ಹನೂರು: ಜಮೀನಿನಲ್ಲಿನ ಅರಿಸಿನ ಬೆಳೆಯನ್ನು ರಾತ್ರಿ ವೇಳೆ ಕಾವಲು ಕಾಯುತ್ತಿದ್ದ ರೈತನನ್ನು ಕಾಡಾನೆಯು ದಾಳಿ ಮಾಡಿ ಕೊಂದು ಹಾಕಿದೆ.
ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಮನ ಕತ್ತರಿ ಗ್ರಾಮದ ನಂಜಪ್ಪ(75) ಮೃತ ರೈತ. ಮಂಗಳವಾರ ರಾತ್ರಿ 2 ಗಂಟೆಯಲ್ಲಿ ಆನೆ ದಾಳಿ ಮಾಡಿದ್ದು, ನಂಜಪ್ಪ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.
ಘಟನೆ ತಿಳಿಯುತ್ತಿದ್ದಂತೆ ಮಲೈ ಮಹದೇಶ್ವರ ವನ್ಯ ಜೀವಿ ವಿಭಾಗದ ಡಿಎಫ್ಒ ಚಕ್ರಪಾಣಿ ಮತ್ತು ಆರ್‌ಎಫ್‌ಒ ಪುಟ್ಟರಾಜು ಹಾಗು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
‘ಅರಣ್ಯ ಇಲಾಖೆಯ ನಿರ್ಲಕ್ಷವೇ ಇಂತಹ ಘಟನೆಗಳಿಗೆ ಕಾರಣ. ಅರಣ್ಯದಂಚಿನಲ್ಲಿ ಸಮರ್ಪಕವಾಗಿ ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಿದರೆ ಇಂತಹ ಘಟನೆ ಜರುಗುವುದಿಲ್ಲ. ಹಾಗಾಗಿ ಸೂಕ್ತ ಕ್ರಮ ತೆಗೆದುಕೊಳ್ಳಿ’ ಎಂದು ಗ್ರಾಮಸ್ಥರು ಆಗ್ರಹಿಸಿದರು. ಸಚಿವ ಸಂಪುಟ ಸಭೆಯ ನಿರ್ಣಯದಂತೆ ಕುಟುಂಬಕ್ಕೆ ₹20 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಡಿಎಫ್ಓ ಚಕ್ರಪಾಣಿ ಮಾತನಾಡಿ, ‘ಮರಣೋತ್ತರ ಪರೀಕ್ಷೆ ನಡೆದ ನಂತರ ಮೃತರ ಸಂಬಂಧಿಕರಿಗೆ ₹5 ಲಕ್ಷ ನೀಡಲಾಗುವುದು. ವರದಿ ಬಂದ ನಂತರ ಇನ್ನೂ $10 ಲಕ್ಷ ರೂ ಪರಿಹಾರ ನೀಡಲಾಗುವುದು’ ಎಂದು ತಿಳಿಸಿದರು.
ಮೃತರಿಗೆ ಪತ್ನಿ, ಪುತ್ರ ಹಾಗೂ ಇಬ್ಬರೂ ಪುತ್ರಿಯರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.