ADVERTISEMENT

ಜಿಲ್ಲಾ ದಸರಾಗೆ ಅದ್ಧೂರಿ ಚಾಲನೆ

ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 13:10 IST
Last Updated 2 ಅಕ್ಟೋಬರ್ 2019, 13:10 IST
ಚಾಮರಾಜೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಶಾಸಕರಾದ ಸಿ.ಎಸ್‌.ನಿರಂಜನ್‌ಕುಮಾರ್‌ ಮತ್ತು ಸಿ.ಪುಟ್ಟರಂಗಶೆಟ್ಟಿ ಅವರು ದೀಪ ಬೆಳಗಿದರು
ಚಾಮರಾಜೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಶಾಸಕರಾದ ಸಿ.ಎಸ್‌.ನಿರಂಜನ್‌ಕುಮಾರ್‌ ಮತ್ತು ಸಿ.ಪುಟ್ಟರಂಗಶೆಟ್ಟಿ ಅವರು ದೀಪ ಬೆಳಗಿದರು   

ಚಾಮರಾಜನಗರ: ವಿಶ್ವವಿಖ್ಯಾತ ಮೈಸೂರು ದಸರಾದ ಅಂಗವಾಗಿ ಜಿಲ್ಲಾ ಕೇಂದ್ರದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರು ಜಿಲ್ಲಾ ದಸರಾ ಮಹೋತ್ಸವಕ್ಕೆ ಮಂಗಳವಾರ ಅದ್ಧೂರಿ ಚಾಲನೆ ದೊರಕಿತು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು.

'ದಸರಾ ಕಾರ್ಯಕ್ರಮದ ಅಂಗವಾಗಿ ನಾಲ್ಕು ದಿನಗಳ ಕಾಲ ವೈವಿಧ್ಯಮಯ ಹಾಗೂ ಸೊಗಸಾದ ಕಾರ್ಯಕ್ರಮಗಳು ಇವೆ. ರೈತರಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಇದರ ಲಾಭ ಪಡೆಯಬೇಕು' ಎಂದರು.

ADVERTISEMENT

ಪ್ರಸ್ತಾವಿಕವಾಗಿ ಮಾತನಾಡಿದ ದಸರಾ ಉತ್ಸವ ಸಮಿತಿ ಉಪಾಧ್ಯಕ್ಷ, ಶಾಸಕ ನಿರಂಜನ್ ಕುಮಾರ್ ಅವರು, 'ಮೈಸೂರಿನ ದಸರಾಗೆ ಪರಂಪರೆ ಇದೆ. ಅದೇ ಮಾದರಿಯಲ್ಲಿ ಜಿಲ್ಲೆಯಲ್ಲೂ 2013ರಲ್ಲಿ ಆರಂಭವಾಗಿತ್ತು. ಈ ವರ್ಷ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹಿಳಾ ದಸರಾ, ನಾಟಕೋತ್ಸವ, ಆಹಾರ ಮೇಳ ಹಮ್ಮಿಕೊಳ್ಳಲಾಗಿದೆ. ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ' ಎಂದರು.

ಕೊಳ್ಳೇಗಾಲಶಾಸಕ ಎನ್.ಮಹೇಶ್ ಮಾತನಾಡಿ, 'ಜಿಲ್ಲೆಯಲ್ಲಿ ಒಳ್ಳೆಯ ಮಳೆ, ಬೆಳೆ ಆಗಿದೆ. ಅಂತಹ ಸಂದರ್ಭದಲ್ಲಿ ದಸರಾ ನಡೆಯುತ್ತಿದೆ. ಸರಳವಾಗಿ ಆಚರಿಸಲು ತೀರ್ಮಾನಿಸಿದ್ದೇವೆ. ಹಾಗಿದ್ದರೂ ಲಭ್ಯವಿರುವ ಅನುದಾನವನ್ನು ಶಿಸ್ತಿನಿಂದ ವೆಚ್ಚ ಮಾಡಲಾಗುತ್ತಿದೆ‌. ಕಳೆದ ವರ್ಷದಷ್ಟೇ ವಿಜೃಂಭಣೆಯಿಂದ ನಡೆಯುತ್ತಿದೆ’ ಎಂದರು.

ಸಿದ್ದರಾಮಯ್ಯ ನೆನೆದ ಪುಟ್ಟರಂಗಶೆಟ್ಟಿ:ಅಧ್ಯಕ್ಷತೆ ವಹಿಸಿದ್ದ ಪುಟ್ಟರಂಗಶೆಟ್ಟಿ ಅವರು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೆನೆದರು.

‘2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಜಿಲ್ಲೆಯಲ್ಲೂ ದಸರಾ ಆಚರಿಸಲು ನಿರ್ಧರಿಸಿತ್ತು. ಅಲ್ಲದೇ ದೇವಸ್ಥಾನದ ಅಭಿವೃದ್ಧಿ ಹಾಗೂ ನಗರದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಸ್ಮರಿಸಬೇಕಾಗುತ್ತದೆ’ ಎಂದರು.

‘ಉತ್ತಮ ಆಡಳಿತಗಾರ ಸುರೇಶ್ ಕುಮಾರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಅವರಿಂದ ಜಿಲ್ಲೆಯ ಅಭಿವೃದ್ಧಿ ನಿರೀಕ್ಷಿಸುತ್ತಿದ್ದೇವೆ’ ಎಂದು ಪುಟ್ಟರಂಗಶೆಟ್ಟಿ ಹೇಳಿದರು.

ಅವಕಾಶ ಕೊಡದ ಪ್ರೇಕ್ಷಕರು:ಚಂದನ್ ಶೆಟ್ಟಿ ಮತ್ತು ತಂಡದ ಪ್ರದರ್ಶನದ ನಿರೀಕ್ಷೆಯಲ್ಲಿದ್ದ ಜನರು ಗಣ್ಯರಿಗೆ ಮಾತನಾಡಲು ಅವಕಾಶ ಕೊಡಲಿಲ್ಲ‌ ಜೋರಾಗಿ ಕಿರುಚಾಡುತ್ತಾ ಅಡ್ಡಿ ಪಡಿಸಿದರು. ಹೀಗಾಗಿ ಸಚಿವರಾದಿಯಾಗಿ ಎರಡು ಮೂರು ನಿಮಿಷವಷ್ಟೇ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾದ್ಯಕ್ಷ ಎಸ್.ಕೆ.ಮಹೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ಜಿ.ಬಸವಣ್ಣ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎಚ್.ನಾರಾಯಣ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್‌ ಇದ್ದರು.

ಚಾಮರಾಜೇಶ್ವರನಿಗೆ ವಿಶೇಷ ಪೂಜೆ: ಇದಕ್ಕೂ ಮೊದಲು ಬೆಳಿಗ್ಗೆ ಚಾಮರಾಜೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆಯ ಮೂಲಕ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿತು.

ದಸರಾ ಉತ್ಸವ ಸಮಿತಿಯ ಉಪಾಧ್ಯಾಕ್ಷ, ಶಾಸಕ ಸಿ.ಎಸ್‌.ನಿರಂಜನ ಕುಮಾರ್‌, ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್‌.ನಾರಾಯಣರಾವ್‌ ಅವರ ಸಮ್ಮುಖದಲ್ಲಿ ಚಾಮರಾಜೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸ್ವಾಮಿಯ ಉತ್ಸವ ಮೂರ್ತಿಯ ಎದುರು ಗಣ್ಯರು ದೀಪಬೆಳಗಿದರು.

ದೇವಾಲಯದ ಆವರಣದಲ್ಲಿರುವ ಚಾಮುಂಡಿ ದೇವಾಲಯ ಹಾಗೂ ಕೆಂಪನಂಜಮ್ಮ ದೇವಾಲಯಗಳಲ್ಲೂ ವಿಶೇಷ ಪೂಜೆ ನೆರವೇರಿಸಲಾಯಿತು.

ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದಾಗ, ಹೊರಗಡೆ ಮಂಗಳವಾದ್ಯಗಳು ಮೊಳಗಿದವು.ವೀರಗಾಸೆ ನೃತ್ಯ ಕೂಡ ಗಮನಸೆಳೆಯಿತು.

ಜನನ ಮಂಟಪಕ್ಕೆ ಬೀಗ: ದೇವಾಲಯದಿಂದ ಗಣ್ಯರು ಮೆರವಣಿಗೆ ಮೂಲಕ ಕೂಗಳತೆ ದೂರದಲ್ಲಿರುವ ಜನನ ಮಂಟಪಕ್ಕೆ ಪೂಜೆ ಸಲ್ಲಿಸಲು ತೆರಳಿದರು. ಆದರೆ, ಮಂಟಪಕ್ಕೆ ಬೀಗ ಹಾಕಿತ್ತು. ಒಳಗಡೆ ಸ್ವಚ್ಛತೆಯನ್ನೂ ಮಾಡಿರಲಿಲ್ಲ. ಕೊನೆಗೆ ಹೊರಗಿನಿಂದಲೇ ಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಜನನ ಮಂಟಪ ನಿರ್ವಹಣೆ ಮಾಡಲು ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ ಎಂದೂ ಕೆಲವರು ಆರೋಪಿಸಿದರು.

ಸಂಸದ ಶ್ರೀನಿವಾಸ ಪ್ರಸಾದ್‌ ಗೈರು

ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಉದ್ಘಾಟನಾ ಸಮಾರಂಭಕ್ಕೆ ಗೈರು ಹಾರಜರಾಗಿದ್ದರು.

ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲೂ ಅವರು ಭಾಗವಸಿರಲಿಲ್ಲ.

'ನೆರೆಯಿಂದಾಗಿ ರಾಜ್ಯದ ಜನ ಸಂಕಷ್ಟದಲ್ಲಿರುವಾಗ ಅದ್ಧೂರಿ ದಸರಾ ಅಗತ್ಯವಿಲ್ಲ. ಹಾಗಾಗಿ ನಾನು ದಸರಾದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ' ಎಂದು ಶ್ರೀನಿವಾಸ ಪ್ರಸಾದ್ ಹೇಳಿದ್ದರು.

ಮಹೇಶ್‌ಗೆ ಸಚಿವರಿಂದ ಸನ್ಮಾನ

ಕಾರ್ಯಕ್ರಮದಲ್ಲಿ ಸ್ವಾಗತ ಕೋರುವ ಸಂದರ್ಭದಲ್ಲಿ, ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಅವರನ್ನು ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಹಾರ ಹಾಕಿ ಸನ್ಮಾನಿಸಿದರು. ಆಗ ಪ್ರೇಕ್ಷಕರು ಜೋರಾಗಿ ಕೂಗಿದರು.

ಇದಕ್ಕೆ ತಮ್ಮ ಭಾಷಣದಲ್ಲಿ ಸ್ಪಷ್ಟನೆ ನೀಡಿದ ಸುರೇಶ್ ಕುಮಾರ್, 'ನಾನು ಮಹೇಶ್‌ಗೆ ಹಾರ ಹಾಕಿದ್ದಕ್ಕೆ ನೀವೆಲ್ಲಾ ವಿಶೇಷ ಅರ್ಥ ಕಲ್ಪಿಸಿಕೊಂಡಿರುತ್ತೀರಿ. ಅವರು ಹಿಂದೆ ಶಿಕ್ಷಣ ಸಚಿವರಾಗಿದ್ದರು. ಅದಕ್ಕಾಗಿ ಹಾರ ಹಾಕಿ ಸನ್ಮಾನಿಸಿದೆ' ಎಂದರು.

ಆಗಲೂ ಸಭಿಕರಿಂದ ಹೋ ಎಂಬ ಉದ್ಗಾರ ಹೊರಹೊಮ್ಮಿತು.

ಚಲನಚಿತ್ರೋತ್ಸವ ಉದ್ಘಾಟನೆ

ದಸರಾ ಅಂಗವಾಗಿ ಮಂಗಳವಾರ ಬೆಳಿಗ್ಗೆ ಬಸವೇಶ್ವರ ಚಿತ್ರಮಂದಿರದಲ್ಲಿ ಚಲನಚಿತ್ರೋತ್ಸವಕ್ಕೂ ಚಾಲನೆ ನೀಡಲಾಯಿತು.

ಬಸವೇಶ್ವರ ಚಿತ್ರಮಂದಿರದಲ್ಲಿ ‘ನಾಗರಹಾವು’, ಸಿಂಹ‍ಮೂವಿ ಪ್ಯಾರಡೈಸ್‌ನಲ್ಲಿ ‘ಪ್ರೀಮಿಯರ್‌ ಪದ್ಮಿನಿ’ ಮತ್ತು ಭ್ರಮರಾಂಬ ಚಿತ್ರಮಂದಿರದಲ್ಲಿ ‘ನಟಸಾರ್ವಭೌಮ’ ಚಿತ್ರಗಳು ಪ್ರದರ್ಶನಗೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.