ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸಿದರೆ, ಅವರು ಪೋಷಕರಿಗೆ ತಿಳಿ ಹೇಳಿ ಈ ಅನಿಷ್ಟ ಪದ್ಧತಿಗೆ ಕೊನೆ ಹಾಡುವಂತೆ ಮಾಡಬಹುದು ಎಂಬುದು ಸರ್ಕಾರದ ನಿಲುವು. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತಿದೆ. 

ಹೋಬಳಿ ಕೇಂದ್ರದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಬಾಲ್ಯ ವಿವಾಹದ ವಿರುದ್ಧ ನಾಟಕ ಏರ್ಪಡಿಸಲಾಗಿತ್ತು. ಮಕ್ಕಳು ನಾಟಕದಲ್ಲಿ ಲವಲವಿಕೆಯಿಂದ ಅಭಿನಯಿಸಿ ಜನಮನಸೂರೆಗೊಂಡರು.

ಸಂಭಾಷಣೆ ಹಾಗೂ ಹಾಸ್ಯದ ಮೂಲಕ ನಾಟಕ ಪ್ರಸ್ತುತ ಪಡಿಸಿದ ವಿದ್ಯಾರ್ಥಿಗಳು ಬಾಲ್ಯ ವಿವಾಹ ಅಪರಾಧ ಎಂಬ ಸಂದೇಶವನ್ನು ಪೋಷಕರು ಹಾಗೂ ಸಾರ್ವಜನಿಕರಿಗೆ ಸಾರಿದರು. 

ಮಕ್ಕಳು, ವೈದ್ಯರು, ವಕೀಲರು, ಶಿಕ್ಷಕರು, ಜಿಲ್ಲಾಧಿಕಾರಿ, ಪೊಲೀಸ್, ವಿದ್ಯಾರ್ಥಿಗಳಾಗಿ ಲವ ಲವಿಕೆಯಿಂದ ಅಭಿನಯಿಸಿದರು.

ನಾಟಕದ ಆರಂಭ ಮತ್ತು ಅಂತ್ಯದಲ್ಲಿ ಬಳಸಿದ ಸಂಗೀತ ರೂಪಕ ಗಮನ ಸೆಳೆಯಿತು. 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾಟಕದಲ್ಲಿ ಅಭಿನಯಿಸಿದರು.

‘ಇಂತಹ ನಾಟಕಗಳಿಂದ ಶಾಲಾ ವಿದ್ಯಾರ್ಥಿಗಳು ಕೂಡ ಸಮಾಜದಲ್ಲಿ ಬದಲಾವಣೆ ತರಬಹುದು. ಬಾಲ್ಯ ವಿವಾಹಕ್ಕೆ ಏನು ಕಾರಣ, ಅದರಿಂದ ಆಗುವ ಸಾಮಾಜಿಕ, ಕಾನೂನಾತ್ಮಕ, ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳು ಏನೇನು ಎಂಬುದರ ಬಗ್ಗೆ ಅರಿವು ಮೂಡಿತು’ ಎಂದು ವಿದ್ಯಾರ್ಥಿನಿ ಭೂಮಿಕಾ ಹೇಳಿದಳು.

ವಿದ್ಯಾರ್ಥಿಗಳು ನಾಟಕದ ಮೂಲಕ ಜನರಲ್ಲಿ ಬಾಲ್ಯವಿವಾಹದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಶಾಲೆಯಲ್ಲಿ ಇಂತಹ ಪ್ರಯತ್ನ ನಡೆಯುತ್ತಿರುತ್ತದೆ
ಎ.ಶಿವಣ್ಣ ಶಾಲೆಯ ಉಪ ಪ್ರಾಂಶುಪಾಲ
‘ಹೆಚ್ಚು ಪ್ರದರ್ಶನವಾಗಬೇಕು’
‘ಮಕ್ಕಳು ತರಗತಿಯಲ್ಲಿ ಕಲಿಯುವುದರ ಜತೆಗೆ ಪಠ್ಯೇತರ ಚಟುವಟಿಕೆ ಭಾಗವಾಗಿ ರಂಗದ ಮೂಲಕ ಪ್ರಸ್ತುತ ಪಡಿಸಿದ ಬಾಲ್ಯ ವಿವಾಹ ನಾಟಕವು ಸಮಾಜ ಕಾನೂನು ಪಾಲಕರ ಸಮಸ್ಯೆ ಮತ್ತು ಮಕ್ಕಳ ಆಸೆ ಆಕಾಂಕ್ಷೆ ಕಲಿಯುವ ವಯಸ್ಸಿನಲ್ಲಿ ಎದುರಿಸುವ ನೋವು ಸಂಕಟಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದೆ. ಇಂತಹ ನಾಟಕಗಳು ಜಿಲ್ಲೆಯಲ್ಲಿ ಹೆಚ್ಚು ಪ್ರದರ್ಶನಗಳಾಗಬೇಕು. ರಂಗಭೂಮಿ ಮೂಲಕ ಸಾರುವ ಸಂದೇಶ ಪೋಷಕರು ಹಾಗೂ ಸಮಾಜವನ್ನು ಬೇಗ ತಲುಪುತ್ತವೆ’ ಎಂದು ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರೇಣುಕಾದೇವಿ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.