ADVERTISEMENT

ಜಿಲ್ಲೆಯ ಗ್ರಾಮೀಣ ಭಾಗದ ಮೊದಲ ಡಿಜಿಟಲ್‌ ಗ್ರಂಥಾಲಯ

ಹುಂಡೀಪುರ: ಗ್ರಾಮ ಪಂಚಾಯಿತಿಯ ಪ್ರಯತ್ನ, ಜನರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಶೀಘ್ರ ಉದ್ಘಾಟನೆ

ಮಲ್ಲೇಶ ಎಂ.
Published 19 ಜೂನ್ 2022, 4:58 IST
Last Updated 19 ಜೂನ್ 2022, 4:58 IST
ಹುಂಡೀಪುರ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಡಿಜಿಟಲ್‌ ಗ್ರಂಥಾಲಯದಲ್ಲಿ ಅಳವಡಿಸಿರುವ ಕಂಪ್ಯೂಟರ್‌ಗಳು
ಹುಂಡೀಪುರ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಡಿಜಿಟಲ್‌ ಗ್ರಂಥಾಲಯದಲ್ಲಿ ಅಳವಡಿಸಿರುವ ಕಂಪ್ಯೂಟರ್‌ಗಳು   

ಗುಂಡ್ಲುಪೇಟೆ: ಗ್ರಾಮೀಣ ಮಕ್ಕಳು ಕೂಡ ನಗರವಾಸಿಗಳಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಮತ್ತು ಸುತ್ತಮುತ್ತಲಿನ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ತಾಲ್ಲೂಕಿನ ಹುಂಡೀಪುರ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಶೀಘ್ರವಾಗಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಆರಂಭವಾಗಲಿದೆ.

ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು ಮತ್ತು ಸದಸ್ಯರ ಇಚ್ಚಾಶಕ್ತಿಯಿಂದಾಗಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮೊದಲ ಡಿಜಿಟಲ್‌ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ನಿರ್ಮಾಣವಾಗುತ್ತಿದೆ.

15ನೇ ಹಣಕಾಸಿನಲ್ಲಿ ಹಳೆಯ ಗ್ರಂಥಾಲಯ ಕಟ್ಟಡವನ್ನು ದುರಸ್ತಿಗೊಳಿಸಿ ಡಿಜಿಟಲೀಕರಣ ಮಾಡಲಾಗಿದೆ. 12 ಕಂಪ್ಯೂಟರ್ ಮತ್ತು ವಿವಿಧ ವಿಷಯಗಳಿಗೆ ಸಂಬಂಧಿಸಿದ6,600 ಪುಸ್ತಕಗಳು ವಿದ್ಯಾರ್ಥಿಗಳಿಗೆ ಇಲ್ಲಿ ಲಭ್ಯವಿರಲಿದೆ. ವೈ–ಪೈ ಸೌಲಭ್ಯವನ್ನೂ ಇಲ್ಲಿ ಕಲ್ಪಿಸಲಾಗಿದೆ.

ADVERTISEMENT

ಹೊಸದಾಗಿ ಬಿಡುಗಡೆ ಆಗಿರುವ, ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯೋಗ ಆಗುವಂತಹ ಎಲ್ಲ ಪುಸ್ತಕಗಳು, ಕಾದಂಬರಿ, ವಿಜ್ಞಾನ, ಐತಿಹಾಸಿಕ, ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು ಗ್ರಂಥಾಲಯದಲ್ಲಿವೆ.

‘ವಿದ್ಯಾರ್ಥಿಗಳು ಇಂಟರ್ನೆಟ್ ಸೌಲಭ್ಯ ಪಡೆಯಲು ಪಟ್ಟಣಕ್ಕೆ ಹೋಗಬೇಕಿತ್ತು. ಅ ಸಮಸ್ಯೆ ನೀಗಿಸಲು ವೈ ಫೈ ಸೌಲಭ್ಯ ಒದಗಿಸಲಾಗಿದೆ. ಡಿಜಿಟಲ್ ಗ್ರಂಥಾಲಯ ಸಿದ್ದವಾಗಿದ್ದು, ಶಾಸಕರು ಶೀಘ್ರ ಉದ್ಘಾಟನೆ ಮಾಡಲಿದ್ದಾರೆ’ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕುಮಾರಸ್ವಾಮಿ ‘ಪ್ರಜಾವಾಣಿ’ ಗೆ ತಿಳಿಸಿದರು.

ಅಧ್ಯಕ್ಷೆ ಡಿ.ಕೆ.ಲಕ್ಷ್ಮಿ, ಉಪಾಧ್ಯಕ್ಷ ನಂಜಪ್ಪ ಮತ್ತು ಸದಸ್ಯರು ಆಸಕ್ತಿ ವಹಿಸಿ, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ಸಲುವಾಗಿ ಈ ಗ್ರಂಥಾಲಯ ಆರಂಭಿಸಲಾಗುತ್ತಿದೆ ಎಂದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ ಅವರು ಈ ಹಿಂದೆ ಹಂಗಳ ಪಂಚಾಯತಿ ಕೇಂದ್ರದಲ್ಲಿದ್ದಾಗ, ಆ ಪಂಚಾಯಿತಿ ಗಾಂಧಿ ಗ್ರಾಮ ಪ್ರಶಸ್ತಿಗೆ ಆಯ್ಕೆಯಾಗಿತ್ತು.

ಪುಸ್ತಕ ಜೋಳಿಗೆ ಕಾರ್ಯಕ್ರಮ: ವಿದ್ಯಾರ್ಥಿಗಳು ಮತ್ತು ಪುಸ್ತಕ ಪ್ರೇಮಿಗಳು ಹಳೆಯ ಪುಸ್ತಕಗಳನ್ನು ಹಾಳು ಮಾಡದೆ ಬೇರೆಯವರಿಗೆ ಉಪಯೋಗಕ್ಕೆ ಬರುವಂತೆ ಮಾಡಲು ಪಂಚಾಯತಿಯು ಪುಸ್ತಕ ಜೋಳಿಗೆ ಕಾರ್ಯಕ್ರಮ ರೂಪಿಸಲು ನಿರ್ಧರಿಸಿದೆ.

--

ಜನರು, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಎಲ್ಲರೊಂದಿಗೆ ಚರ್ಚಿಸಿ ಡಿಜಿಟಲ್‌ ಗ್ರಂಥಾಲಯ ಸ್ಥಾಪಿಸಲಾಗಿದೆ
ಡಿ.ಕೆ.ಲಕ್ಷ್ಮಿ, ಗ್ರಾ.ಪಂ ಅಧ್ಯಕ್ಷೆ

--

ಡಿಜಿಟಲ್ ಗ್ರಂಥಾಲಯದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ರಜಾ ದಿನಗಳಲ್ಲಿ ಅವರು ಇದರ ಸೌಲಭ್ಯ ಪಡೆಯಬಹುದು
ಪ್ರವೀಣ್, ಚೌಡಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.