ADVERTISEMENT

ದಣಿವರಿಯದ ಸೋಬಾನೆ ಹಾಡುಗಾರ್ತಿ ನಂಜಮ್ಮ

ಆಕಾಶವಾಣಿಯಲ್ಲಿ ಐದು ಬಾರಿ ಹಾಡಿದ ಅನುಭವ: ಬಾಲ್ಯದಿಂದಲೇ ಗಾಯನದಲ್ಲಿ ಆಸಕ್ತಿ

ಮಹದೇವ್ ಹೆಗ್ಗವಾಡಿಪುರ
Published 14 ಆಗಸ್ಟ್ 2019, 11:31 IST
Last Updated 14 ಆಗಸ್ಟ್ 2019, 11:31 IST
ನಂಜಮ್ಮ
ನಂಜಮ್ಮ   

ಸಂತೇಮರಹಳ್ಳಿ: ಸೋಬಾನೆ, ತತ್ವಪದ ಹಾಗೂ ಜಾನಪದ ಗೀತೆಗಳನ್ನು ಹಾಡುವ ಮೂಲಕ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ ಮಾತಾಗಿದ್ದಾರೆ ಇರಸವಾಡಿ ಗ್ರಾಮದ ನಂಜಮ್ಮ.

ಸೋಬಾನೆ ಪದಗಳನ್ನು ತಮ್ಮ ತಾಯಿಯಿಂದ ಕಲಿತಿರುವ ನಂಜಮ್ಮ ಅವರ ಕಂಠಸಿರಿಗೆ ಎಲ್ಲರೂ ತಲೆತೂಗಲೇಬೇಕು. ಊರಿನ ಮದುವೆ ಮನೆಗಳಲ್ಲಿ ಇವರ ಪದ ಇರಲೇಬೇಕು. 60ರ ಇಳಿ ವಯಸ್ಸಿನಲ್ಲೂ ರಾಗ, ತಾಳಬದ್ಧವಾಗಿ ಸೋಬಾನೆ, ತತ್ವಪದ ಹಾಗೂ ಜಾನಪದ ಗೀತೆಗಳನ್ನು ಹಾಡು‌ತ್ತಾರೆ.‌

ನಂಜಮ್ಮ ಅವರಿಗೆ ಬಾಲ್ಯದಿಂದಲೇ ಹಾಡುವುದರಲ್ಲಿ ಆಸಕ್ತಿ. ಪಟ್ಟು ಹಿಡಿದು ಅದನ್ನು ಕರಗತ ಮಾಡಿಕೊಂಡು ಈಗಲೂ ದಣಿವರಿಯದೆ ಹಾಡುತ್ತಾರೆ.ಇವರು ಹಾಡಲು ಆರಂಭಿಸಿದೊಡನೆಜೊತೆಗಾರ್ತಿಯರು ಅವರಿಗೆ ಕೋರಸ್ ನೀಡುತ್ತಾರೆ.

ADVERTISEMENT

ವಿವಾಹ, ತೊಟ್ಟಿಲುಶಾಸ್ತ್ರ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿಇವರು ಹಾಡುತ್ತಾರೆ. ಮದುವೆ ಮನೆಯಲ್ಲಿ ಚಪ್ಪರ ಹಾಕುವುದರಿಂದ ಹಿಡಿದು ಮದುವೆ ಹಾಗೂ ಬೀಗರು ಬಂದು ಹೋಗುವವರೆಗೂ ಸೋಬಾನೆ ಮೂಲಕ ಕತೆ ಹೇಳುವ ಇವರುಗೀತೆಯಲ್ಲಿದೇವಾನುದೇವತೆಗಳನ್ನು ಧರೆಗೆ ಇಳಿಸುತ್ತಾರೆ.

ಆಕಾಶವಾಣಿಯಲ್ಲಿ ಹಾಡು: ನಂಜಮ್ಮ ಅವರು ಸೋಬಾನೆ ಪದ ಹಾಡುವುದನ್ನು1997ರಲ್ಲಿ ಗುರುತಿಸಿದ್ದ ಮೈಸೂರು ಆಕಾಶವಾಣಿಯವರು ಇವರಿಂದ ಹಾಡಿಸಿ ಪ್ರಶಸ್ತಿಪತ್ರ ಹಾಗೂ ಬಹುಮಾನ ನೀಡಿದರು. ಈವರೆಗೆ ಆಕಾಶವಾಣಿಯಲ್ಲಿ 5 ಬಾರಿ ಹಾಡಿದ್ದಾರೆ. ಜಿಲ್ಲೆಯ ಯಾವುದೇ ಸ್ಥಳದಲ್ಲಿ ಸರ್ಕಾರಿ ಕಾರ್ಯಕ್ರಮಗಳು ನಡೆದರೆ ಇವರ ಹಾಜರಿಯಲ್ಲೊಂದು ಸೋಬಾನೆ ಹಾಗೂ ಜಾನಪದ ಗೀತೆ ಇರುತ್ತದೆ.

ಎಲೆಮರೆ ಕಾಯಿಯಂತಿರುವ ಇವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗುರುತಿಸಿತಾಲ್ಲೂಕಿನಲ್ಲಿ ನಡೆಯುವ ಸಾಂಸ್ಕೃತಿಕಕಾರ್ಯಕ್ರಮಗಳಲ್ಲಿ ಸೋಬಾನೆ ಹಾಗೂ ಜಾನಪದ ಗೀತೆಗಳನ್ನು ಹಾಡಿಸುತ್ತದೆ.

‘ಸೋಬಾನೆ ಹಾಗೂ ಇತರೆ ಪದಗಳನ್ನು ಹಾಡುವಾಗ ಜನರು ತಾವಾಗೆ ಬಂದು ರಾಗ ಜೋಡಿಸುತ್ತಾರೆ.ಕಲಿಯುವ ಉತ್ಸಾಹ ಇರುವವರಿಗೂಕಲಿಸುತ್ತೇನೆ. ಜನರು ತತ್ವಪದಗಳನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಅದಕ್ಕೆ ಅರ್ಥ ಸಿಗುತ್ತದೆ. ಸರ್ಕಾರ ಹಾಗೂ ಇಲಾಖೆ ಇಳಿ ವಯಸ್ಸಿನವರಲ್ಲಿನ ಜಾನಪದ ಕಲೆ ಉಳಿಸಲು ಮುಂದಾಗಬೇಕು’ ಎಂದುನಂಜಮ್ಮ ‘ಪ್ರಜಾವಾಣಿ’ಗೆ ಹೇಳಿದರು.

ತತ್ವಪದದಿಂದ ಗ್ರಾಮದಲ್ಲಿ ಪ್ರಸಿದ್ಧರು

ಸೋಬಾನೆ ಹಾಗೂ ಜಾನಪದ ಗೀತೆಯ ಜೊತೆ ತತ್ವಪದಗಳಲ್ಲೂ ಇವರು ಪ್ರಸಿದ್ದರು. ಎಂತಹದೇ ಸಮಯದಲ್ಲಿ ಅಥವಾ ಯಾರಾದರೂನಿಧನ ಹೊಂದಿದಾಗ ಆ ಸೂತಕದ ಮನೆಗೆ ತೆರಳಿ ತತ್ವಪದಗಳನ್ನು ಹಾಡುತ್ತಾರೆ.

ರಾಗಿಕಲ್ಲು ಪದ, ನಾಟಿ ಹಾಕುವಾಗ, ಕಳೆ ಕೀಳುವ ಹಾಗೂ ಇಂತಹಸಂದರ್ಭಕ್ಕೆತಕ್ಕಂತ ಪದಗಳ ಹಾಡುಗಾರಿಕೆಯಿಂದಕೇಳುಗರನ್ನು ಹೆಚ್ಚಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.