ADVERTISEMENT

ಹನೂರು | ಬಾಯಿಬೀಗ ಹಾಕಿಸಿಕೊಂಡು ಹರಕೆ ಸಲ್ಲಿಸಿದ ಭಕ್ತರು

ಹನೂರು: ಬೆಟ್ಟಳ್ಳಿ ಮಾರಮ್ಮನ ಜಾತ್ರೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 15:06 IST
Last Updated 3 ಏಪ್ರಿಲ್ 2024, 15:06 IST
ಹನೂರು ಪಟ್ಟಣದಲ್ಲಿ ಬುಧವಾರ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ ಅಂಗವಾಗಿ ಭಕ್ತರು ಬಾಯಿಬೀಗ ಹಾಕಿಸಿಕೊಂಡು ಹರಕೆ ಸಲ್ಲಿಸಿದರು
ಹನೂರು ಪಟ್ಟಣದಲ್ಲಿ ಬುಧವಾರ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ ಅಂಗವಾಗಿ ಭಕ್ತರು ಬಾಯಿಬೀಗ ಹಾಕಿಸಿಕೊಂಡು ಹರಕೆ ಸಲ್ಲಿಸಿದರು   

ಹನೂರು: ಪಟ್ಟಣದಲ್ಲಿ ಎರಡು ದಿನಗಳಿಂದ ವಿಜೃಂಭಣೆಯಿಂದ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಜಾತ್ರೆಯ ಅಂಗವಾಗಿ ಮೂರನೇ ದಿನವಾದ ಬುಧವಾರ ಹರಕೆ ಹೊತ್ತ ಭಕ್ತರು ದೊಡ್ಡ ಹಾಗೂ ಚಿಕ್ಕ ಬಾಯಿ ಬೀಗ ಹಾಕಿಸಿಕೊಳ್ಳುವ ಮೂಲಕ ಭಕ್ತಿ ಮೆರೆದರು.

ಬಾಯಿಬೀಗ ಹಾಕಿಸಿಕೊಳ್ಳುವ ಭಕ್ತರು ಒಂದು ವಾರದಿಂದ ಬೆಟ್ಟಳ್ಳಿ ಮಾರಮ್ಮ ದೇವಾಲಯ, ಮೈಸೂರು ಮಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ಸಂಪ್ರಾದಾಯಿಕ ವಿಧಿ ವಿಧಾನಗಳೊಂದಿಗೆ ದೊಡ್ಡ ಬಾಯಿ ಬೀಗವನ್ನು ಹಾಕಿಸಿಕೊಂಡು ಸುಮಾರು ಎರಡು ಕಿಲೋಮೀಟರ್‌ ದೂರದಲ್ಲಿರುವ ಬೆಟ್ಟಳ್ಳಿ ಮಾರಮ್ಮ ದೇವಾಲಯದವರೆಗೆ ಬಿರುಬಿಸಿಲಿನ ಬೇಗೆ, ದೈಹಿಕ ಬಾಧೆಯನ್ನು ಲೆಕ್ಕಿಸದೆ ಭಕ್ತಿ ಭಾವದೊಂದಿಗೆ ಹೆಜ್ಜೆ ಹಾಕಿ ತಮ್ಮ ಹರಕೆ ಇಷ್ಟಾರ್ಥವನ್ನು ನೆರವೇರಿಸಿದರು.

ತಮಿಳುನಾಡು ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಬಾಯಿಬೀಗ ಸೇವೆಯನ್ನು ಕಣ್ತುಂಬಿಕೊಂಡರು. ಈ ಬಾರಿ 12 ಮಹಿಳೆಯರು, 104 ಪುರುಷರು ಸೇರಿ ಒಟ್ಟು 116 ಭಕ್ತರು ಬಾಯಿಬೀಗ ಹಾಕಿಸಿಕೊಳ್ಳುವ ಮೂಲಕ ತಮ್ಮ ಹರಕೆ ಕಾಣಿಕೆ ಸಲ್ಲಿಸಿದರು. ಬಾಯಿ ಬೀಗ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ಕೊಳ್ಳೇಗಾಲ ಮಲೆಮಹದೇಶ್ವರ ಬೆಟ್ಟ ಮುಖ್ಯ ರಸ್ತೆ, ಬಂಡಳ್ಳಿ ಮಣಗಳ್ಳಿ ಮುಖ್ಯ ರಸ್ತೆಗಳಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.

ADVERTISEMENT

ಗಮನಸೆಳೆದ ಬಾಯಿಬೀಗ ರಥ: ಪ್ರಪ್ರಥಮ ಬಾರಿಗೆ ಬೆಟ್ಟಳ್ಳಿ ಮಾರಮ್ಮ ಅವರ ರಥೋತ್ಸವದ ಮಾದರಿಯಲ್ಲಿ ರಚನೆ ಮಾಡಲಾದ ತೇರನ್ನು ಹರಕೆ ಹೊತ್ತ ಭಕ್ತರೊಬ್ಬರು ಭುಜದ ಕೆಳಗೆ ಸಲಾಕೆ ಸಿಕ್ಕಿಸಿಕೊಂಡು ಎಳೆಯುವ ಮೂಲಕ ಭಕ್ತಿಯ ಪರಕಾಷ್ಠೆ ಮೆರೆದರು.

ಭಕ್ತರೊಬ್ಬರು ಬೆನ್ನಿಗೆ ಕಬ್ಬಿಣದ ಸಲಾಕೆಯನ್ನು ಚುಚ್ಚಿಸಿಕೊಂಡು ರಥದ ಮಾದರಿ ಎಳೆದು ಗಮನಸೆಳೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.