ಚಾಮರಾಜನಗರ: ‘ಗಡಿನಾಡು ಚಾಮರಾಜನಗರ ಜಿಲ್ಲೆ ಆರೋಗ್ಯ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದ್ದು, ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗಬೇಕು’ ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಒತ್ತಾಯಿಸಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಸ್ಕೃತಿಕ ಹಾಗೂ ಪ್ರಾಕೃತಿಕವಾಗಿ ಜಿಲ್ಲೆ ಶ್ರೀಮಂತವಾಗಿದ್ದರೂ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಚಿವ ಸಂಪುಟದಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಶಿಕ್ಷಣ, ಉದ್ಯೋಗ, ಆರೋಗ್ಯ, ವಸತಿ, ನೀರಾವರಿ, ಉದ್ಯಮ ಹಾಗೂ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಅನುದಾನ ಹಾಗೂ ಯೋಜನೆ ಘೋಷಿಸಬೇಕು ಎಂದರು.
ಸಿಮ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶಸ್ತ್ರ ಚಿಕಿತ್ಸಕರು, ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಬೇಕು, ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ವಿಶ್ವವಿದ್ಯಾನಿಲಯ ಹಾಗೂ ಎಂಜಿನಿಯರಿಂಗ್ ಕಾಲೇಜಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಿಸಬೇಕು. ಶಾಲಾ ಕಾಲೇಜುಗಳ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರನ್ನು ಕಾಯಂಗೊಳಿಸಬೇಕು. ಕಾನೂನು ಕಾಲೇಜು ಆರಂಭಿಸಬೇಕು ಎಂದು ತಿಳಿಸಿದರು.
‘ದಲಿತರು, ಹಿಂದುಳಿದವರು, ಗಿರಿಜನರು, ನಾಯಕ ಮತ್ತು ಉಪ್ಪಾರ ಸಮುದಾಯದವರಿಗೆ ವಸತಿ ನೀಡಬೇಕು, ಜಲಾಶಯಗಳಿಂದ ಪೈಪ್ ಲೈನ್ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸಬೇಕು, ಕೃಷಿ, ಅರಣ್ಯ ಆಧಾರಿತ ಉದ್ಯಮ ಸ್ಥಾಪಿಸಿ ಉದ್ಯೋಗ ಸೃಷ್ಟಿಸಬೇಕು, ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ, ಕೃಷಿ ಮಾರುಕಟ್ಟೆಗಳನ್ನು ಉನ್ನತೀಕರಣ, ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಶೈತ್ಯಾಗಾರ, ಗೋದಾಮುಗಳನ್ನು ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.
ನಗರ, ಪಟ್ಟಣಗಳಲ್ಲಿ ಒಳಚರಂಡಿ ವ್ಯವಸ್ಥೆ, ಸಮರ್ಪಕ ರಸ್ತೆ, ಮೂಲಸೌಕರ್ಯ ಕಲ್ಪಿಸಲು ₹1 ಸಾವಿರ ಕೋಟಿ ಬಿಡುಗಡೆ ಮಾಡಬೇಕು, ಸುಸಜ್ಜಿತ ಕ್ರೀಡಾಂಗಣ, ಉದ್ಯಾನ ನಿರ್ಮಿಸಬೇಕು, ಅಕ್ರಮ ಗಣಿಗಾರಿಕೆ ಹಾಗೂ ರೆಸಾರ್ಟ್‌ಗಳನ್ನು ಮುಚ್ಚಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಬಾ.ಮ.ಕೃಷ್ಣಮೂರ್ತಿ, ಮುಖಂಡರಾದ ಎನ್.ನಾಗಯ್ಯ, ಬ್ಯಾಡಮೂಡ್ಲು ಬಸವಣ್ಣ, ರಾಮಸಮುದ್ರ ಪುಟ್ಟಸ್ವಾಮಿ, ಅಭಿ ಅರಳೀಪುರ, ಸಿದ್ದರಾಜು ಇದ್ದರು.
‘ಚಾಮರಾಜನಗರ ಅಭಿವೃದ್ಧಿ ಮಂಡಳಿ ಸ್ಥಾಪಿಸಿ’
ಕೊಳ್ಳೇಗಾಲ ತಾಲ್ಲೂಕಿನಲ್ಲಿ ಪ್ರವಾಹ ತಲೆದೋರುವ ಕಡೆಗಳಲ್ಲಿ ಸೇತುವೆ ಕಾಲುವೆ ತಡೆಗೋಡೆ ನಿರ್ಮಿಸಿ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಬೇಕು. ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿರುವಂತೆ ಚಾಮರಾಜನಗರ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.