ADVERTISEMENT

‘ಸಜ್ಜನರ ಸಹವಾಸದಿಂದ ಉನ್ನತಿಯತ್ತ ಜೀವನ’

ಉಪನ್ಯಾಸ ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಬಿ.ಕೆ.ದಾನೇಶ್ವರಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 3:03 IST
Last Updated 9 ಆಗಸ್ಟ್ 2025, 3:03 IST
ಚಾಮರಾಜನಗರ ತಾಲ್ಲೂಕಿನ ಅಮಚವಾಡಿ ಸರ್ಕಾರಿ ಸಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತ ವಿಶೇಷ ಉಪನ್ಯಾಸ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರಾದ ಬಿ.ಕೆ.ದಾನೇಶ್ವರಿ ಉದ್ಘಾಟಿಸಿದರು
ಚಾಮರಾಜನಗರ ತಾಲ್ಲೂಕಿನ ಅಮಚವಾಡಿ ಸರ್ಕಾರಿ ಸಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತ ವಿಶೇಷ ಉಪನ್ಯಾಸ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರಾದ ಬಿ.ಕೆ.ದಾನೇಶ್ವರಿ ಉದ್ಘಾಟಿಸಿದರು   

ಚಾಮರಾಜನಗರ: ದುಷ್ಟರ ಸಹವಾಸದಿಂದ ಬದುಕು ಮುಳುಗಿದರೆ ಸಜ್ಜನರ ಸಹವಾಸದಿಂದ ಜೀವನ ಉನ್ನತಿಯತ್ತ ಸಾಗುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರಾದ ಬಿ.ಕೆ.ದಾನೇಶ್ವರಿ ಹೇಳಿದರು.

ಅಮಚವಾಡಿ ಸರ್ಕಾರಿ ಸಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತ ವಿಶೇಷ ಉಪನ್ಯಾಸ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಾದಕ ವಸ್ತುಗಳು ಮನುಷ್ಯನ ವಿನಾಶದ ವಸ್ತುಗಳಾಗಿವೆ. ಪ್ರಾರಂಭದಲ್ಲಿ ಕುತೂಹಲಕ್ಕಾಗಿ ಆರಂಭವಾಗುವ ವ್ಯಸನ ದೀರ್ಘ ಕಾಲದಲ್ಲಿ ದೇಹ ಮತ್ತು ಮನಸ್ಸನ್ನು ನಾಶಗೊಳಿಸುತ್ತದೆ ಎಂದು ಕಿವಿಮಾತು ಹೇಳಿದರು.

ಪ್ರತಿಯೊಬ್ಬರೂ ವ್ಯಸನಗಳಿಗೆ ಗುರಿಯಾಗದೆ ಜ್ಞಾನಗಳಾಗಿ ಜೀವನ ಸಾರ್ಥಕ ಪಡಿಸಿಕೊಂಡು ಆತ್ಮ ಬಲವನ್ನು ಹೆಚ್ಚಿಸಿಕೊಳ್ಳಬೇಕು. ಮನಸ್ಸಿಗೆ ಬೆಳಕು ನೀಡುವ ಧ್ಯಾನವನ್ನು ರೂಢಿಸಿಕೊಳ್ಳಬೇಕು. ಯುವಕರು ಜ್ಞಾನ ಸಂಪಾದನೆಗೆ ಒತ್ತು ನೀಡಿದರೆ ಬದುಕು ಸುಂದರವಾಗುವುದರ ಜೊತೆಗೆ ಸ್ವತಂತ್ರವಾದ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ADVERTISEMENT

ಮನಸ್ಸಿನ ಶಕ್ತಿ ಹೆಚ್ಚಾದರೆ ಏಕಾಗ್ರತೆಯೂ ಹೆಚ್ಚಲಿದೆ. ಪವಿತ್ರ ಸಂಕಲ್ಪಶಕ್ತಿಯನ್ನು ಹೊಂದಿ ಮನಸ್ಸನ್ನು ಕೇಂದ್ರೀಕರಿಸಿಕೊಂಡರೆ ದುಶ್ಚಟಗಳು ನಮ್ಮನ್ನು ಆವರಿಸಿಕೊಳ್ಳುವುದಿಲ್ಲ. ಯುವ ಪೀಳಿಗೆ ಮಾದಕ ವಸ್ತುಗಳ ಸೇವನೆಯನ್ನು ಬಹಿಷ್ಕರಿಸಿ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸಬೇಕು. ಕೆಟ್ಟವರ ಸಹವಾಸದಿಂದ ದೂರವಿದ್ದು ಪುಸ್ತಕಗಳನ್ನು ಪ್ರೀತಿಸಿ ಅಧ್ಯಯನಕ್ಕೆ ಒತ್ತು ನೀಡಬೇಕು.

ಶಾಲಾ ಕಾಲೇಜುಗಳಲ್ಲಿ ಮಾದಕ ವ್ಯಸನಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಹೆಚ್ಚೆಚ್ಚು ಜಾಗೃತಿ ಮೂಡಿಸಬೇಕು. ವ್ಯಸನಗಳಿಂದ ದೂರವಾಗಲು ಮನಸ್ಸನ್ನು ಯೋಗ, ಧ್ಯಾನ, ಪ್ರಾರ್ಥನೆ ಹಾಗೂ ದೃಢ ಸಂಕಲ್ಪದತ್ತ ಕೊಂಡೊಯ್ಯಬೇಕು ಎಂದರು.,

ಉಪನ್ಯಾಸಕ ಸುರೇಶ್‌ ಎನ್.ಋಗ್ವೇದಿ ಮಾತನಾಡಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಯುವಜನತೆ ಸೇರಿದಂತೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಚಿತ್ರಕಲೆ, ಪ್ರಬಂಧ ಸ್ಪರ್ಧೆ, ಕವನ ಸಂಕಲನ ಹಾಗೂ ಹಾಡುಗಾರಿಕೆಯ ಮೂಲಕ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸಬೇಕು. 

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶಿವಾನಂದಪ್ಪ ಮಾತನಾಡಿ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ, ಕವನಗಳ ರಚನೆ, ಹಾಡುಗಾರಿಕೆ ಆಯೋಜಿಸಲಾಗಿದ್ದು, ಸ್ವರಚಿತ ಕವನಗಳ ಮೂಲಕ ವಿದ್ಯಾರ್ಥಿಗಳು ಭಾಷಾ ಪ್ರೌಢಿಮೆ ಮೆರೆದಿರುವುದು ಸಂತಸ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಸವಣ್ಣ, ಸುರೇಶ್, ದೊಡ್ಡಮ್ಮ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ಆರಾಧ್ಯ ಇದ್ದರು.

ಪೋಷಕರು ಕಾಳಜಿ ವಹಿಸಿ

ಮಾದಕ ವಸ್ತುಗಳಿಗೆ ದಾಸರಾಗದಂತೆ ಪೋಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಕುಟುಂಬ ಹಾಗೂ ಸಮಾಜದ ನಿಷ್ಠೆ ಬೆಳೆಸಿಕೊಳ್ಳಬೇಕು ಶ್ರೇಷ್ಠ ವ್ಯಕ್ತಿಗಳಾಗಲು ದುಶ್ಚಟ ಮುಕ್ತ ಜೀವನ ಸಾಗಿಸಬೇಕು. ಆಂತರಿಕ ಹಾಗೂ ಬಾಹ್ಯದಿಂದ ಶುದ್ದಿ ಹೊಂದಿದರೆ ಮಾತ್ರ ಮನುಷ್ಯ ಪವಿತ್ರನಾಗುತ್ತಾನೆ ಸಮಾಜವೂ ಗೌರವಿಸುತ್ತದೆ. ವ್ಯಸನಗಳಿಗೆ ಬಲಿಯಾದರೆ ಜೀವನದ ಗುರಿ ನಾಶವಾಗುತ್ತದೆ ಎಂದು ಸಂಸ್ಕೃತಿ ಚಿಂತಕ ಸುರೇಶ್ ಋಗ್ವೇದಿ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.