ADVERTISEMENT

ಬಾಕಿ ಕಬ್ಬು ಅರೆಯಲು ಮೂರು ತಿಂಗಳ ಗಡುವು ನೀಡಿದ ಜಿಲ್ಲಾಧಿಕಾರಿ

ಕಬ್ಬು ಬೆಳೆಗಾರರ ಸಂಘ, ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಸಭೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 16:02 IST
Last Updated 25 ಸೆಪ್ಟೆಂಬರ್ 2020, 16:02 IST
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಅವರು ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ವಿವರಿಸಿದರು
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಅವರು ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ವಿವರಿಸಿದರು   

ಚಾಮರಾಜನಗರ: ಜಿಲ್ಲೆಯಲ್ಲಿ ಹಾಲಿ ಉಳಿದಿರುವ 5,000 ಎಕರೆ ಒಪ್ಪಂದದ ಕಬ್ಬನ್ನು ಮೂರು ತಿಂಗಳ ಒಳಗಾಗಿ ಅರೆದು ಮುಗಿಸಬೇಕು. ಜಿಲ್ಲೆಯ ರೈತರ ಒಪ್ಪಂದದ ಕಬ್ಬಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕಬ್ಬು ಬೆಳೆಗಾರರ ಬೇಡಿಕೆ ಹಾಗೂ ಸಕ್ಕರೆ ಕಾರ್ಖಾನೆಯವರು ಅನುಸರಿಸಬೇಕಾದ ಕ್ರಮಗಳ ಸಂಬಂಧ ಕಬ್ಬು ಬೆಳೆಗಾರರ ಸಂಘದ ಪ್ರತಿನಿಧಿಗಳು, ರೈತ ಮುಖಂಡರು ಹಾಗೂ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯವರ ಪ್ರತಿನಿಧಿಗಳೊಂದಿಗೆ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ.

‘ನಮ್ಮ ಜಿಲ್ಲೆಯ ಕಬ್ಬನ್ನು ಕಟಾವು ಮಾಡದೇ ಹೊರ ಜಿಲ್ಲೆಯ ರೈತರ ಕಬ್ಬನ್ನು ತಂದು ಸಕ್ಕರೆ ಕಾರ್ಖಾನೆಯಲ್ಲಿ ಅರೆಯುತ್ತಿದ್ದಾರೆ’ ಎಂದು ರೈತ ಮುಖಂಡರು ವ್ಯಕ್ತಪಡಿಸಿದ ಆಕ್ಷೇಪಣೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು ‘ಜಿಲ್ಲೆಯ ರೈತರಿಗೆ ಆದ್ಯತೆ ನೀಡಬೇಕು. ಹೊರ ಜಿಲ್ಲೆಯಿಂದ ಕಬ್ಬು ತರುವುದಿದ್ದರೆ ಜಿಲ್ಲಾಧಿಕಾರಿಗಳ ಲಿಖಿತ ಅನುಮತಿ ಪಡೆಯಬೇಕು. ನಂತರವಷ್ಟೇ ಕಬ್ಬನ್ನು ತಂದು ಅರೆಯಬೇಕು. ಅಲ್ಲಿಯವರೆಗೆ ಹೊರ ಜಿಲ್ಲೆಯಿಂದ ಬರುತ್ತಿರುವ ಕಬ್ಬನ್ನು ತಕ್ಷಣವೇ ಸ್ಥಗಿತಗೊಳಿಸಬೇಕು’ ಎಂದು ಸಕ್ಕರೆ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಶರವಣ ಅವರಿಗೆ ಸೂಚಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಹಾಲಿ ಉಳಿದಿರುವ 5,000 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿರುವ ಒಪ್ಪಂದದ ಕಬ್ಬು ಕಟಾವಿಗೆ ಬಾಕಿ ಇದೆ. ಮೊದಲು ಇದನ್ನು ಅರೆಯಬೇಕು.ಒಪ್ಪಂದ ಮತ್ತು ಒಪ್ಪಂದವಿಲ್ಲದ ಎಷ್ಟು ಟನ್ ಕಬ್ಬನ್ನು ಅರೆಯಲಾಗಿದೆ ಎಂಬ ಬಗ್ಗೆ ವರದಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸಕ್ಕರೆ ಕಾರ್ಖಾನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘12 ತಿಂಗಳ ಬಳಿಕಕಟಾವು ಮಾಡುವ ಕಬ್ಬಿಗೆ ನಷ್ಟ ಪರಿಹಾರವನ್ನು ರೈತರಿಗೆಕಾರ್ಖಾನೆ ಆಡಳಿತ ಮಂಡಳಿ ನೀಡಬೇಕು. ಈ ಬಗ್ಗೆ ಆಡಳಿತ ಮಂಡಳಿಯವರು ಚರ್ಚಿಸಿ ವಾರದೊಳಗಾಗಿ ಮಾಹಿತಿ ನೀಡಬೇಕು. ಮಾರ್ಗಸೂಚಿ ಅನುಸಾರ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಮಾತ್ರ ಕಾರ್ಖಾನೆಯವರು ರೈತರಿಂದ ಪಡೆಯಬೇಕೆ ವಿನಾ ಹೆಚ್ಚಿನ ದರವನ್ನು ಪಡೆಯಬಾರದು’ ಎಂದು ಎಂ.ಆರ್.ರವಿ ಅವರು ಸೂಚಿಸಿದರು.

‘ಕಬ್ಬಿನ ಇಳುವರಿ ಲಾಭಾಂಶವನ್ನು ಸರ್ಕಾರವು ಘೋಷಣೆ ಮಾಡಿದ ಕೂಡಲೇ, ಆಯಾಯ ವರ್ಷವೇ ರೈತರಿಗೆ ನೀಡಬೇಕು. ರೈತರು ಮತ್ತು ಕಾರ್ಖಾನೆಯ ದ್ವಿಪಕ್ಷೀಯ ಒಪ್ಪಂದದ ಬಗ್ಗೆ ಆಡಳಿತ ಮಂಡಳಿಯವರಿಂದ ಅನುಮತಿ ಪಡೆದು ವಾರದೊಳಗೆ ಮಾಹಿತಿ ಒದಗಿಸಬೇಕು’ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

‘ವೈಯಿಂಗ್‌ ಬ್ರಿಡ್ಜ್‌ ಅನ್ನು ಕಾರ್ಖಾನೆಯ ಗೇಟಿನ ಮುಂಭಾಗ ಅಳವಡಿಸಿ ಕಬ್ಬು ತೂಕವಾದ ತಕ್ಷಣ ಎಸ್ಎಂಎಸ್ ಮೂಲಕ ರೈತರಿಗೆ ಮಾಹಿತಿ ನೀಡಬೇಕು. ಸೂಚನೆ ಪಾಲಿಸದಿದ್ದಲ್ಲಿ ಜಿಲ್ಲಾಡಳಿತ ವತಿಯಿಂದಲೇ ವೈಯಿಂಗ್‌ ಬ್ರಿಡ್ಜ್‌ ಅಳವಡಿಸಲು ಕ್ರಮವಹಿಸಲಾಗುತ್ತದೆ. ಈ ಬಗ್ಗೆ ಕೂಡಲೇ ಮಾಹಿತಿ ಒದಗಿಸಬೇಕು’ ಎಂದರು.

ಸಕ್ಕರೆ ಕಾರ್ಖಾನೆಯವರು ರೈತರೊಡನೆ ಮಾಡಿಕೊಳ್ಳುವ ಒಪ್ಪಂದದ ಕರಾರು ಪತ್ರವನ್ನು ನೋಂದಣಿ ಅಂಚೆ ಮೂಲಕ ಅಥವಾ ಖುದ್ದು ಮುದ್ದಾಂ ಮೂಲಕ ರೈತರಿಗೆ ತಲುಪಿಸುವ ವ್ಯವಸ್ಥೆಯನ್ನು ತಕ್ಷಣದಿಂದಲೇ ಮಾಡುವಂತೆಯೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೂಚಿಸಿದರು.

ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬಡೋಲೆ, ಆಹಾರ ಇಲಾಖೆಯ ಉಪನಿರ್ದೇಶಕ ಸಿ.ಎನ್. ರುದ್ರಸ್ವಾಮಿ, ಜಂಟಿ ಕೃಷಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು–ಚಾಮರಾಜನಗರ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ತಾಲ್ಲೂಕು ಅಧ್ಯಕ್ಷ ಮಹದೇವಸ್ವಾಮಿ.ಎಚ್.ಮೂಕಳ್ಳಿ, ಕರ್ನಾಟಕ ರಾಜ್ಯ ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಮಹೇಶ್ ಪ್ರಭು, ರೈತ ಮುಖಂಡರಾದ ಹೆಬ್ಬಸೂರು ಬಸವಣ್ಣ, ಪಟೇಲ್ ಶಿವಮೂರ್ತಿ, ಅಣಗಳ್ಳಿ ಬಸವರಾಜು, ನಂಜುಂಡಸ್ವಾಮಿ, ನಾಗರಾಜು, ಬಿ.ಶಾಂತಮಲ್ಲು, ರೈತ ಸಂಘದ ಇತರ ಪ್ರತಿನಿಧಿಗಳು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.