ADVERTISEMENT

ಭಾರತ ಸಂವಿಧಾನ ಶ್ರೇಷ್ಠ: ಸದಾಶಿವ ಎಸ್.ಸುಲ್ತಾನ್‌ಪುರಿ

ಜಿಲ್ಲಾ ಪಂಚಾಯಿತಿ, ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದಿಂದ ಸಂವಿಧಾನ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 16:44 IST
Last Updated 26 ನವೆಂಬರ್ 2021, 16:44 IST
ಸಂವಿಧಾನ ದಿನಾಚರಣೆಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯೊಬ್ಬಳಿಗೆ ಬಹುಮಾನ ವಿತರಿಸಿದರು. ಜಿ.ಪಂ ಸಿಇಒ ಕೆ.ಎಂ.ಗಾಯತ್ರಿ, ಜಿಲ್ಲಾ ನ್ಯಾಯಿಕ ದಂಡಾಧಿಕಾರಿ ಗಣಪತಿ ಜಿ.ಬಾದಾಮಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌ ಇದ್ದಾರೆ
ಸಂವಿಧಾನ ದಿನಾಚರಣೆಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯೊಬ್ಬಳಿಗೆ ಬಹುಮಾನ ವಿತರಿಸಿದರು. ಜಿ.ಪಂ ಸಿಇಒ ಕೆ.ಎಂ.ಗಾಯತ್ರಿ, ಜಿಲ್ಲಾ ನ್ಯಾಯಿಕ ದಂಡಾಧಿಕಾರಿ ಗಣಪತಿ ಜಿ.ಬಾದಾಮಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌ ಇದ್ದಾರೆ   

ಚಾಮರಾಜನಗರ: ‘ಸಮಾನತೆಯ ಆಧಾರದಲ್ಲಿ ಸರ್ವರ ಏಳಿಗೆಗೆ ನೆರವಾಗುವ ದೇಶದ ಸಂವಿಧಾನವು ವಿಶ್ವದ ಎಲ್ಲ ಸಂವಿಧಾನಕ್ಕಿಂತ ಶ್ರೇಷ್ಠವಾಗಿದೆ’ ಎಂದು ಜಿಲ್ಲಾಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾಶಿವ ಎಸ್.ಸುಲ್ತಾನ್‌ಪುರಿ ಶುಕ್ರವಾರ ಇಲ್ಲಿ ಪ್ರತಿಪಾದಿಸಿದರು.

ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಪ್ರತಿ ವರ್ಷ ನ.26ರಂದು ಸಂವಿಧಾನ ದಿನ ಆಚರಿಸಲಾಗುತ್ತದೆ. ಭಾರತ ಒಂದು ಜಾತ್ಯತೀತ ರಾಷ್ಟ್ರವಾಗಿದ್ದು, ಎಲ್ಲ ವರ್ಗದವರಿಗೂ ಸಂವಿಧಾನದಲ್ಲಿ ಸಮಾನವಕಾಶ ಕಲ್ಪಿಸಲಾಗಿದೆ. ಸಂವಿಧಾನದ ಕರಡು ಸಮಿತಿ ಅಧ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್‌ ವಿವಿಧ ದೇಶಗಳ ಸಂವಿಧಾನವನ್ನು ಸುದೀರ್ಘ ಅಧ್ಯಯನ ಮಾಡಿ, ದೇಶಕ್ಕೆ ಸರ್ವಶ್ರೇಷ್ಠವಾದ ಸಂವಿಧಾನ ರಚಿಸಿದ್ದಾರೆ’ ಎಂದರು.

‘ಸಂವಿಧಾನದ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಎಲ್ಲರೂ ಪಾಲಿಸಿ ಗೌರವಿಸಬೇಕು. ಸಂವಿಧಾನವು ದೇಶದ ಎಲ್ಲರಿಗೂ ತಾಯಿ ಬೇರು ಇದ್ದ ಹಾಗೆ. ಮಕ್ಕಳು, ವಿದ್ಯಾರ್ಥಿಗಳು ಅಂಬೇಡ್ಕರ್‌ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು’ ಎಂದು ಅವರು ಕರೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಗಣಪತಿ ಜಿ.ಬಾದಾಮಿ ಮಾತನಾಡಿ, ‘ಬ್ರಿಟಿಷರು ಭಾರತ ಬಿಟ್ಟ ಮೇಲೆ ಈ ದೇಶಕ್ಕೆ ನಮ್ಮದೇ ಆದ ಕಾನೂನು ಸುವ್ಯವಸ್ಥೆ, ಪ್ರಜಾಸತ್ತಾತ್ಮಕ ವ್ಯವಸ್ಥೆ ಬೇಕಾಗಿತ್ತು. ಯಾವ ರೀತಿಯ ಆಡಳಿತ ನಡೆಸಬೇಕು ಎಂಬುದರ ಬಗ್ಗೆ ದಿಕ್ಸೂಚಿ ಇಲ್ಲದಂತಹ ಸಂದರ್ಭದಲ್ಲಿ ಸಂವಿಧಾನ ಕರಡು ಸಮಿತಿ ರಚಿಸಿ ಅಂಬೇಡ್ಕರ್‌ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು’ ಎಂದರು.

ADVERTISEMENT

‘ಇಂದು ದೇಶದಲ್ಲಿ ಭ್ರಾತೃತ್ವದ ಭಾವನೆ ಬೆಳೆಯಲು, ಎಲ್ಲರೂ ಒಂದೇ ಎಂಬ ಒಗ್ಗಟ್ಟಿಗೆ ಕಾರಣ ಸಂವಿಧಾನ. ಆರ್ಥಿಕ, ಧಾರ್ಮಿಕ, ಸಾಮಾಜಿಕ ಮತ್ತು ಶಿಕ್ಷಣದ ಹಕ್ಕು ಸೇರಿದಂತೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲನ್ನು ಸಂವಿಧಾನ ನೀಡಿದೆ’ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಮಾತನಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ನ್ಯಾಯಾಧೀಶ ಸದಾಶಿವ ಎಸ್.ಸುಲ್ತಾನ್‌ಪುರಿ ಸಂವಿಧಾನ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು.

ಸಂವಿಧಾನ ದಿನಾಚರಣೆ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ಶಾಲಾ ಮಕ್ಕಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ, ಆಶುಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.