ಹನೂರು: ಪ್ರಸಕ್ತಿ ಶಾಲಿನ ಶೈಕ್ಷಣಿಕ ವರ್ಷಾರಂಭವಾದರೂ ಹನೂರು ಶೈಕ್ಷಣಿಕ ವಲಯದಲ್ಲಿ ಕೆಲವು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಗಳು ಪೂರ್ಣಗೊಳ್ಳದ ಪರಿಣಾಮ ವಿದ್ಯಾರ್ಥಿಗಳು ಶೌಚಕ್ಕೆ ‘ಬಯಲು’ ಆಶ್ರಯಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಶೌಚಾಲಯ ಕಾಮಗಾರಿಗೆ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದ್ದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಎಲ್ಲೆಲ್ಲಿ ಸಮಸ್ಯೆ:
ತಾಲ್ಲೂಕಿನ ಬಂಡಳ್ಳಿ, ಹೊಸಳ್ಳಿ, ರಾಮಾಪುರ ಪ್ರೌಢಶಾಲೆ, ಅಜ್ಜೀಪುರ, ಕೆ.ಗುಂಡಾಪುರ, ಕೂಡಲೂರು, ಅಂತೋಣಿಯರ್ ಕೋಯಿಲ್, ಕಡಬೂರು, ಅಲಗಾಪುರ, ಮೀಣ್ಯ, ಪಳನಿಮೇಡು, ಬಿದರಳ್ಳಿ, ಎಲ್ಲೇ ಮಾಳ, ಉದ್ದನೂರು, ಶಾಗ್ಯ, ಆಂಡಿಪಾಳ್ಯ, ಬಸಪ್ಪನ ದೊಡ್ಡಿ, ಇನ್ನಿತರ ಕಡೆಗಳಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.
ಕೆಲವು ಶಾಲೆಗಳಲ್ಲಿ ಹೆಸರಿಗೆ ಶೌಚಾಲಯ ಇದ್ದರೂ ಬಳಕೆಗೆ ಯೋಗ್ಯವಿಲ್ಲದಷ್ಟು ಹಾಳಾಗಿದೆ. ಅದನ್ನೇ ವಿದ್ಯಾರ್ಥಿನಿಯರು, ಶಿಕ್ಷಕರು ಹಾಗೂ ಶಿಕ್ಷಕಿಯರು ಅನಿವಾರ್ಯವಾಗಿ ಬಳಸುತ್ತಿದ್ದಾರೆ. ಬಾಲಕರು ಶೌಚಕ್ಕೆ ಬಯಲು ಅವಲಂಬಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲು 2021-22ನೇ ಸಾಲಿನಲ್ಲಿ ಅಂದಾಜು ₹ 2.60 ವೆಚ್ಚ ನಿಗದಿ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ₹ 1.30 ಲಕ್ಷ ಅನುದಾನ ಹಾಗೂ ಮಹತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯಿತಿಗಳಿಂದ ಉಳಿಕೆ ₹ 1.30 ಲಕ್ಷ ಅನುದಾನ ಭರಿಸಲು ನಿರ್ಧರಿಸಿ ಕಾಮಗಾರಿ ಆರಂಭಿಸಲಾಗಿತ್ತು.
ಬಳಿಕ 2022-23ರಲ್ಲಿ ಅಂದಾಜು ವೆಚ್ಚ ₹ 5.20 ಲಕ್ಷ ನಿಗದಿಮಾಡಿ ಶಿಕ್ಷಣ ಇಲಾಖೆಯಿಂದ ₹ 2.08 ಲಕ್ಷ ಹಾಗೂ ನರೇಗಾ ಅಡಿಯಲ್ಲಿ ಉಳಿಕೆ ₹ 2.40 ಲಕ್ಷ ಹಣ ಬಳಸಿಕೊಂಡು ಶೌಚಾಲಯ ನಿರ್ಮಿಸುವಂತೆ ಆದೇಶಿಸಲಾಯಿತು.
ಎರಡು ಸಾಲಿನಲ್ಲೂ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ಅನುದಾನ ಬಳಸಿಕೊಂಡು ಕೆಲವು ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಅಡಿಪಾಯ ಮಾತ್ರ ಹಾಕಲಾಗಿದೆ. ಕೆಲವು ಶಾಲೆಗಳಲ್ಲಿ ಗೋಡೆಗಳನ್ನು ಎತ್ತರಿಸಿ ನಿಲ್ಲಿಸಲಾಗಿದೆ. ಅನುದಾನ ಕೊರತೆಯಿಂದ ಕಾಮಗಾರಿ ಪೂರ್ಣಗೊಂಡಿಲ್ಲ.
ಆಯಾ ಗ್ರಾಮ ಪಂಚಾಯಿತಿಗಳು ತಮ್ಮ ಪಾಲಿನ ಅನುದಾನ ನೀಡಲು ನಿರ್ಲಕ್ಷ್ಯ ತೋರುತ್ತಿರುವುದು ಶೌಚಾಲಯಗಳ ಕಾಮಗಾರಿ ವಿಳಂಬಕ್ಕೆ ಕಾರಣ ಎಂದು ಶಾಲೆಯ ಸಿಬ್ಬಂದಿ ದೂರುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಕಾಮಗಾರಿ ಪೂರ್ಣಗೊಳಿಸಬೇಕು, ಇಲ್ಲವಾದರೆ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಎರಡು ವರ್ಷಗಳಿಂದ ನಿಗದಿಯಾಗಿದ್ದ ಅನುದಾನ ಬಿಡುಗಡೆ ವಿಳಂಬ ಕಾಮಗಾರಿ ಪೂರ್ಣಗೊಳ್ಳದೆ ವಿದ್ಯಾರ್ಥಿಗಳ ಪರದಾಟ ಮುಜುಗರಕ್ಕೆ ಒಳಗಾಗುತ್ತಿರುವ ವಿದ್ಯಾರ್ಥಿಗಳು
ನರೇಗಾ ಯೋಜನೆಯಡಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಹನೂರು ತಾಲ್ಲೂಕಿನಲ್ಲಿ ಸಮಸ್ಯೆ ಇದ್ದರೆ ಕೂಡಲೇ ಅನುದಾನ ಬಿಡುಗಡೆಗೆ ಗ್ರಾಮ ಪಂಚಾಯಿತಿಗೆ ಸೂಚನೆ ನೀಡಲಾಗುವುದು–ಶೃತಿ ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ
‘ಕಾಮಗಾರಿ ಆರಂಭವಾಗಿಲ್ಲ’ ಹೂಗ್ಯ ಶಾಲೆಯಲ್ಲಿ 2021-22ನೇ ಸಾಲಿನಲ್ಲಿ ಅನುಮೋದನೆಗೊಂಡ ಕಾಮಗಾರಿ ಪ್ರಾರಂಭವಾಗಿಲ್ಲ ಕುರಟ್ಟಿ ಹೊಸೂರು ಕಾಲೋನಿ ಮಂಗಲ ಪ್ರೌಢಶಾಲೆ ಕೆಂಪಯ್ಯನ ಹಟ್ಟಿ ಶಾಲೆಗಳಲ್ಲಿ 2022-23 ನೇ ಸಾಲಿನ ಕಾಮಗಾರಿ ಆರಂಭವಾಗಿಲ್ಲ. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳು ಇಲ್ಲದೆ ಶೌಚಕ್ಕೆ ಬಯಲನ್ನು ಆಶ್ರಯಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.