ADVERTISEMENT

ಚಾಮರಾಜನಗರ ದಸರಾಗೆ ಒತ್ತಾಯಿಸಿ ಕರ್ನಾಟಕ ಸೇನಾಪಡೆ ಪ್ರತಿಭಟನೆ

‘ಬೇಡಿಕೆ ಈಡೇರದಿದ್ದರೆ ಪರ್ಯಾಯ ದಸರಾ‘

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 16:05 IST
Last Updated 30 ಜೂನ್ 2025, 16:05 IST
ಚಾಮರಾಜನಗರದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ದಸರಾ ಆಚರಣೆ ಮಾಡಬೇಕು ಎ೦ದು ಒತ್ತಾಯಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು
ಚಾಮರಾಜನಗರದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ದಸರಾ ಆಚರಣೆ ಮಾಡಬೇಕು ಎ೦ದು ಒತ್ತಾಯಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು   

ಚಾಮರಾಜನಗರ: ಚಾಮರಾಜನಗರದಲ್ಲಿ ದಸರಾ ಉತ್ಸವ ಮಾಡುವುದಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಸೋಮವಾರ ಕರ್ನಾಟಕ ಸೇನಾಪಡೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಭುವನೇಶ್ವರಿ ವೃತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಹೆದ್ದಾರಿ ತಡೆದು ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ನೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಚಾಮರಾಜನಗರದಲ್ಲಿ ಮೈಸೂರು ಅರಸರು ನೆಲೆಸಿದ್ದರೇ ? ಅಲ್ಲಿ ದಸರಾ ಮಾಡುವ ಅಗತ್ಯ ಏನಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿರುವುದು ಸರಿಯಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಚಾಮರಾಜನಗರದಲ್ಲಿ ದಸರಾ ಮಹೋತ್ಸವ ಆಚರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಚಾಮರಾಜನಗರ ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿದ್ದು 10ನೇ ಜಯಚಾಮರಾಜೇಂದ್ರ ಒಡೆಯರ್ ಇಲ್ಲಿ ಜನಿಸಿರುವ ಸ್ಮರಣಾರ್ಥ ಜನನ ಮಂಟಪ ನಿರ್ಮಿಸಲಾಗಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ತಂದೆಯ ಸ್ಮರಣಾರ್ಥ ಅರಿಕುಠಾರವಾಗಿದ್ದ ಊರನ್ನು ಚಾಮರಾಜನಗರ ಎಂದು ನಾಮಕರಣ ಮಾಡಿ ಚಾಮರಾಜೇಶ್ವರ ದೇವಾಲಯವನ್ನೂ ನಿರ್ಮಾಣ ಮಾಡಿದ್ದಾರೆ. ಆದರೂ ಮುಖ್ಯಮಂತ್ರಿಗೆ ಇದರ ಬಗ್ಗೆ ಮಾಹಿತಿ ಇಲ್ಲದಿರುವುದು ಬೇಸರದ ಸಂಗತಿ ಎಂದರು.

ಮುಖ್ಯಮಂತ್ರಿಗೆ ಚಾಮರಾಜನಗರದ ಮೇಲೆ ಕಾಳಜಿ ಇದ್ದರೆ ಹೇಳಿಕೆ ವಾಪಸ್ ಪಡೆದು ದಸರಾ ಆಚರಣೆ ಮಾಡಬೇಕು. ಇಲ್ಲದಿದ್ದರೆ ಕನ್ನಡ ಸಂಘಟನೆಗಳಿಂದ ಪರ್ಯಾಯ ದಸರಾ ಮಹೋತ್ಸವ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪಣ್ಯದಹುಂಡಿ ರಾಜು, ನಿಜಧ್ವನಿ ಗೋವಿಂದರಾಜು, ಮಹೇಶ್‌ ಗೌಡ, ಸುರೇಶ್ ವಾಜಪೇಯಿ, ತಾಂಡವಮೂರ್ತಿ, ಮುತ್ತಿಗೆ ಗೋವಿಂದರಾಜು, ಸಿ.ಎಂ.ನರಸಿಂಹಮೂರ್ತಿ, ರವಿಚಂದ್ರಪ್ರಸಾದ್ ಕಹಳೆ, ಲಿಂಗರಾಜು, ರೈತ ಮುಖಂಡರಾದ ನಾಗರಾಜು, ಸಾಗರ್ ರಾವತ್, ಲೋಕೇಶ್, ಚಾ.ಸಿ.ಸಿದ್ದರಾಜು, ಮೂಡ್ಲುಪುರ ಪ್ರಕಾಶ್, ಶಿವು, ಶಾಂತರಾಜು, ಅರುಣ್ ಕುಮಾರ್ ಗೌಡ, ಸುಬ್ರಹ್ಮಣ್ಯ, ಡ್ಯಾನ್ಸ್‌ ಬಸವರಾಜು ಭಾಗವಹಿಸಿದ್ದರು.

ಚಾಮರಾಜನಗರದಲ್ಲಿ ದಸರಾ ಆಚರಣೆ ಮುಂದುವರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ವತಿಯಿಂದ ಸೋಮವಾರ ಜಿಲ್ಲಾಡಳಿತ ಭವನದಲ್ಲಿ ಸಂಸದ ಸುನೀಲ್ ಬೋಸ್ ಅವರಿಗೆ ಮನವಿ ಸಲ್ಲಿಸಲಾಯಿತು
‘ಮುಖ್ಯಮಂತ್ರಿಗೆ ಅರಿವಿನ ಕೊರತೆ: ಆರೋಪ’ ‘ಚಾಮರಾಜನಗರದಲ್ಲಿ ಚಾಮರಾಜೇಂದ್ರ ಒಡೆಯರ್ ಜನನ’ ಅರಸರ ಜನನ ಸ್ಮರಣಾರ್ಥ ಜನನ ಮಂಟಪ ಸ್ಥಾಪನೆ

ಸಂಸದರಿಗೆ ಕರವೇ ಮನವಿ

ಚಾಮರಾಜನಗರದಲ್ಲಿ ದಸರಾ ಆಚರಣೆ ಮುಂದುವರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ವತಿಯಿಂದ ಜಿಲ್ಲಾಡಳಿತ ಭವನದಲ್ಲಿ ಸಂಸದ ಸುನೀಲ್ ಬೋಸ್ ಅವರಿಗೆ ಮನವಿ ಸಲ್ಲಿಸಲಾಯಿತು.‌  ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಸರ್ಕಾರದ ಅನುದಾನದಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ದಸರಾ ನಡೆಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ. ಜಿಲ್ಲೆಯಲ್ಲಿ ದಸರಾ ಆಚರಿಸಿದರೆ ಸ್ಥಳೀಯ ವ್ಯಾಪಾರಿಗಳಿಗೆ ಜನಪದ ಕಲಾವಿದರಿಗೆ ಅನುಕೂಲವಾಗಲಿದೆ. ಮೈಸೂರಿಗೆ ಹೋಗಿ ದಸರಾ ನೋಡಲಾಗದವರು ಜಿಲ್ಲೆಯಲ್ಲೇ ದಸರಾ ವೀಕ್ಷಿಸಿ ತೃಪ್ತಿಪಟ್ಟುಕೊಳ್ಳಲಿದ್ದಾರೆ ಎಂದು ಕರವೇ ತಾಲ್ಲೂಕು ಅಧ್ಯಕ್ಷ ಕ್ವಾಲಿಟಿ ನವೀನ್ ಒತ್ತಾಯಿಸಿದರು. ಈ ಸಂದರ್ಭ ಉಪಾಧ್ಯಕ್ಷ ಅವಿನಾಶ್ ನಗರ ಅಧ್ಯಕ್ಷ ಮಹೇಂದ್ರ ಕಾರ್ಮಿಕ ಘಟಕದ ಅಧ್ಯಕ್ಷ ಹರೀಶ್ ನಾಯಕ ಮಹೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.