ADVERTISEMENT

ಗುಂಡ್ಲುಪೇಟೆ: ಆಸ್ಪತ್ರೆ ‍‘ಡಿ’ ಗ್ರೂಪ್ ನೌಕರರ ವೇತನ ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಮೇ 2025, 14:10 IST
Last Updated 5 ಮೇ 2025, 14:10 IST
ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ವಿವಿಧ ಸಮಸ್ಯೆ ಈಡೇರಿಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ್ ರಿಗೆ ಮನವಿ ಸಲ್ಲಿಸಲಾಯಿತು.
ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ವಿವಿಧ ಸಮಸ್ಯೆ ಈಡೇರಿಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ್ ರಿಗೆ ಮನವಿ ಸಲ್ಲಿಸಲಾಯಿತು.   

ಗುಂಡ್ಲುಪೇಟೆ: ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ತಾತ್ಕಾಲಿಕವಾಗಿ ಮೂಳೆ ವೈದ್ಯರ ನಿಯೋಜನೆ, ‘ಡಿ’ ಗ್ರೂಪ್ ನೌಕರರ ಬಾಕಿ ವೇತನ ಪಾವತಿ, ಡಾಟಾ ಎಂಟ್ರಿ ಆಪರೇಟರ್‌‌‌ಗಳ ನೇಮಕ ಮರು ಪರಿಶೀಲನೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಗುತ್ತಿರುವ ತೊಂದರೆಗಳ ಕುರಿತು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ್ ಚರ್ಚೆ ನಡೆಸಿ, ಅಸಮಾಧಾನ ಹೊರ ಹಾಕಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮೂಳೆ ವೈದ್ಯರು ವೈಯಕ್ತಿಕ ಸಮಸ್ಯೆಯಿಂದ ಮೇ ಮತ್ತು ಜೂನ್ ತಿಂಗಳಲ್ಲಿ ರಜೆ ಹಾಕಿದ್ದಾರೆ. ಇದರಿಂದ ಮೂಳೆಗೆ ಸಂಬಂಧಿಸಿದ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಕ್ಷಣ ಮೂಳೆ ತಜ್ಞರನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡಿ ವಾರದಲ್ಲಿ ಮೂರು ದಿನವಾದರೂ ಆಸ್ಪತ್ರೆಗೆ ಬರುವಂತೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ADVERTISEMENT

‘ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 35 ಮಂದಿ ‘ಡಿ’ ಗ್ರೂಪ್ ನೌಕರರು ಕೆಲಸ ನಿರ್ವಹಿಸುತ್ತಿದ್ದು, ಇವರಿಗೆ 4 ತಿಂಗಳಿನಿಂದ ಮಾಸಿಕ ವೇತನ ಪಾವತಿಸದೆ ವಿಳಂಬ ಮಾಡಲಾಗುತ್ತಿದೆ. ಇದರಿಂದ ಅವರ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ಸಂಬಂಧಪಟ್ಟ ಏಜೆನ್ಸಿಯವರು ತಕ್ಷಣ ನೌಕರರಿಗೆ ವೇತನ ಪಾವತಿಸಬೇಕು’ ಎಂದರು.

‘ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಪ್ರತಿದಿನ ಓ.ಪಿ.ಡಿಯಲ್ಲಿ 800-900 ರೋಗಿಗಳು ಚಿಕಿತ್ಸೆಗಾಗಿ ಬರುತ್ತಿರುವುದರಿಂದ ಈಗ ನಿಯೋಜನೆಯಾಗಿರುವ 5 ಜನ ಡಾಟಾ ಎಂಟ್ರಿ ಆಪರೇಟರ್‌‌‌ಗಳಲ್ಲಿ 4 ಜನರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲು ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮುಖ್ಯ ಆಡಳಿತಾಧಿಕಾರಿಗಳು ಆದೇಶ ಮಾಡಿರುವುದನ್ನು ಪುನರ್ ಪರಿಶೀಲನೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಹೆಚ್ಚು ಡಾಟಾ ಎಂಟ್ರಿ ಆಪರೇಟರ್ ನೇಮಕ ಮಾಡಿಕೊಂಡು ಸಾರ್ವಜನಿಕರಿಗೆ ಆರೋಗ್ಯ ಸೇವೆ ಆಸ್ಪತ್ರೆಯಲ್ಲಿ ಸಿಗುವಂತೆ ಮಾಡಬೇಕು. ಜೊತೆಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನೋಂದಣಿ ಕೌಂಟರ್ ತೆರೆಯಬೇಕು. ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನಾ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹಂಗಳ ದಿಲೀಪ್, ಉಪಾಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಕಾರ್ಯಾಧ್ಯಕ್ಷ ಪುತ್ತನಪುರ ಮಹದೇವಪ್ಪ, ಸದಾನಂದ, ರೇವಣ್ಣ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ರಘು, ಉಪಾಧ್ಯಕ್ಷ ಪ್ರಸಾದ್, ರಂಗಸ್ವಾಮಿ, ಪ್ರವೀಣ್, ರೂಪೇಶ್, ರೈತರು ಹಾಜರಿದ್ದರು.

ಡಾಟಾ ಎಂಟ್ರಿ ಆಪರೇಟರ್‌‌ ಬಿಡುಗಡೆ ಆದೇಶ ಮರುಪರಿಶೀಲನೆಗೆ ಒತ್ತಾಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಳೆ ವೈದ್ಯರ ನೇಮಕಕ್ಕೆ ಆಗ್ರಹ ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆಗೆ ನಿರ್ಧಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.