ADVERTISEMENT

ವ್ಯಾಜ್ಯ ಪೂರ್ವದಲ್ಲೇ ಪ್ರಕರಣ ಇತ್ಯರ್ಥಕ್ಕೆ ಒಲವು

ಲೋಕ ಅದಾಲತ್‌ಗೆ ಉತ್ತಮ ಸ್ಪಂದನೆ, ನ್ಯಾಯಾಲಯದ ಮೇಲಿನ ಹೊರೆ ಇಳಿಕೆ–

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 15:42 IST
Last Updated 27 ಜೂನ್ 2022, 15:42 IST
ಬಿ.ಎಸ್‌.ಭಾರತಿ
ಬಿ.ಎಸ್‌.ಭಾರತಿ   

ಚಾಮರಾಜನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನ್ಯಾಯಾಲಯಗಳಲ್ಲಿ ನಡೆಸುತ್ತಿರುವ ಲೋಕ ಅದಾಲತ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಜನರು ತಮ್ಮ ಸಮಸ್ಯೆಗಳ ಇತ್ಯರ್ಥಕ್ಕೆ ನ್ಯಾಯಾಲಯದ ಮೊರೆ ಹೋಗುವುದಕ್ಕೂ ಮುನ್ನವೇ (ವ್ಯಾಜ್ಯ ಪೂರ್ವ) ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಲು ಬಯಸುತ್ತಿದ್ದಾರೆ.

ಇದೇ 25ರಂದು ಜಿಲ್ಲೆಯ ನ್ಯಾಯಾಲಯಗಳಲ್ಲಿ ನಡೆದ ಲೋಕ ಅದಾಲತ್‌ನ ಅಂಕಿ ಅಂಶಗಳು ಇದನ್ನು ಹೇಳುತ್ತವೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು 6,000 ಸಾವಿರ ಪ್ರಕರಣಗಳನ್ನು ಅದಾಲತ್‌ನಲ್ಲಿ ಇತ್ಯರ್ಥ ಪಡಿಸುವ ಗುರಿ ಹೊಂದಿತ್ತು. ಆದರೆ, 8,441 ಪ್ರಕರಣಗಳು ವಿಲೇವಾರಿಯಾಗಿವೆ. ಈ ಪೈಕಿ 6,396 ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥವಾಗಿವೆ. 160 ಸಿವಿಲ್‌ ಪ್ರಕರಣಗಳು ಹಾಗೂ 1,885 ಕ್ರಿಮಿನಲ್‌ ಪ್ರಕರಣಗಳು ಸೇರಿ, ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ 2,045 ಪ್ರಕರಣಗಳು ಅದಾಲತ್‌ನಲ್ಲಿ ವಿಲೇವಾರಿಯಾಗಿದೆ. ಒಟ್ಟು ಪ್ರಕರಣಗಳಲ್ಲಿ ₹7 ಕೋಟಿಯಷ್ಟು ಮೊತ್ತ ಇತ್ಯರ್ಥವಾಗಿದೆ.

ADVERTISEMENT

ಅದಾಲತ್‌ ಯಶಸ್ವಿಯಾಗಿ ನಡೆದಿರುವ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ ಅವರು, ‘ಅದಾಲತ್‌ನಲ್ಲಿ ಹೆಚ್ಚು ಹೆಚ್ಚು ಪ್ರಕರಣಗಳು ಇತ್ಯರ್ಥವಾಗುತ್ತಿವೆ. ವಕೀಲರು, ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಸಹಕಾರ ಕೊಡುತ್ತಿವೆ. ಜಾಸ್ತಿ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾದಷ್ಟೂ ನ್ಯಾಯಲಯದ ಮೇಲಿನ ಹೊರೆ ಕಡಿಮೆಯಾಗುತ್ತದೆ. ಜನರಿಗೂ ಅನುಕೂಲವಾಗುತ್ತದೆ’ ಎಂದರು.

‘ಜಿಲ್ಲೆಯ ನ್ಯಾಯಾಲಯಗಳಲ್ಲಿ 20,660 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಶನಿವಾರದ ಅದಾಲತ್‌ನಲ್ಲಿ 76 ಚೆಕ್‌ ಬೌನ್ಸ್‌ ಪ್ರಕರಣಗಳು, ಬ್ಯಾಂಕುಗಳಿಗೆ ಸಂಬಂಧಿಸಿದ 11 ಪ್ರಕರಣಗಳು, 26 ಭೂಸ್ವಾಧೀನ ಪರಿಹಾರ ವ್ಯಾಜ್ಯ, ವಾಹನ ಅಪಘಾತಕ್ಕೆ ಸಂಬಂಧಿಸಿದ 18 ಪ್ರಕರಣಗಳು ಇತ್ಯರ್ಥಗೊಂಡಿವೆ. ಇಲ್ಲಿ ದಂಡ ಅಥವಾ ಪರಿಹಾರದ ರೂಪದಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ಹಣ ಇತ್ಯರ್ಥವಾಗಿದೆ’ ಎಂದು ಭಾರತಿ ಅವರು ವಿವರಿಸಿದರು.

‘ಹೆಚ್ಚಿನ ಸಂಖ್ಯೆಯ ವ್ಯಾಜ್ಯ ಪೂರ್ವ ಪ್ರಕರಣಗ‌ಳು ಇತ್ಯರ್ಥವಾಗುತ್ತಿವೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಎರಡೂ ಪಕ್ಷಗಾರರನ್ನು ಸಂಪರ್ಕಿಸಿ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡುವುದಕ್ಕೂ ಮುನ್ನವೇ ಎರಡೂ ಪಕ್ಷಗಾರರನ್ನು ಸಂಪ‍ರ್ಕಿಸಿ ರಾಜಿ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುತ್ತಿದೆ. ಇದರಿಂದ ಜನರ ಸಮಯ, ಹಣ ಉಳಿತಾಯವಾಗುತ್ತದೆ’ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌ ಅವರು ಮಾತನಾಡಿ, ‘ನನ್ನ ಏಳು ಮಂದಿ ಕಕ್ಷಿದಾರರು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಅದಾಲತ್‌ನಲ್ಲಿ ಇತ್ಯರ್ಥ ಮಾಡಿಕೊಂಡಿದ್ದಾರೆ.ಜನರು ಪ್ರತಿಷ್ಠೆಗೆ ಬಿದ್ದು ಕೋರ್ಟ್‌ಗಳಲ್ಲಿ ವ್ಯಾಜ್ಯ ಹೂಡುತ್ತಾರೆ. ಇತ್ಯರ್ಥವಾಗಲು ವರ್ಷಾನುಗಟ್ಟಲೆ ಸಮಯಬೇಕು. ಇದರಿಂದ ಅವರ ಸಮಯ, ದುಡ್ಡು ನಷ್ಟವಾಗುತ್ತದೆ.ರಾಜಿ ಸಂಧಾನವಾಗುವುದರಿಂದ ಜನರಿಗೆ ಸಮಯ, ಹಣ ಉಳಿತಾಯವಾಗಲಿದೆ. ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ವಕೀಲರಿಗೆ ಹಣವನ್ನೂ ನೀಡಬೇಕಾಗಿಲ್ಲ’ ಎಂದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಸ್ವಾಮಿ ಇದ್ದರು.

‘ಉಚಿತ ಕಾನೂನು ಸೇವೆ ಲಭ್ಯ’

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ ಎಂ. ಮಾತನಾಡಿ, ‘ವ್ಯಾಜ್ಯ ಪೂರ್ವದ ಹಂತದಲ್ಲಿ ಪ್ರಕರಣಗಳು ಇತ್ಯರ್ಥವಾಗುವುದರಿಂದ ಜನರಿಗೆ ಸಾಕಷ್ಟು ಅನುಕೂಲವಾಗುತ್ತದೆ. ವ್ಯಾಜ್ಯ ಪೂರ್ವದಲ್ಲೇ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ನಾವು ಪ್ರಯತ್ನಿಸುತ್ತೇವೆ. ಸಂಬಂಧಿಸಿದ ಪಕ್ಷಗಾರರಿಗೆ ನೋಟಿಸ್‌ ನೀಡಿ, ಅವರನ್ನು ಬರ ಹೇಳಿ, ಎರಡೂ ಕಡೆಯವರಿಗೂ ವಿವರಿಸಿ ಪ್ರಯೋಜನಗಳನ್ನು ತಿಳಿ ಹೇಳಲಾಗುತ್ತದೆ. ಎಲ್ಲ ತಾಲ್ಲೂಕುಗಳಲ್ಲೂ ಈ ಪ್ರಕ್ರಿಯೆ ನಡೆಯುತ್ತಿದೆ’ ಎಂದರು.

‘ಇದಲ್ಲದೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು ಹಾಗೂ ವಾರ್ಷಿಕ ಆದಾಯ ₹3 ಲಕ್ಷಕ್ಕಿಂತ ಕಡಿಮೆ ಇದ್ದವರಿಗೆ ‍ಪ್ರಾಧಿಕಾರವು ಉಚಿತವಾಗಿ ಕಾನೂನು ನೆರವು ನೀಡುತ್ತದೆ. ಯಾವುದೇ ವ್ಯಾಜ್ಯಗಳಿದ್ದರೂ, ಪ್ರಾಧಿಕಾರದಿಂದ ವಕೀಲರನ್ನು ನೇಮಿಸುತ್ತದೆ. ವಕೀಲರ ಶುಲ್ಕವನ್ನು ಪ್ರಾಧಿಕಾರವೇ ಭರಿಸುತ್ತದೆ. ಹೆಚ್ಚು ಹೆಚ್ಚು ಜನರು ಇದರ ಪ್ರಯೋಜನ ಪಡೆಯಬೇಕು’ ಎಂದು ಮನವಿ ಮಾಡಿದರು.

--

ಪ್ರಕರಣ ಬೇಗ ಇತ್ಯರ್ಥವಾದರೆ, ಜನರಿಗೆ ಕೋರ್ಟ್‌ ಮೇಲೆ ನಂಬಿಕೆ ಹೆಚ್ಚಲಿದೆ. ನ್ಯಾಯ ವಿಳಂಬವಾಗುತ್ತದೆ ಎಂಬ ಮನೋಭಾವನೆ ದೂರವಾಗಲಿದೆ
ಬಿ.ಎಸ್‌.ಭಾರತಿ, ಜಿಲ್ಲಾ ಪ್ರಧಾನ ನ್ಯಾಯಾಧೀಶರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.