ಚಾಮರಾಜನಗರ: ದಲಿತ ಸಮುದಾಯಗಳೆಲ್ಲವೂ ಸಂಘಟಿತವಾಗಿ ಒಗ್ಗಟ್ಟಾದರೆ ರಾಜಕೀಯದಲ್ಲಿ ಮುಖ್ಯಮಂತ್ರಿಯೂ ಆಗಬಹುದು, ಪ್ರಧಾನಿಯೂ ಆಗಬಹುದು ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ‘ಕರ್ನಾಟಕ ರಾಜಕಾರಣದಲ್ಲಿ ದಲಿತರಿಗೆ ನ್ಯಾಯ ಸಿಕ್ಕಿದಿಯೇ’ ಎಂಬ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಶಾಸಕರು ‘ಸಮುದಾಯದಲ್ಲಿ ಒಗ್ಗಟ್ಟಿದ್ದಾರೆ ಬೇಡಿಕೆಗಳು ಈಡೇರುತ್ತವೆ.
ದಶಕಗಳ ಹಿಂದೆ ತಂದೆ ಬಿ.ರಾಚಯ್ಯ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಇತ್ತು. ಆದರೆ, ಜತೆಗಿದ್ದ ಸಮುದಾಯದ ಶಾಸಕರ ಒಗ್ಗಟಿನ ಕೊರತೆಯಿಂದ ಮುಖ್ಯಮಂತ್ರಿ ಹುದ್ದೆ ಕೈಗೆಟುಕಲಿಲ್ಲ. ರಾಜ್ಯದ ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ 36 ಶಾಸಕರು ಒಗ್ಗೂಡಿದರೆ ಸುಲಭವಾಗಿ ಅವಕಾಶಗಳನ್ನು ಪಡೆದುಕೊಳ್ಳಬಹುದು. ಆದರೆ, ಕಾಳೆಯುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದಲಿತರಲ್ಲಿ ನಾಯಕತ್ವ ಇದ್ದರೂ ಒಗ್ಗಟ್ಟಿನ ಕೊರತೆ ಕಾಡುತ್ತಿದೆ. ಸಂಘಟಿತವಾಗುವವರೆಗೂ ಅಧಿಕಾರವು ಸಿಗುವುದಿಲ್ಲ, ಸ್ಥಾನಮಾನವೂ ದಕ್ಕುವುದಿಲ್ಲ. ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ದೊರೆಯಲಿ ಎಂದು ಪತ್ರಕರ್ತ ಕೆ.ಶಿವಕುಮಾರ್ ಆಶಿಸಿದರು.
ಕಾರ್ಯಕ್ರಮದ ಅಯೋಜಕ ವೆಂಕಟರಮಣಸ್ವಾಮಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ಮಾಜಿ ಸದಸ್ಯ ನಾಗರಾಜು ಕಮಲ್, ಅರಕಲವಾಡಿ ನಾಗೇಂದ್ರ, ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ, ಮುಖಂಡರಾದ ಪುಟ್ಟಸ್ವಾಮಿ, ಬಸವನಪುರ ರಾಜಶೇಖರ, ರಾಜಶೇಖರ್, ಯರಿಯೂರು ರಾಜಣ್ಣ, ಸುರೇಶ್, ದೊಡ್ಡಿಂದುವಾಡಿ ಸಿದ್ದರಾಜು, ಸೋಮೇಶ್ವರ, ಮಾಧು ಇದ್ದರು.
ರಾಜ್ಯದಲ್ಲಿ ಶೇ 24 ದಲಿತರು’
ನಿವೃತ್ತ ಐಎಫ್‌ಎಸ್ ಅಧಿಕಾರಿ ಡಾ.ಆರ್.ರಾಜು ಮಾತನಾಡಿ ‘2011ರ ಜನಗಣತಿ ಪ್ರಕಾರ ಪರಿಶಿಷ್ಟ ಜಾತಿಯಲ್ಲಿ 1.40 ಕೋಟಿ ಜನಸಂಖ್ಯೆ ಇದೆ. ಪರಿಶಿಷ್ಟ ಪಂಗಡದವರು 45 ಲಕ್ಷ ಇದ್ದಾರೆ. ಎರಡೂ ಸಮುದಾಯಗಳು ಒಟ್ಟಾದರೆ ಜನಸಂಖ್ಯೆ ಒಂದೂವರೆ ಕೋಟಿ ಆಗಲಿದೆ. ರಾಜ್ಯದಲ್ಲಿ ಶೇ 24.25ರಷ್ಟು ದಲಿತರಿದ್ದಾರೆ’ ಎಂದರು. ಪರಿಶಿಷ್ಟ ಜಾತಿ ವರ್ಗಗಳ ಜನರು ಹೆಚ್ಚಿರುವ ರಾಜ್ಯದಲ್ಲೇ ದಲಿತರಿಗೆ ಮುಂದಾಳತ್ವ ಸಿಗದಿರುವುದು ಬೇಸರದ ಸಂಗತಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.