ADVERTISEMENT

ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ಸುಖ ಸಮೃದ್ಧಿ ನೆಲೆಸಲು ಮನೆಗಳಲ್ಲಿ ಲಕ್ಷ್ಮಿಯ ಆರಾಧನೆ, ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 3:02 IST
Last Updated 9 ಆಗಸ್ಟ್ 2025, 3:02 IST
ಚಾಮರಾಜನಗರದ ಶಂಕರಪುರ ಬಡಾವಣೆಯಲ್ಲಿ ಗೃಹಿಣಿಯರು ವರಮಹಾಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಂಡಿದ್ದರು
ಚಾಮರಾಜನಗರದ ಶಂಕರಪುರ ಬಡಾವಣೆಯಲ್ಲಿ ಗೃಹಿಣಿಯರು ವರಮಹಾಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಂಡಿದ್ದರು   

ಚಾಮರಾಜನಗರ: ಜಿಲ್ಲೆಯಾದ್ಯಂತ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧಾ, ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಗೃಹಿಣಿಯರು ಸಂಪತ್ತಿನ ಅಧಿದೇವತೆಯಾದ ಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ ಸಲ್ಲಿಸಿದರು. 

ಲಕ್ಷ್ಮಿಯ ಮುಖವಾಡ ಹಾಗೂ ಕಳಶಕ್ಕೆ ಒಪ್ಪವಾಗಿ ಸೀರೆಯನ್ನು ಉಡಿಸಿ, ಗಾಜಿನ ಬಳೆಗಳನ್ನು ತೊಡಿಸಿ, ಚಿನ್ನಾಭರಣಗಳಿಂದ ಸಿಂಗರಿಸಲಾಯಿತು. ಬಾಳೆಯ ದಿಂಡು, ಕಬ್ಬಿನ ಜೊಲ್ಲೆ, ಬಗೆಬಗೆಯ ಹೂಗಳ ಮಾಲೆಗಳಿಂದ ಅಲಂಕರಿಸಲಾಗಿದ್ದ ಮಂಟಪದೊಳಗೆ ಲಕ್ಷ್ಮಿ ಕಂಗೊಳಿಸುತ್ತಿದ್ದ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು.

ನೈವೇದ್ಯಕ್ಕೆ ಪ್ರಸಾದ, ಪಂಚಾಮೃತ ಸಹಿತ ಬಗೆ ಬಗೆಯ ಹಣ್ಣುಗಳು, ಅರಿಶಿನಿ, ಕುಂಕುಮ, ವೀಳ್ಯೆದೆಲೆ ಇರಿಸಲಾಗಿತ್ತು.  ತಟ್ಟೆಯೊಳಗೆ ಚಿನ್ನಾಭರಣ ಹಾಗೂ ನೋಟುಗಳನ್ನಿರಿಸಿ ಲಕ್ಷ್ಮಿ ಕೃಪೆಗೆ ಹಾಗೂ ಮನೆಯೊಳಗ ಸದಾ ಸಮೃದ್ಧಿ ನೆಲೆಸುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ADVERTISEMENT

ಗೃಹಿಣಿಯರು ನೆರೆಹೊರೆಯವರನ್ನು ಪೂಜೆಗೆ ಕರೆದು ಅರಿಶಿನ ಕುಂಕುಮ, ಹೂ, ಬಳೆ, ರವಿಕೆಯನ್ನು ನೀಡಿ ಆಶೀರ್ವಾದ ಪಡೆದರು. ಜಿಲ್ಲೆಯ ಪ್ರಮುಖ ದೇವಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು. ಬೆಳಿಗ್ಗಿನಿಂದಲೇ ಕುಟುಂಬ ಸಹಿತ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು.

ದರ ಏರಿಕೆ ಬಿಸಿ

ವರ ಮಹಾಲಕ್ಷ್ಮಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿತ್ತು. ದೇವಿಯ ಅಲಂಕಾರಕ್ಕೆ ಪ್ರಧಾನವಾಗಿ ಹೂ ಬಳಕೆ ಮಾಡುವುದರಿಂದ ಸೇವಂತಿಗೆ ಮಾರಿಗೆ 200 ಮುಟ್ಟಿತ್ತು. ಏಲಕ್ಕಿ ಬಾಳೆ ದರ 100 ದಾಟಿತ್ತು. ಮಾರುಕಟ್ಟೆಯಲ್ಲಿ ಹೂ ಹಣ್ಣು ಸಹಿತ ಪೂಜಾ ಸಾಮಾಗ್ರಿಗಳ ಖರೀದಿ ಜೋರಾಗಿತ್ತು. ತೆಂಗಿನ ಕಾಯಿ ದರವೂ 50 ರಿಂದ 70ರವರೆಗೆ ಏರಿಕೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.