ADVERTISEMENT

ಚಾಮರಾಜನಗರ: ಅಪರೂಪದ ಪಾತರಗಿತ್ತಿಗಳ ಆಗಮನ

ಮುಂಗಾರಿನ ಮಂಜಿನ ಪರಿಸರದಲ್ಲಿ ಬಣ್ಣದ ಚಿಟ್ಟೆಗಳ ಆಟ

ನಾ.ಮಂಜುನಾಥ ಸ್ವಾಮಿ
Published 11 ಜುಲೈ 2020, 19:31 IST
Last Updated 11 ಜುಲೈ 2020, 19:31 IST
ಯಳಂದೂರು ತಾಲ್ಲೂಕಿನ ಪರಿಸರದಲ್ಲಿ ಕಂಡು ಬಂದ ಮೋಹಕ ಬಣ್ಣದಿಂದ ಗಮನ ಸೆಳೆಯುವ ಪತಂಗ
ಯಳಂದೂರು ತಾಲ್ಲೂಕಿನ ಪರಿಸರದಲ್ಲಿ ಕಂಡು ಬಂದ ಮೋಹಕ ಬಣ್ಣದಿಂದ ಗಮನ ಸೆಳೆಯುವ ಪತಂಗ   

ಯಳಂದೂರು:ಮುಂಗಾರಿನ ವರ್ಷಧಾರೆಗೂ, ಪೊದೆ ಪುಷ್ಪಗಳ ಅರಳುವಿಕೆಗೂ ಇನ್ನಿಲ್ಲದ ನಂಟು. ಚಿತ್ತಾಕರ್ಷಕ ಗಿಡಗಳಲ್ಲಿ ಉದಿಸುವ ಗಾಡ ವರ್ಣದ ಹೂಗಳು, ಪರಿಸರದ ಅಂದವನ್ನು ಹೆಚ್ಚಿಸುವ ಜೊತೆಗೆ ಪತಂಗಗಳ ಆಕರ್ಷಣೆಗೂ ಕಾರಣವಾಗುತ್ತದೆ. ಕೆಲವು ದಿನಗಳಿಂದೀಚೆಗೆಸುರಿಯುತ್ತಿರುವ ತುಂತರು ಮಳೆ, ಓಡಾಡುವ ಮೇಘಗಳ ನಡುವೆ ಇಣುಕುವ ಸೂರ್ಯ ರಶ್ಮಿಗೆ ರೆಕ್ಕೆ ಅಗಲಿಸಿ ಎಲ್ಲೆಂದರಲ್ಲಿ ಕೂರುವ ಚಿಟ್ಟೆಗಳು ಎಲ್ಲರ ಕಣ್ಮನ ಸೆಳೆಯುತ್ತಿವೆ.

ತಾಲ್ಲೂಕಿನಾದ್ಯಂತ ಜುಲೈ ವೇಳೆಗೆ ಸುರಿಯುವ ಮಳೆಗೆ ಸಸ್ಯರಾಶಿ ಚಿಗುರುತ್ತದೆ. ಗಿಡಗಳನ್ನು ಮೆಲ್ಲುತ್ತಲೇ ಲಾರ್ವಗಳೆಲ್ಲ ಕೋಶಾವಸ್ಥೆಗೆ ತಲುಪಿ, ಚಿತ್ತಾರದ ಬಣ್ಣ ಹೊದ್ದು ಚಿಟ್ಟೆಯಾಗಿ ವಿಕಸಿಸುತ್ತವೆ. ಇಂತಹ ಕಾಲಮಾನದಲ್ಲಿ ನೂರಾರು ಪ್ರಭೇದದ ಪತಂಗಗಳು ಲತೆ ಅರಸುತ್ತ, ಪರಾಗ ಸ್ಪರ್ಶ ಮಾಡುವುದು ನಿಸರ್ಗ ಪ್ರಿಯರಲ್ಲಿ ಆಹ್ಲಾದ ಉಂಟು ಮಾಡುತ್ತದೆ.

ರಸ್ತೆ ಬದಿ, ಗದ್ದೆ, ಹೊಲಗಳ ಸುತ್ತ ಬಣ್ಣದ ರಂಗೋಲಿ ತೇಲಿದಂತೆ, ಇದರ ಹಿಂದೋಡುವ ಚಿಣ್ಣರ ಸದ್ದು ಈಗ ತಾಲ್ಲೂಕಿನಾದ್ಯಂತ ಗಮನ ಸೆಳೆಯುತ್ತಿದೆ.

ADVERTISEMENT

‘ಟ್ರೊಯಿಡಸ್ ಮೈನೂಸ್‌ ಕುಟುಂಬದ ಸದರ್ನ್‌ ಬರ್ಡ್‌ ವಿಂಗ್‌ ಈ ಭಾಗದ ದೊಡ್ಡಗಾತ್ರದ ಚಿಟ್ಟೆ. ಮಳೆಗಾಲದಲ್ಲಿ ಮರಗಳ ಎತ್ತರದಲ್ಲಿ ಹಾರಾಡುತ್ತಾ ಗಮನ ಸೆಳೆಯುತ್ತದೆ. ಲಂಟಾನಾ ಮತ್ತು ಇಕ್ಸೋರ ಗಿಡಗಳಿಂದ ಮಕರಂದ ಹೀರಲು ಆಗಾಗ ಕೆಳಗೆ ಬರುತ್ತವೆ’ ಎನ್ನುತ್ತಾರೆ ಏಟ್ರೀ ಕ್ಷೇತ್ರಪಾಲಕ ಜಡೇಸ್ವಾಮಿ.

‘ಅಟ್ಟಾಕಸ್‌ ಅಟ್ಲಾಸ್ (ಅಟ್ಲಾಸ್‌ ಮಾಥ್‌) ಭಾರತದ ಚಿಟ್ಟೆಗಳಲ್ಲಿ ಅತಿ ದೊಡ್ಡದು. ರೇಷ್ಮೆ ಪತಂಗದ ಸಮೀಪದ ಸಂಬಂಧಿ. ಹಗಲಿನಲ್ಲಿ ಸುತ್ತಲಿನ ಪರಿಸರದ ಬಣ್ಣವನ್ನೇ ಹೊದ್ದು, ನಿಶ್ಚಲವಾಗಿ ರೆಕ್ಕೆ ಬಿಡಿಸಿ ವಿರಮಿಸುತ್ತದೆ. ಪತ್ತೆ ಹಚ್ಚುವುದು ಕಷ್ಟ. ಆದರೆ, ಬಿಆರ್‌ಟಿ ದಟ್ಟಾರಣ್ಯದಲ್ಲಿ ಇದನ್ನು ಸಾಕಷ್ಟು ಕಾಣಬಹುದು’ ಎಂದು ಅವರು ಹೇಳಿದರು.

‘ಇತ್ತೀಚಿಗೆ ದಟ್ಟ ಪೊದೆಗಳ ಬಳಿ, ಮುಂಜಾನೆ ಮತ್ತು ಸಂಜೆಯ ಎಳೆ ಬಿಸಿಲಿನಲ್ಲಿ ಅಂಗೈ ಅಗಲದ ಪತಂಗಗಳು ಕಾಣಿಸಿಕೊಂಡಿವೆ. ದಾಸವಾಳ, ಬಿಳಿ ಮತ್ತು ಹಳದಿ ಹೂಗಳ ಗಿಡಗಳಲ್ಲಿ ಕುಳಿತು ರೆಕ್ಕೆ ಬಿಚ್ಚುವುದನ್ನು ವೀಕ್ಷಿಸಬಹುದು. ಮಲಬಾರ್ ಬ್ಯಾಂಡೆಡ್‌, ಲೆಸ್ಸರ್‌ ಗ್ರಾಸ್‌ ಬ್ಲೂ, ಕಾಮನ್‌ ಬ್ಲೂ ಅಪೊಲೊ, ಮೈಮ್‌, ಕ್ರೋ ಮೊದಲಾದ ಇಂಗ್ಲಿಷ್‌ ಹೆಸರುಗಳ ಪತಂಗ ಸಂಕುಲವನ್ನು ಗುರುತಿಸಬಹುದು’ ಎಂದು ಜೀವ ವಿಜ್ಞಾನ ಶಿಕ್ಷಕ ನಿಂಗರಾಜು ಹೇಳಿದರು.

ಚಿಟ್ಟೆಗಳ ಜೀವಿತಾವಧಿ ಕೆಲವೇ ವಾರಗಳು. ಅಲ್ಲಿಯ ತನಕ ಮನುಕುಲಕ್ಕೆ ಬೇಕಾದ ಸಸ್ಯ ಸಂಕುಲಗಳ ವಂಶಾಭಿವೃದ್ಧಿಗೆ ಕಾರಣವಾಗುತ್ತವೆ. ಪರಿಸರದ ಶುದ್ಧತೆಯ ಅಳತೆ ಗೋಲಾಗಿ ಗುರುತಿಸಲಾಗಿದೆ. ಅಪರೂಪದ ಚಿಟ್ಟೆ ಸಂತತಿ ಉಳಿಸಲು ಚಿಟ್ಟೆ ವನಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಅತಿಯಾದ ಕೀಟ ನಾಶಕ ಬಳಕೆ ಮತ್ತು ಹಸಿರು ಪರಿಸರದ ನಾಶ ಇವುಗಳ ಬದುಕಿಗೆ ಕುತ್ತಾಗಿ ಕಾಡುತ್ತಿವೆ ಎಂದು ಹೇಳುತ್ತಾರೆ ಜೀವ ವಿಜ್ಞಾನಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.