ಚಾಮರಾಜನಗರ/ಹನೂರು: ಜಿಲ್ಲೆಯ ಬಿಆರ್‌ಟಿ, ಬಂಡೀಪುರ ರಕ್ಷಿತಾರಣ್ಯ ಹಾಗೂ ಮಲೆಮಹದೇಶ್ವರ, ಕಾವೇರಿ ವನ್ಯಧಾಮಗಳಲ್ಲಿ ಶುಕ್ರವಾರ ಆನೆ ಗಣತಿ ಕಾರ್ಯ ಆರಂಭವಾಯಿತು.
ಮೂರು ದಿನ ಗಣತಿ ನಡೆಯಲಿದ್ದು ಮೊದಲ ದಿನ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರತಿ ಬೀಟ್‌ನಲ್ಲಿ 15 ಕಿ.ಮೀ ನಡಿಗೆಯಲ್ಲಿ ಸಾಗಿ ಆನೆ ಬ್ಲಾಕ್‌ಗಳನ್ನು ಗುರುತಿಸಿ ಎಣಿಕೆ ಮಾಡಿದರು. ಗಣತಿ ಕಾರ್ಯ ಸುಗಮವಾಗಿ ನಡೆಯತ್ತಿದೆ. ಗಣತಿ ಮುಗಿದ ಬಳಿಕ ಮಾಹಿತಿ ಸಂಗ್ರಹಿಸಿ ಆನೆಗಳ ನಿಖರ ಮಾಹಿತಿಯನ್ನು ತಿಳಿಸಲಾಗುವುದು ಎಂದು ಎಂದು ಬಿಆರ್‌ಟಿ ನಿರ್ದೇಶಕ ಶ್ರೀಪತಿ ಪ್ರಜಾವಾಣಿಗೆ ಮಾಹಿತಿ
ನೀಡಿದರು.
ಗಣತಿಯ ಎರಡನೇ ದಿನ ನಡಿಗೆಯಲ್ಲಿ ಸಾಗಿ ಆನೆಯ ಲದ್ದಿ, ಹೆಜ್ಜೆ ಗುರುತುಗಳ ಆಧಾರದ ಮೇಲೆ ಗಣತಿ ನಡೆಯಲಿದೆ. ಮೂರನೇ ದಿನ ನೀರಿನ ಮೂಲಗಳ ಬಳಿ ಬೆಳಿಗ್ಗೆಯಿಂದ ಸಂಜೆಯವರೆಗೂ ಕಾದು ಗಂಡು, ಹೆಣ್ಣು ಹಾಗೂ ಮರಿ ಆನೆಗಳ ಗಣತಿ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕಾವೇರಿ ವನ್ಯಧಾಮದ ಕೊತ್ತನೂರು, ಸಂಗಮ, ಮುಗ್ಗೂರು, ಹಲಗೂರು, ಹನೂರು, ಕೌದಳ್ಳಿ, ಗೋಪಿನಾಥಂ, ಮಲೆಮಹದೇಶ್ವರ ವನ್ಯದಾಮ ವ್ಯಾಪ್ತಿಯ ಕೊಳ್ಳೇಗಾಲ, ಹನೂರು, ಪಿ.ಜಿ ಪಾಳ್ಯ, ರಾಮಾಪುರ, ಹೂಗ್ಯಂ, ಮಹದೇಶ್ವರ ಬೆಟ್ಟ ಹಾಗೂ ಪಾಲಾರ್ ವನ್ಯಜೀವಿ ವಲಯಗಳಲ್ಲೂ ಆನೆ ಗಣತಿ ನಡೆಯುತ್ತಿದ್ದು ಮೊದಲ ದಿನವೇ ಎಲ್ಲ ವಲಯಗಳಲ್ಲೂ ಆನೆಗಳು ಕಾಣಿಸಿಕೊಂಡಿವೆ. ಇನ್ನೆರಡು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳು ಕಾಣಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಕಾವೇರಿ ವನ್ಯದಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.