ADVERTISEMENT

ದೇವರ ದಾಸಿಮಯ್ಯ ಜಯಂತಿ: ‘ಸನ್ಮಾರ್ಗದೆಡೆಗೆ ಸಮಾಜ ಕೊಂಡೊಯ್ದವರು’

ನಗರಸಭೆ ಅಧ್ಯಕ್ಷ ಎಸ್. ಸುರೇಶ್

​ಪ್ರಜಾವಾಣಿ ವಾರ್ತೆ
Published 16 ಮೇ 2025, 16:09 IST
Last Updated 16 ಮೇ 2025, 16:09 IST
ದೇವರ ದಾಸಿಮಯ್ಯ ಜಯಂತಿ ಅಂಗವಾಗಿ ನಗರದ ಚಾಮರಾಜೇಶ್ವರ ದೇವಾಲಯದಿಂದ ಜಿಲ್ಲಾಡಳಿತ ಭವನದವರೆಗೆ ‌ದೇವರ ದಾಸಿಮಯ್ಯ ಭಾವಚಿತ್ರ ಮೆರವಣಿಗೆ ನಡೆಯಿತು
ದೇವರ ದಾಸಿಮಯ್ಯ ಜಯಂತಿ ಅಂಗವಾಗಿ ನಗರದ ಚಾಮರಾಜೇಶ್ವರ ದೇವಾಲಯದಿಂದ ಜಿಲ್ಲಾಡಳಿತ ಭವನದವರೆಗೆ ‌ದೇವರ ದಾಸಿಮಯ್ಯ ಭಾವಚಿತ್ರ ಮೆರವಣಿಗೆ ನಡೆಯಿತು   

ಚಾಮರಾಜನಗರ: ‘ಸರಳ ಭಾಷೆಯಲ್ಲಿ ಸರ್ವರಿಗೂ ಅರಿಯುವಂತೆ ವಚನಗಳನ್ನು ರಚಿಸಿದ ದೇವರ ದಾಸಿಮಯ್ಯ ಸ್ವಸ್ಥ ಸಮಾಜ ನಿರ್ಮಾಣ ಮಾಡಿ ಸನ್ಮಾರ್ಗದೆಡೆಗೆ ನಡೆಸಿದರು’ ಎಂದು ನಗರಸಭೆ ಅಧ್ಯಕ್ಷ ಎಸ್.ಸುರೇಶ್ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ದೇವರ ದಾಸಿಮಯ್ಯ ಜಯಂತಿಯಲ್ಲಿ ಅವರು ಮಾತನಾಡಿದರು.

ದೇವರ ದಾಸಿಮಯ್ಯ ವಚನಗಳ ಮೂಲಕ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಶ್ರಮಿಸಿದರು. ಅವರ 176 ವಚನಗಳು ಇದುವರೆಗೂ ಲಭ್ಯವಾಗಿವೆ. ದಾಸಿಮಯ್ಯನವರ ವಚನಗಳ ಸಾರವನ್ನು ಮಕ್ಕಳಿಗೆ ಯುವಜನತೆಗೆ ತಿಳಿಸಿ ಸುಸಂಸ್ಕೃತರನ್ನಾಗಿ ಮಾಡಬೇಕು ಎಂದು ತಿಳಿಸಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮಾತನಾಡಿ, ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮುದನೂರಿನಲ್ಲಿ ಜನಿಸಿದ ದೇವರ ದಾಸಿಮಯ್ಯ 10ನೇ ಶತಮಾನದಲ್ಲಿ ಸರಳವಾಗಿ ವಚನಗಳನ್ನು ರಚಿಸಿ ಜನಸಾಮಾನ್ಯರನ್ನು ತಿದ್ದುವ ಕೆಲಸ ಮಾಡಿದರು.  ದಾಸಿಮಯ್ಯ ಅವರ ವಚನಗಳು ಇಂದಿಗೂ ಪ್ರಸ್ತುತ ಎಂದರು.

ಸಂಪನ್ಮೂಲ ವ್ಯಕ್ತಿ ಹಾಗೂ ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯ ಬಿ.ಬಾಲಕೃಷ್ಣಯ್ಯ ಮಾತನಾಡಿ, ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ದೇವರ ದಾಸಿಮಯ್ಯ ಬದುಕಿನುದ್ದಕ್ಕೂ ನುಡಿದಂತೆ ನಡೆದರು. ಆದಿಗುರು ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ಮುಂದುವರಿಸಿದರು. ಜಾತಿ, ಲಿಂಗ–ತಾರತಮ್ಯ, ಸ್ತ್ರೀ ಶೋಷಣೆ ವಿರೋಧಿಸಿದ್ದ ದಾಸಿಮಯ್ಯ ಸಮಾಜ ಸುಧಾರಕರು ಹೌದು ಎಂದರು.

ನೇಯ್ಗೆ ವೃತ್ತಿಯನ್ನು ಮಾಡುತ್ತಿದ್ದ ದೇವರ ದಾಸಿಮಯ್ಯ ತಮ್ಮ ವಚನಗಳಲ್ಲಿ ಕಾಯಕ, ಭಕ್ತಿ, ಜ್ಞಾನ, ಸರಳತೆ, ವೈರಾಗ್ಯ, ಮುಕ್ತಿಗೆ ಪ್ರಾಧಾನ್ಯತೆ ನೀಡಿದ್ದಾರೆ. 12ನೇ ಶತಮಾನದಲ್ಲಿ ಆರಂಭವಾದ ವಚನ ಚಳವಳಿಗಿಂತ ಮೊದಲೇ ಸರಳ ವಚನಗಳನ್ನು ರಚಿಸಿದ ಆದ್ಯ ವಚನಕಾರ ಎಂಬ ಹೆಗ್ಗಳಿಕೆಗೆ ದಾಸಿಮಯ್ಯ ಪಾತ್ರರಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಮೂಲವಾಗಿರುವ ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಂಡಿದೆ. ಇದಕ್ಕೆ ದೇವರ ದಾಸಿಮಯ್ಯ ಕಾರಣಕರ್ತರು ಎಂದರು.

‘ದೇವರ ದಾಸಿಮಯ್ಯ ವಚನಗಳ ಆದರ್ಶ ಹಾಗೂ ಮೌಲ್ಯಗಳನ್ನು ಪೋಷಕರು ಮಕ್ಕಳಲ್ಲಿ ತುಂಬಬೇಕು. ಶ್ರೀಮಂತಿಕೆಯ ಜೀವನಕ್ಕಿಂತ ಶ್ರೀಮಂತ ಸಂಸ್ಕೃತಿ ಮಕ್ಕಳಿಗೆ ಕಲಿಸಬೇಕಾಗಿದೆ. ಮಹಾನ್ ಸಾಧಕರ ನಡೆನುಡಿಗಳನ್ನು ಅರ್ಥೈಸಬೇಕು. ಮಕ್ಕಳಿಗೆ ಆಸ್ತಿ ಸಂಪಾದನೆ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಆಗಮಾತ್ರ ಮಕ್ಕಳು ಸಮಾಜದ ಸತ್ಪ್ರಜೆಗಳಾಗಲಿದ್ದಾರೆ’ ಎಂದು ಬಿ.ಬಾಲಕೃಷ್ಣಯ್ಯ ತಿಳಿಸಿದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಚಾಮರಾಜೇಶ್ವರ ದೇವಾಲಯದಿಂದ ಜಿಲ್ಲಾಡಳಿತ ಭವನದವರೆಗೆ ದೇವರ ದಾಸಿಮಯ್ಯ ಅವರ ಭಾವಚಿತ್ರ ಮೆರವಣಿಗೆ ನಡೆಯಿತು. ಸಾಂಸ್ಕೃತಿ ಕಲಾತಂಡಗಳು ಭಾಗವಹಿಸಿದ್ದವು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂಜುಂಡಯ್ಯ, ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಸಮಾಜದ ಮುಖಂಡರಾದ ಮಧುಸೂಧನ್, ವೆಂಕಟೇಶ್, ಕಾಂತರಾಜು, ಬಸವರಾಜು, ದೊಡ್ಡರಾಯಪೇಟೆ ಗಿರೀಶ್, ಶಿವಕುಮಾರ್ ಕಾರ್ಯಕ್ರಮದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.