ADVERTISEMENT

ಚಾಮರಾಜನಗರ | ಮಳೆಯಾಶ್ರಿತ ಕೃಷಿ ಭೂಮಿ; ಹವಾಮಾನ ವೈಪರೀತ್ಯ, ಕಾಡುಪ್ರಾಣಿಗಳ ಹಾವಳಿ

ಬಾಲಚಂದ್ರ ಎಚ್.
Published 23 ಏಪ್ರಿಲ್ 2025, 5:04 IST
Last Updated 23 ಏಪ್ರಿಲ್ 2025, 5:04 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಚಾಮರಾಜನಗರ: ಜಿಲ್ಲೆಯ ಪರಿಮಿತಿಯೊಳಗೆ ಜೀವನದಿಗಳಾದ ಕಾವೇರಿ, ಕಬಿನಿ ಹರಿದರೂ, ಬೃಹತ್ ನೀರಾವರಿ ಯೋಜನೆಗಳಿಲ್ಲದೆ ಇಲ್ಲಿ ಮಳೆಯಾಶ್ರಿತ ಕೃಷಿಯೇ ಹೆಚ್ಚು.

ಯಳಂದೂರು, ಕೊಳ್ಳೇಗಾಲ ಹಾಗೂ ಚಾಮರಾಜನಗರ ತಾಲ್ಲೂಕಿನ ಭಾಗಶಃ ಪ್ರದೇಶಗಳಿಗೆ ಮಾತ್ರ ನೀರಾವರಿ ಸೌಲಭ್ಯಗಳಿವೆ. ಹನೂರು, ಗುಂಡ್ಲುಪೇಟೆ ಸಂಪೂರ್ಣ ಮಳೆಯಾಶ್ರಿತ ತಾಲ್ಲೂಕುಗಳಾಗಿವೆ. ಶೇ 50ಕ್ಕೂ ಹೆಚ್ಚು ಅರಣ್ಯ ಪ್ರದೇಶವಿದ್ದರೂ ಮಳೆಯ ಕೊರತೆ ಎದುರಾಗುತ್ತದೆ. ಅಂತರ್ಜಲಮಟ್ಟವೂ ಉತ್ತಮವಾಗಿಲ್ಲ.

‘ನಿರಂತರ ಕಾಡುಪ್ರಾಣಿಗಳ ಹಾವಳಿ, ಬೆಲೆ ಕುಸಿತ, ಹವಾಮಾನ ವೈಪರೀತ್ಯ ಸೇರಿದಂತೆ ಸಾಲು ಸವಾಲುಗಳ ಮಧ್ಯೆ ರೈತರು ಕೃಷಿ ಮಾಡಬೇಕು. ಬಹುತೇಕ ಗ್ರಾಮೀಣ ಭಾಗವನ್ನೇ ಹೊಂದಿರುವ ಜಿಲ್ಲೆಯಲ್ಲಿ ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರೆ ಜಿಲ್ಲೆಗೆ ಆರ್ಥಿಕ ಬಲ ಬಂದಂತಾಗುತ್ತದೆ. ಉದ್ಯೋಗಗಳೂ ಸೃಷ್ಟಿಯಾಗುತ್ತವೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು, ಸಂಪುಟ ಸಭೆಯಲ್ಲಿ ರೈತಪರ ಯೋಜನೆ ಘೋಷಿಸಬೇಕು’ ಎಂದು ಒತ್ತಾಯಿಸುತ್ತಾರೆ ರೈತ ಮುಖಂಡರು.

ADVERTISEMENT

ಜಿಲ್ಲೆಗೆ ಏನು ಬೇಕು: ಸಾಂಪ್ರದಾಯಿಕ ಭತ್ತದ ಕೃಷಿಗಿಂತ ತರಕಾರಿ ಬೆಳೆಯುವತ್ತ ರೈತರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಚಾಮರಾಜನಗರ, ಗುಂಡ್ಲುಪೇಟೆ, ಹನೂರು ಭಾಗಗಳಲ್ಲಿ ಬೆಳೆಯುವ ಹೆಚ್ಚಿನ ತರಕಾರಿ ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ನಿತ್ಯವೂ ಟನ್‌ಗಟ್ಟಲೆ ರಫ್ತಾಗುತ್ತದೆ. ಗುಣಮಟ್ಟ ಹಾಗೂ ತಾಜಾ ಎಂಬ ಕಾರಣಕ್ಕೆ ಹೊರ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚು, ಆದರೆ ಬೆಲೆ ತೀರಾ ಕಡಿಮೆ.

‘ತರಕಾರಿಗಳನ್ನು ಹೆಚ್ಚು ದಿನ ದಾಸ್ತಾನು ಇರಿಸಲು ಶೈಥ್ಯಾಗಾರಗಳ (ಕೋಲ್ಡ್ ಸ್ಟೋರೆಜ್ ಘಟಕ) ಕೊರತೆಯಿಂದ ರೈತರು ಸಿಕ್ಕಷ್ಟು ದರಕ್ಕೆ ಮಾರಾಟ ಮಾಡಬೇಕಾಗಿದೆ. ಸರ್ಕಾರ ಎಪಿಎಂಸಿ ಪ್ರಾಂಗಣಗಳಲ್ಲಿ ಬೃಹತ್ ಶೀಥಲೀಕರಣ ಘಟಕ ಸ್ಥಾಪಿಸಿದರೆ ಉತ್ತಮ ದರ ಸಿಕ್ಕಾಗ ಮಾರಾಟ ಮಾಡಬಹದು. ರಸ್ತೆಗೆ ಚೆಲ್ಲುವ ಪ್ರಮೇಯವೂ ಬರುವುದಿಲ್ಲ’ ಎನ್ನುತ್ತಾರೆ ಸಾಮೂಹಿಕ ನಾಯಕತ್ವದ ರೈತ ಸಂಘಟನೆಯ ಮುಖಂಡ ಹೊನ್ನೂರು ಪ್ರಕಾಶ್‌.

ಮೌಲ್ಯವರ್ಧನೆಗೆ ಬೇಕು ಒತ್ತು: ತರಕಾರಿ ಸಹಿತ ಆಹಾರ ಪದಾರ್ಥಗಳ ಮೌಲ್ಯವರ್ಧನೆಗೆ ಸಮರ್ಪಕ ವ್ಯವಸ್ಥೆ ಇಲ್ಲ. ಜಿಲ್ಲೆಯಿಂದ ನೇಂದ್ರ ಬಾಳೆ, ಅರಿಶಿನ, ಸಣ್ಣ ಈರುಳ್ಳಿ, ಎಳನೀರು, ಟೊಮೆಟೊ ಸಹಿತ ಇತರೆ ಆಹಾರ ಪದಾರ್ಥಗಳು ನೇರವಾಗಿ ರಫ್ತಾಗುತ್ತದೆ. ಇಲ್ಲಿಯೇ ಮೌಲ್ಯವರ್ಧನೆಗೆ ಪೂರಕವಾದ ಕೈಗಾರಿಕೆಗಳು ಸ್ಥಾಪನೆಯಾದರೆ ರೈತರಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಅರಿಸಿನ ಪುಡಿ, ಬಾಳೆ ಚಿಪ್ಸ್, ಹಿಟ್ಟು, ಈರುಳ್ಳಿ ಪುಡಿ, ಚಿಪ್ಸ್‌, ಶುಂಠಿ ಪೇಸ್ಟ್‌, ಟೊಮೆಟೊ ಸಾಸ್‌, ಪುಡಿ, ಎಳನೀರಿನಿಂದ ಹಲವು ಉಪ ಉತ್ಪನ್ನಗಳನ್ನು ತಯಾರಿಸಿ ಹೆಚ್ಚಿನ ಲಾಭ ಪಡೆಯಬಹುದು.

‘ಮೌಲ್ಯವರ್ಧನೆಗೆ ಪೂರಕವಾಗಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು, ಸೋಲಾರ್ ಡ್ರೈಯರ್‌ಗಳನ್ನು ಹಾಕಲು ರೈತರಿಗೆ ಅಥವಾ ಗುಂಪುಗಳಿಗೆ ಆರ್ಥಿಕ ನೆರವು ನೀಡಬೇಕು. ಸಹಕಾರಿ ಸಂಸ್ಥೆಗಳಿಂದಲೂ ಕೈಗಾರಿಕೆ ಆರಂಭಿಸಿ ಅನುಕೂಲ ಮಾಡಿಕೊಡಬಹುದು’ ಎನ್ನುತ್ತಾರೆ ರೈತರು.

ಕಾಡುಪ್ರಾಣಿಗಳ ಉಪಟಳ ತಪ್ಪಿಸಿ: ‘ವನ್ಯಧಾಮ, ಹುಲಿ ಸಂರಕ್ಷಿತ ಪ್ರದೇಶ, ಪರಿಸರ ಸೂಕ್ಷ್ಮ ವಲಯಗಳು ಜಿಲ್ಲೆಯಲ್ಲಿರುವುದರಿಂದ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಆಹಾರ ಅರಸಿ ಕಾಡುಬಿಟ್ಟು ನಾಡಿಗೆ ಬರುವ ಪ್ರಾಣಿಗಳು ಬೆಳೆ ನಾಶ ಮಾಡುತ್ತಿವೆ. ಅರಣ್ಯದ ಸುತ್ತಲೂ ರೈಲ್ವೆ ಬ್ಯಾರಿಕೇಡ್‌ ಅಳವಡಿಸಬೇಕು, ಬೆಳೆ ನಷ್ಟವಾದರೆ ವೈಜ್ಞಾನಿಕ ಬೆಳೆ ಪರಿಹಾರ ನೀಡಬೇಕು’ ಎಂದು ಸಲಹೆ ನೀಡುತ್ತಾರೆ ಹೊನ್ನೂರು ಪ್ರಕಾಶ್‌.

ಅರಿಸಿನ ತೋಟ
ಶುಂಠಿ ಬೆಳೆ ಸಂಗ್ರಹ ಚಿತ್ರ
ಬಾಳೆ

‘ಅಂತರ್ಜಲ ಮಟ್ಟ ಹೆಚ್ಚಿಸಿ’

‘ಜಿಲ್ಲೆಯಲ್ಲಿ ಖುಷ್ಕಿ ಭೂಮಿಯ ಪ್ರಮಾಣ ಹೆಚ್ಚಾಗಿದ್ದು ಸಣ್ಣ ರೈತರು ಉದ್ದು ಹೆಸರು ಅವರೆ ಕಡಲೆಕಾಯಿ ಸೂರ್ಯಕಾಂತಿ ಸಿರಿಧಾನ್ಯ ಬೆಳೆಯುತ್ತಾರೆ. ಇವರಿಗೆ ಸರ್ಕಾರದಿಂದ ಪ್ರೋತ್ಸಾಹ ದೊರೆಯಬೇಕು. ಭೂಮಿಗೆ ಬಿದ್ದ ಮಳೆಯ ನೀರನ್ನು ಇಂಗಿಸಬೇಕು ಕೆರೆಕಟ್ಟೆಗಳಿಗೆ ನೀರು ತುಂಬಿಸಬೇಕು ಹನೂರು ತಾಲ್ಲೂಕಿನಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸಿದರೆ ಅಂತರ್ಜಲ ಮಟ್ಟ ಹೆಚ್ಚಾಗಲಿದ್ದು ಕೃಷಿಗೆ ಅನುಕೂಲವಾಗಲಿದೆ’ ಎನ್ನುವರು ರೈತ ಮುಖಂಡ ಹೊನ್ನೂರು ಪ್ರಕಾಶ್‌.

ಕೃಷಿ ಭೂಮಿಯ ಪ್ರಮಾಣ; 1.07 ಲಕ್ಷ ಹೆಕ್ಟೇರ್‌

–ತೋಟಗಾರಿಕಾ ಬೆಳೆಯ ವಿಸ್ತೀರ್ಣ;60000 ಹೆಕ್ಟೇರ್

–ಮಳೆಯಾಶ್ರಿತ ಭೂಮಿ; 1.27 ಲಕ್ಷ ಹೆಕ್ಟೇರ್

–ನೀರಾವರಿ ಆಶ್ರಿತ ಭೂಮಿ;37 ಸಾವಿರ ಹೆಕ್ಟೇರ್ 

ಕಬಿನಿ 2ನೇ ಹಂತ ವಿಸ್ತರಣೆಯಾಗಲಿ’ ಕಬಿನಿ ಎರಡನೇ ಹಂತದ ನೀರಾವರಿ ಯೋಜನೆ ಜಾರಿಗೊಳಿಸಿದರೆ ನೀರಾವರಿ ಕೃಷಿ ಭೂಮಿಯ ಕ್ಷೇತ್ರ ಹೆಚ್ಚಾಗಲಿದೆ. ರೈತರ ಎಲ್ಲ ಬೆಳೆಗಳಿಗೂ ವಿಮಾ ಸೌಲಭ್ಯ ಜಾರಿಗೊಳಿಸಬೇಕು. ಕಾಡಂಚಿನ ಭಾಗದಲ್ಲಿ ಅಕ್ರಮ ಗಣಿಗಾರಿಕೆ ತಡೆಯಬೇಕು ಆನ್‌ಲೈನ್ ಜೂಜಿಗೆ ಕಡಿವಾಣ ಹಾಕಬೇಕು ರೈತರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಬೇಕು. 
ಮಹೇಶ್ ಕುಮಾರ್ ರೈತ ಮುಖಂಡ

‘ಕೆರೆಕಟ್ಟೆ ತುಂಬಿಸಿ’

ಅಂತರ್ಜಲ ವೃದ್ಧಿಗೆ ಕೆರೆಕಟ್ಟೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು ಕಬ್ಬಿನ ಬಾಕಿ 950 ಕೋಟಿ ಬಿಡುಗಡೆಗೆ ಆದೇಶಿಸಬೇಕು ಹಾಲಿನ ಪ್ರೋತ್ಸಾಹಧನ 1100 ಕೋಟಿ ಬಿಡುಗಡೆ ಮಾಡಬೇಕು ಕೃಷಿ ಸಮ್ಮಾನ್ ಯೋಜನೆಯ ರಾಜ್ಯದ ಪಾಲು ಮರು ಆರಂಭಿಸಬೇಕು ರೈತರ ಜಮೀನುಗಳಿಗೆ ಸಂಪರ್ಕ ರಸ್ತೆ ನಿರ್ಮಿಸಬೇಕು ಕಾಡುಪ್ರಾಣಿಗಳ ಹಾವಳಿ ತಡೆಗೆ ಬ್ಯಾರಿಕೇಡ್ ಟ್ರಂಚ್ ನಿರ್ಮಿಸಬೇಕು. –ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌ ಕರ್ನಾಟಕ ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.