ADVERTISEMENT

ಆಮ್ಲಜನಕ ದುರಂತ | ಸರ್ಕಾರವೇ ಮಾಡಿದ ಕೊಲೆ: ಡಿ.ಕೆ.ಶಿವಕುಮಾರ್‌

ಅಧಿಕಾರಿಗಳು, ಮಂತ್ರಿಗಳ ವಿರುದ್ಧ 302 ಪ್ರಕರಣ ದಾಖಲಿಸಿ, ಬಂಧಿಸುವಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 16:00 IST
Last Updated 27 ಜೂನ್ 2021, 16:00 IST
ಮೇ 2ರಂದು ಕೋವಿಡ್‌ ಆಸ್ಪತ್ರೆಯಲ್ಲಿ ಮೃತಪಟ್ಟ ಕೊಳ್ಳೇಗಾಲದ ಮುಡಿಗುಂಡದ ಜಯ ಶಂಕರ್‌ ಅವರ ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಹಾಗೂ ಇತರರು ಭೇಟಿ ನೀಡಿದರು
ಮೇ 2ರಂದು ಕೋವಿಡ್‌ ಆಸ್ಪತ್ರೆಯಲ್ಲಿ ಮೃತಪಟ್ಟ ಕೊಳ್ಳೇಗಾಲದ ಮುಡಿಗುಂಡದ ಜಯ ಶಂಕರ್‌ ಅವರ ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಹಾಗೂ ಇತರರು ಭೇಟಿ ನೀಡಿದರು   

ಚಾಮರಾಜನಗರ: ‘ಇಲ್ಲಿ ಕೋವಿಡ್‌ ಆಸ್ಪತ್ರೆಯಲ್ಲಿ ಮೇ 2ರಂದು ಸಂಭವಿಸಿದ ಆಮ್ಲಜನಕ ದುರಂತವು ಸರ್ಕಾರವೇ ಮಾಡಿದ ಕೊಲೆ. ಇದಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ಮಂತ್ರಿಗಳ ವಿರುದ್ಧ 302 (ಕೊಲೆ) ಪ್ರಕರಣ ದಾಖಲಿಸಿ ಬಂಧಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಭಾನುವಾರ ಆಗ್ರಹಿಸಿದರು.

ಆಮ್ಲಜನಕ ದುರಂತದಲ್ಲಿ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿ, ಕೆಪಿಸಿಸಿ ವತಿಯಿಂದ ತಲಾ ₹1 ಲಕ್ಷ ಪರಿಹಾರ ನೀಡಿ ಸಾಂತ್ವನ ಹೇಳುವುದಕ್ಕಾಗಿ ಜಿಲ್ಲೆಗೆ ಬಂದಿದ್ದ ಅವರು ದಾರಿಮಧ್ಯೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

‘ರಾಜ್ಯ ಹಾಗೂ ಇಡೀ ದೇಶ ನೋಡಿರುವಂತಹ ದೊಡ್ಡ ದುರ್ಘಟನೆ ಇದು. ಮುಖ್ಯಮಂತ್ರಿ ಅವರು ಈ ಪ್ರಕರಣದಲ್ಲಿ ಒಬ್ಬ ಮಂತ್ರಿಯನ್ನು ಇಲ್ಲವೇ ಒಬ್ಬ ಅಧಿಕಾರಿಯನ್ನು ಹೊಣೆ ಮಾಡಲಿಲ್ಲ. ಮುಖ್ಯಮಂತ್ರಿಯಾಗಲಿ, ಆರೋಗ್ಯ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ. ಮನೆಗೆ ಭೇಟಿ ನೀಡದಿದ್ದರೂ ಪರವಾಗಿರಲಿಲ್ಲ. ಎಲ್ಲರನ್ನೂ ಒಂದೆಡೆ ಸೇರಿಸಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಅವರೊಂದಿಗೆ ಮಾತನಾಡಬಹುದಿತ್ತು. ಅದನ್ನೂ ಮಾಡಿಲ್ಲ.ನಾವು ಇದುವರೆಗೂ ಕಾದು ಕುಳಿತೆವು. ಯಾರೂ ಬರಲಿಲ್ಲ. ಹಾಗಾಗಿ ವಿರೋಧ ಪಕ್ಷದಲ್ಲಿದ್ದರೂ, ನಾವು ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದೇವೆ. ಸಾಂತ್ವನ ಹೇಳುತ್ತಿದ್ದೇವೆ’ ಎಂದರು.

ADVERTISEMENT

‘ಸತ್ತವರ ಕುಟುಂಬದವರನ್ನು ಭೇಟಿ ಮಾಡುತ್ತಿದ್ದೇನೆ. ಅವರ ನೋವುಗಳನ್ನು ಹೇಳಲು ಆಗದು. ಹಲವರಿಗೆ ಇನ್ನೂ ಮರಣ ಪ್ರಮಾಣಪತ್ರ ನೀಡಿಲ್ಲ. ಪ್ರತಿ ದಿನ ಅದಕ್ಕಾಗಿ ಅಲೆದಾಡುತ್ತಿದ್ದಾರೆ’ ಎಂದು ದೂರಿದರು.

ಸತ್ರಸ್ತರಿಗೆ ನೆರವು: ರಾಜ್ಯದಾದ್ಯಂತ ಕೋವಿಡ್‌ನಿಂದ ಮೃತಪಟ್ಟ ಪ್ರತಿಯೊಬ್ಬರ ಮನೆಗೂ ಪಕ್ಷದ ಕಾರ್ಯಕರ್ತರು ಭೇಟಿ ನೀಡಿ ಅವರ ಕಷ್ಟಗಳನ್ನು ಆಲಿಸಲಿದ್ದಾರೆ. ಅರ್ಜಿಯೊಂದರಲ್ಲಿ ಅವರ ವಿವರಗಳನ್ನು ದಾಖಲಿಸಿ, ಅವರ ಕಷ್ಟಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಿದ್ದೇವೆ. ನಾವು ಸಂಗ್ರಹಿಸಿದ ಮಾಹಿತಿಗಳನ್ನು ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿ ತಹಶೀಲ್ದಾರ್‌, ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ’ ಎಂದು ಶಿವಕುಮಾರ್‌ ಹೇಳಿದರು.

ಸಹಜ ಸಾವು: ‘ಕೋವಿಡ್‌ನಿಂದ ಮೃತಪಟ್ಟವರಿಗೆ ಸಹಜ ಸಾವು ಎಂದು ಮರಣ ಪ್ರಮಾಣಪತ್ರ ನೀಡಿದ್ದಾರೆ. ಕೋವಿಡ್‌ ಎಂದು ನಮೂದಿಸಿಲ್ಲ. ಕೋವಿಡ್‌ ಎಂದು ಹೇಳಲು ಸರ್ಕಾರಕ್ಕೆ ನಾಚಿಕೆಯಾಗುತ್ತದೆಯೇ’ ಎಂದು ಅವರು ಪ್ರಶ್ನಿಸಿದರು.

‘ಯಾರಿಗೆ ಅನ್ಯಾಯವಾಗಿದೆಯೋ, ಯಾರಿಗೆ ಸರಿಯಾದ ಮರಣ ಪ್ರಮಾಣ ಪತ್ರ ಸಿಕ್ಕಿಲ್ಲವೋ ಅವರ ಪರವಾಗಿ ಪಕ್ಷ ಹೋರಾಡಲಿದೆ’ ಎಂದು ಅವರು ಹೇಳಿದರು.

‌ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಶಾಸಕರಾದ ಪುಟ್ಟರಂಗಶೆಟ್ಟಿ, ನರೇಂದ್ರ, ಧರ್ಮಸೇನ, ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರನಾಥ್, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ. ಮರಿಸ್ವಾಮಿ, ಮುಖಂಡ ಎ.ಆರ್.ಕೃಷ್ಣಮೂರ್ತಿ ಇದ್ದರು.

‘ಪಕ್ಷದಿಂದಲೇ ಸಾವಿನ ಲೆಕ್ಕ ಪರಿಶೋಧನೆ’
‘ರಾಜ್ಯದಲ್ಲಿ ಜನವರಿ 1 ರಿಂದ ಜೂನ್‌ 13 ರವರೆಗೆ 3,27,975 ಮಂದಿ ಕೋವಿಡ್‌ನಿಂದ ಮೃತಪಟ್ಡಿದ್ದಾರೆ ಎಂದುಸರ್ಕಾರದ ವೆಬ್ ಸೈಟ್‌ನಲ್ಲೇ ಪ್ರಕಟಿಸಲಾಗಿತ್ತು.ಈಗ ಇದನ್ನು ತೆಗೆದುಹಾಕಲಾಗಿದೆ.ಮುಖ್ಯಮಂತ್ರಿ ಕೋವಿಡ್ನಿಂದ ಮೃತಪಟ್ಟವರು ಕೇವಲ 29,000 ಎಂದು ಹೇಳುತ್ತಿದ್ದಾರೆ.ಸರ್ಕಾರವು ಕೋವಿಡ್ನಿಂದಾದ ಸಾವುಗಳನ್ನು ಮುಚ್ಚಿಡುತ್ತಿದೆ.ಇದರಿಂದ ಕೋವಿಡ್‌ನಿಂದ ಮೃತಪಟ್ಟಿರುವವರ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಪಕ್ಷವೇ ಸಾವಿನ ಲೆಕ್ಕಪರಿಶೋಧನೆ ಮಾಡಲಿದೆ’ ಎಂದು ಶಿವಕುಮಾರ್‌ ಹೇಳಿದರು.

ಕಾರ್ಯಕರ್ತರ ಮೇಲೆ ಕೋಪ
ಕೊಳ್ಳೇಗಾಲ:
ಕೋವಿಡ್‌ನಿಂದಾಗಿ ಮೃತಪಟ್ಟ ಹನೂರು ತಾಲ್ಲೂಕಿನ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಂಪಯ್ಯ ಅವರ ಮನೆಗೂ ಡಿ.ಕೆ.ಶಿವಕುಮಾರ್‌ ಅವರು ಪಕ್ಷದ ಇತರ ಮುಖಂಡರೊಂದಿಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಮನೆಯಿಂದ ಹೊರ ಬರುತ್ತಿದ್ದಂತೆ ಡಿಕೆಶಿ ಅಭಿಮಾನಿಗಳು ಜಯ ಘೋಷಣೆಗಳನ್ನು ಕೂಗಿದರು. ನಂತರ ಅವರಿಗೆ ಶಾಲು, ಹಾರ ಹೊದಿಸಿ ಸನ್ಮಾನ ಮಾಡಿದರು. ಇದೇ ಸಂದರ್ಭದಲ್ಲಿ, ‘ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜೈ’ ಎಂದು ಘೋಷಣೆ ಕೂಗಿದರು. ಇದರಿಂದ ಕೋಪಗೊಂಡ ಶಿವಕುಮಾರ್, 'ಏಯ್ ಬಾಯ್ ಮುಚ್ಚು. ಜಾಗ ಖಾಲಿ ಮಾಡು' ಎಂದು ಬೈದು ಕಾರು ಹತ್ತಿ ಹೊರಟರು.

ರಾಜಕೀಯ ಪ್ರಶ್ನೆಗಳಿಗೆ ಮೌನ: ಪಕ್ಷದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ವಿಚಾರದ ಬಗ್ಗೆ ಚರ್ಚೆಯ ಬಗ್ಗೆ ಕೇಳಿದ ಪ್ರಶ್ನೆಗೆ ಶಿವಕುಮಾರ್‌ ಉತ್ತರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.