ADVERTISEMENT

ಕಾರ್ಯ‍ಪಡೆ ರಚಿಸಲು ಜಿಲ್ಲಾಧಿಕಾರಿ ಸೂಚನೆ

ನ್ಯೂಯಾರ್ಕ್‌ನಲ್ಲಿ ಹುಲಿಗೆ ಕೋವಿಡ್‌–19 ದೃಢ, ಜಿಲ್ಲೆಯ ವನ್ಯಪ್ರಾಣಿಗಳ ಮೇಲೂ ನಿಗಾ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 15:33 IST
Last Updated 7 ಏಪ್ರಿಲ್ 2020, 15:33 IST
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು   

ಚಾಮರಾಜನಗರ: ‘ನ್ಯೂಯಾರ್ಕ್‌ನ ಮೃಗಾಲಯವೊಂದರಲ್ಲಿ ಹುಲಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿರುವುದರಿಂದ ಜಿಲ್ಲೆಯಲ್ಲೂ ವನ್ಯಜೀವಿಗಳ ಆರೋಗ್ಯದ ಮೇಲೆ ಕಟ್ಟೆಚ್ಚರ ವಹಿಸಬೇಕು. ಇದಕ್ಕಾಗಿ ತಕ್ಷಣವೇ ಕಾರ್ಯಪಡೆ ರಚಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಎರಡು ಹುಲಿಸಂರಕ್ಷಿತ ಪ್ರದೇಶ ಹಾಗೂ ಎರಡು ವನ್ಯಧಾಮಗಳು ಇರುವ ಕಾರಣದಿಂದ ಅವರು ಎಲ್ಲ ರಕ್ಷಿತಾರಣ್ಯಗಳ ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದರು.

‘ನ್ಯೂಯಾರ್ಕ್ ಮೃಗಾಲಯದಲ್ಲಿ ಹುಲಿ ಹಾಗೂ ಕೆಲವು ಸಿಂಹಗಳಲ್ಲಿ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ ಎಂಬ ಬಗ್ಗೆ ವರದಿಯಾಗಿದೆ. ಹೀಗಾಗಿ ಜಿಲ್ಲೆಯಲ್ಲೂ ಅರಣ್ಯದಲ್ಲಿರುವ ಪ್ರಾಣಿಗಳ ಆರೋಗ್ಯದ ಮೇಲೆ ನಿಗಾ ಇರಿಸಲು ಸರ್ಕಾರದಿಂದ ಆದೇಶ ಬಂದಿದೆ. ಜಿಲ್ಲೆಯ ಪ್ರಸಿದ್ಧ ಬಂಡೀಪುರ ಹಾಗೂ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶಗಳು, ಮಲೆ ಮಹದೇಶ್ವರ, ಕಾವೇರಿ ವನ್ಯಜೀವಿ ಧಾಮಗಳು ಸೇರಿದಂತೆ ಜಿಲ್ಲೆಯಲ್ಲಿ 218ಹುಲಿಗಳು ಇವೆ. ಹೀಗಾಗಿ ಹೆಚ್ಚಿನ ಎಚ್ಚರ ಅಗತ್ಯ’ ಎಂದು ಅವರು ಹೇಳಿದರು.

ADVERTISEMENT

‘ಬೆಕ್ಕಿನ ಪ್ರಭೇದದ ಪ್ರಾಣಿಗಳಿಗೆ ಸೋಂಕು ತಗುಲುತ್ತಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಹುಲಿ, ಚಿರತೆ, ಸಿಂಹದಂತಹ ಬೆಕ್ಕಿನ ಜಾತಿಗೆ ಬರುವ ಪ್ರಾಣಿಗಳ ಆರೋಗ್ಯ, ಚಲನವಲನದ ಮೇಲೆ ನಿಗಾ ಇರಿಸಬೇಕು. ರೋಗ ಹರಡದಂತೆ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಪ್ರಾಣಿಗಳ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಬಂಡೀಪುರ ಹುಲಿ ಯೋಜನೆ ನಿರ್ದೇಶಕರ ನೇತೃತ್ವದ ಕಾರ್ಯಪಡೆಯನ್ನು ಕೂಡಲೇ ರಚಿಸಬೇಕು. ಅರಣ್ಯ, ಕಂದಾಯ, ಪಶುಪಾಲನೆ, ಆರೋಗ್ಯ ಇಲಾಖೆ ಅಧಿಕಾರಿಗಳು ಇರುವ ಈ ಕಾರ್ಯಪಡೆ ಸಮಿತಿ ಕೂಡಲೇ ಅಸ್ತಿತ್ವಕ್ಕೆ ಬಂದು ಕಾರ್ಯಾರಂಭ ಮಾಡಬೇಕು’ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

‘ಕಾಡುಪ್ರಾಣಿಗಳ ವರ್ತನೆ ಬಗ್ಗೆ ಪ್ರತಿನಿತ್ಯವು ಗಮನ ಹರಿಸಬೇಕು. ಅರಣ್ಯದಲ್ಲಿ ಅಳವಡಿಸಿರುವ ಕ್ಯಾಮೆರಾ ಟ್ರ್ಯಾಪ್‌ ಹಾಗೂ ಇನ್ನಿತರೆ ಅತ್ಯಾಧುನಿಕ ಸಲಕರಣೆಗಳ ಸಹಾಯದಿಂದ ಪ್ರಾಣಿಗಳ ಚಲನ-ವಲನ ಸಹಜ ಸ್ಥಿತಿ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ಆರೋಗ್ಯದಲ್ಲಿ ವ್ಯತ್ಯಾಸ ಅಥವಾ ಶಂಕಿತ ಪ್ರಕರಣಗಳು ಕಂಡುಬಂದರೆ ಕೂಡಲೇ ಔಷಧೋಪಚಾರ, ಸಂರಕ್ಷಣೆಯ ಕ್ರಮಗಳಿಗೆ ಮುಂದಾಗಬೇಕು. ವನ್ಯಜೀವಿಗಳ ಆರೋಗ್ಯ ಸಂಬಂಧ ನಿಗಾ ವಹಿಸಲು ನೋಡೆಲ್ ಅಧಿಕಾರಿ ನೇಮಕ ಮಾಡಬೇಕು. ಅಲ್ಲದೆ ಯಾವುದೇ ಮಾಹಿತಿ ವಿಷಯ, ಅಲ್ಲದೆ ದೂರುಗಳು, ನೆರವಿಗೆ ಅರಣ್ಯ ಇಲಾಖೆಯ 1926 ಸಂಖ್ಯೆ ಉಚಿತ ದೂರವಾಣಿಗೆ ಕರೆ ಮಾಡಲು ಜಾಗೃತಿ ಮೂಡಿಸಬೇಕು’ ಎಂದರು.

‘ಕಾಡಂಚಿನ ಪ್ರದೇಶಗಳ ವ್ಯಾಪ್ತಿ ಅಥವಾ ಇದರ ಹತ್ತಿರದ ಪ್ರದೇಶದಲ್ಲಿ ಮೇವಿಗಾಗಿ ಜಾನುವಾರುಗಳನ್ನು ಬಿಡುವುದನ್ನು ನಿಲ್ಲಿಸಬೇಕು. ಅರಣ್ಯ ಪ್ರದೇಶಗಳಲ್ಲಿ ಕರ್ತವ್ಯದಲ್ಲಿರುವ ಅರಣ್ಯ ಸಿಬ್ಬಂದಿಗೆ ಆರೋಗ್ಯ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಈಗಾಗಲೇ ಜಿಲ್ಲೆಯ ಎಲ್ಲಾ ಅಭಯಾರಣ್ಯ ಪ್ರದೇಶಗಳಿಗೆ ಪ್ರವಾಸಿಗರು ಪ್ರವೇಶಿಸದಂತೆ ಆದೇಶ ಹೊರಡಿಸಲಾಗಿದೆ. ಅರಣ್ಯ ಸಿಬ್ಬಂದಿ ಪಶು ವೈದ್ಯಕೀಯ, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ನೆರವು ಪಡೆದು ಯಾವುದೇ ಪ್ರಕರಣಗಳಿಗೆ ಅವಕಾಶವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ, ಮಲೆಮಹದೇಶ್ವರ ವನ್ಯಧಾಮದ ಡಿಸಿಎಫ್‌ ವಿ.ಏಡುಕುಂಡಲು, ಬಿಆರ್‌ಟಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಪಶುಪಾಲನೆ ಹಾಗೂ ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ವೀರಭದ್ರಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಸದ್ಯಕ್ಕೆ ಸಫಾರಿ ಬಂದ್‌?

ವನ್ಯಜೀವಿಗಳಿಗೆ ಸೋಂಕು ಹರಡುವುದನ್ನು ತಡೆಯುವುದಕ್ಕಾಗಿ ಪ್ರಾಣಿಗಳೊಂದಿಗೆ ಮನುಷ್ಯರು ಬೆರೆಯುವುದನ್ನು ತಡೆಯಬೇಕು ಎಂದು ಕೇಂದ್ರ ಪ‍ರಿಸರ ಸಚಿವಾಲಯ ಹಾಗೂ ಹುಲಿ ಸಂರಕ್ಷಣಾ ಪ್ರಾಧಿಕಾರ ಹೇಳಿದೆ. ಹಾಗಾಗಿ ಜಿಲ್ಲೆಯ ಬಂಡೀಪುರ ಹಾಗೂ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇನ್ನೂ ಸ್ವಲ್ಪ ಸಮಯ ಸಫಾರಿ ರದ್ದುಪಡಿಸುವ ಸಾಧ್ಯತೆ ಹೆಚ್ಚಿದೆ.

ಈ ಸಂಬಂಧ ‘ಪ್ರಜಾವಾಣಿ’ ಜೊತೆ ಮಾತನಾಡಿರುವ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ, ‘ನ್ಯೂಯಾರ್ಕ್‌ನ ಮೃಗಾಲಯದಲ್ಲಿ ಮನುಷ್ಯರಿಂದಾಗಿಯೇ ಹುಲಿಯಲ್ಲಿ ಸೋಂಕು ಹರಡಿದೆ. ಹಾಗಾಗಿ ಮನುಷ್ಯರು ಹಾಗೂ ಪ್ರಾಣಿಗಳು ಪರಸ್ಪರ ಸಂಪರ್ಕಕ್ಕೆ ಬರಬಾರದು ಎಂದು ಹೇಳಲಾಗಿದೆ. ಮೃಗಾಲಯದಲ್ಲಿ ಇಂತಹ ಸಾಧ್ಯತೆ ಇರುತ್ತದೆ. ನಮ್ಮದು ಅರಣ್ಯ ಇಲ್ಲಿ ಮನುಷ್ಯರು ಪ್ರಾಣಿಗಳ ನಡುವೆ ನೇರ ಸಂಪರ್ಕಕ್ಕೆ ಬರುವುದಿಲ್ಲ. ಸಫಾರಿಗೆ ಹೋದ ಸಂದರ್ಭದಲ್ಲಿ ಮಾತ್ರ ದೂರದಿಂದ ನೋಡುತ್ತೇವೆ. ನಮ್ಮಲ್ಲಿ ಈಗಾಗಲೇ ಸಫಾರಿ ಸ್ಥಗಿತಗೊಳಿಸಲಾಗಿದೆ. ಅದು ಇನ್ನೂ ಸ್ವಲ್ಪ‌ದಿನ ಮುಂದುವರಿಯಬಹುದು’ ಎಂದರು.

‘ಉಳಿದಂತೆ ಯಾರೊಬ್ಬರೂ ಅರಣ್ಯ ಪ್ರವೇಶಿಸುವುದಕ್ಕೆ ನಾವು ಅವಕಾಶ ಕೊಡುತ್ತಿಲ್ಲ. ಅಗತ್ಯವಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಹಾಗಾಗಿ, ಸದ್ಯಕ್ಕೆ ಯಾವುದೇ ಆತಂಕ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.