ADVERTISEMENT

ಜಿಲ್ಲಾ ದಸರಾ: ತ್ವರಿತ ಸಿದ್ಧತೆಗೆ ಸೂಚನೆ

ದೀಪಾಲಂಕಾರ ಆಕರ್ಷಕವಾಗಿರಲಿ; ದಸರಾ ಮೆರುಗು ಹೆಚ್ಚಲಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 15:51 IST
Last Updated 28 ಸೆಪ್ಟೆಂಬರ್ 2021, 15:51 IST
ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ, ದಸರಾ ಪೂರ್ವ ಸಿದ್ಧತೆ ಸಂಬಂಧ ಅಧಿಕಾರಿಗಳ ಸಭೆ ನಡೆಸಿದರು 
ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ, ದಸರಾ ಪೂರ್ವ ಸಿದ್ಧತೆ ಸಂಬಂಧ ಅಧಿಕಾರಿಗಳ ಸಭೆ ನಡೆಸಿದರು    

ಚಾಮರಾಜನಗರ: ನಗರದಲ್ಲಿ ಅ.7ರಿಂದ 10ರವರೆಗೆ ನಿಗದಿಯಾಗಿರುವ ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ, ಸಿದ್ಧತಾ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ದಸರಾ ಮಹೋತ್ಸವ ಸಂಬಂಧ ರಚಿಸಲಾಗಿರುವ ವಿವಿಧ ಸಮಿತಿಗಳು ನಡೆಸಿರುವ ಸಿದ್ಧತಾ ಪ್ರಕ್ರಿಯೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ದಸರಾ ಮಹೋತ್ಸವದ ಮೆರುಗು ಹೆಚ್ಚಿಸುವಲ್ಲಿ ಪ್ರಮುಖವಾಗಿರುವ ದೀಪಾಲಂಕಾರವನ್ನು ಆಕರ್ಷಕವಾಗಿ ಮಾಡಲು ಕೂಡಲೇ ಅವಶ್ಯಕ ಸಿದ್ಧತೆಗಳಿಗೆ ಮುಂದಾಗಬೇಕು’ ಎಂದರು.

‘ಪ್ರಮುಖ ವೃತ್ತ, ರಸ್ತೆ, ಕಾರ್ಯಕ್ರಮ ನಡೆಯುವ ದೇವಾಲಯದ ಬಳಿ, ಸುತ್ತಲ ಪ್ರದೇಶಗಳು ಸೇರಿದಂತೆ ಈಗಾಗಲೇ ನಿರ್ಧರಿಸಲಾಗಿರುವ ಸ್ಥಳಗಳಲ್ಲಿ ದೀಪಾಲಂಕಾರವನ್ನು ಅಚ್ಚುಕಟ್ಟಾಗಿ ಕೈಗೊಳ್ಳಬೇಕು. ಸರ್ಕಾರಿ ಕಟ್ಟಡಗಳಿಗೂ ದೀಪಾಲಂಕಾರ ಇರಬೇಕು’ ಎಂದು ಹೇಳಿದರು.

ADVERTISEMENT

‘ಸಾಂಸ್ಖೃತಿಕ ಸಮಿತಿಯು ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆಗೆ ಅವಶ್ಯಕ ಕ್ರಮಗಳಿಗೆ ಮುಂದಾಗಬೇಕು. ಕಲಾ ತಂಡಗಳು, ಕಾರ್ಯಕ್ರಮಗಳ ಆಯ್ಕೆ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಬೇಕು. ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಚಾಮರಾಜೇಶ್ವರ ದೇವಾಲಯದ ಬಳಿಯ ಮುಖ್ಯ ವೇದಿಕೆ ಹಾಗೂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲು ಸಿದ್ಧತೆ ಕೈಗೊಳ್ಳಬೇಕು’ ಎಂದರು.

‘ಕಾರ್ಯಕ್ರಮ ನಡೆಯುವ ಸ್ಥಳಗಳು ನಗರದ ಬೀದಿಗಳು, ಬಡಾವಣೆಗಳಲ್ಲಿ ಸ್ವಚ್ಛತೆಗೆ ವಿಶೇಷ ಗಮನ ನೀಡಬೇಕು. ಪ್ರಮುಖ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳಬೇಕು. ದಸರಾ ಸಂದರ್ಭದಲ್ಲಿ ಪ್ರಮುಖ ಸ್ಥಳ, ವೃತ್ತಗಳನ್ನು ತಳಿರು ತೋರಣಗಳಿಂದ ಸಿಂಗರಿಸಬೇಕು. ತಾಲ್ಲೂಕು ಕೇಂದ್ರಗಳಲ್ಲಿಯೂ ಹಬ್ಬದ ವಾತಾವರಣ ಮೂಡಿ ಬರಬೇಕು. ತಾಲ್ಲೂಕು ಕೇಂದ್ರದ ಪ್ರಮುಖ ಸ್ಥಳ, ವೃತ್ತ, ಸರ್ಕಾರಿ ಕಟ್ಟಡಗಳಿಗೆ ದೀಪಾಲಂಕಾರ ಸಹ ಮಾಡಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ನಾಲ್ಕು ದಿನ ಎಲ್ಲ ಅಗತ್ಯ ವ್ಯವಸ್ಥೆಗಳೊಂದಿಗೆ ಅಚ್ಚುಕಟ್ಟಾಗಿ ದಸರಾ ಮಹೋತ್ಸವ ನೆರವೇರಲು ನಿಯೋಜಿತವಾಗಿರುವ ವಿವಿಧ ಸಮಿತಿಯ ಅಧಿಕಾರಿಗಳು ಸಿದ್ಧತಾ ಕಾರ್ಯಗಳಿಗೆ ತೊಡಗಿಕೊಳ್ಳಬೇಕು. ತ್ವರಿತವಾಗಿ ಎಲ್ಲ ವ್ಯವಸ್ಥೆಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜು, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಶ್ವೇಶ್ವರಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಕೆ.ಗಿರೀಶ್ ವಿವಿಧ ಸಮಿತಿಗೆ ನೇಮಕವಾಗಿರುವ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.