ಹನೂರು: ಗಡಿಭಾಗದಲ್ಲಿರುವ ಹನೂರು ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ರೈತ ಸಂಘಟನೆ ಕಾರ್ಯಕರ್ತರು ಮಂಗಳವಾರ ಬೈಕ್ ರ‍್ಯಾಲಿ ನಡೆಸಿದರು.
ನಾಲ್ ರೋಡ್‌ನಿಂದ ಹೊರಟ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ರಸ್ತೆಯುದ್ದಕ್ಕೂ ಘೋಷಣೆ ಕೂಗಿದರು.
ಮಾರ್ಟಳ್ಳಿ, ಕುರಟ್ಟಿ ಹೊಸೂರು ಹಾಗೂ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು ಭೌಗೋಳಿಕ ವಿಸ್ತೀರ್ಣ ಸಾವಿರಾರೂ ಎಕರೆ ಪ್ರದೇಶ ಹೊಂದಿದ್ದು, ಕೃಷಿ ಭೂಮಿ ಕೂಡ ಸಾವಿರಾರು ಎಕರೆ ಇದೆ. ಮೂರು ಪಂಚಾಯಿತಿಗಳಿಂದ 37ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ಇದರಲ್ಲಿ ಅತಿ ಹೆಚ್ಚು ಜನ ಕೃಷಿಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಕಳೆದ 22 ವರ್ಷಗಳಿಂದಲೂ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ತಗ್ಗಿ, ಸಾವಿರಾರು ಎಕರೆ ಕೃಷಿ ಪ್ರದೇಶ ಮಳೆ ಇಲ್ಲದೆ ಬರಡಾಗಿದೆ. ಅಂತರ್ಜಲ ಮಟ್ಟ 1,300ಕ್ಕೂ ಹೆಚ್ಚು ಅಡಿ ಆಳಕ್ಕೆ ಕುಸಿದಿದ್ದು, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಜನರಿಗೆ ಶುದ್ಧ ಕುಡಿಯುವ ನೀರು ದೊರಕದೆ ಅನೇಕ ರೀತಿಯ ರೋಗಗಳಿಗೆ ತುತ್ತಾಗಿದ್ದಾರೆ. ಈಗಾಗಲೇ ಅನೇಕ ಬಾರಿ ದಂಟಳ್ಳಿ ಮಾರ್ಗವಾಗಿ ಕಾವೇರಿ ನದಿಯಿಂದ ಅಂತರ್ಜಲ ಅಭಿವೃದ್ಧಿಗೆ ಯೋಜನೆ ರೂಪಿಸಿ ರೈತರ ಬದುಕು ಹಸನು ಮಾಡಿ ಎಂದು ಮನವಿಗಳನ್ನು ಸಲ್ಲಿಸಲಾಗಿದೆ. ಆದರೂ ಯವುದೇ ಪ್ರಯೋಜನವಾಗಿಲ್ಲ. ಜನರು ಊರುಗಳನ್ನು ಬಿಟ್ಟು ಬೇರೆ ಕಡೆಗಳಿಗೆ, ಪಕ್ಕದ ರಾಜ್ಯಗಳಾದ ತಮಿಳುನಾಡು, ಕೇರಳಕ್ಕೆ ಗುಳೆಹೋಗುತ್ತಿದ್ದಾರೆ ಎಂದು ಪ್ರತಿಭಟನಕಾರರು ಸಮಸ್ಯೆಗಳನ್ನು ಎಳೆಎಳೆಯಾಗಿ ತೆರೆದಿಟ್ಟರು.
ಪಂಚಾಯಿತಿಗಳಲ್ಲಿ, ಉದ್ಯೋಗ ಖಾತ್ರಿ ಯೋಜನೆ ಸರಿಯಾಗಿ ಮಾನವ ಶ್ರಮಗಳಿಂದ ನಡೆಯುತ್ತಿಲ್ಲ, ಜೀವನಕ್ಕಾಗಿ ಬೇರೆ ಕಡೆ ಗುಳೆ ಹೋಗಿರುವ ರೈತರು ಹಾಗೂ ಕೂಲಿ ಕಾರ್ಮಿಕರು ವಾಪಸ್ ತಮ್ಮ ಗ್ರಾಮಗಳಿಗೆ ಮರಳಲು ಪ್ರಮುಖ ಬೇಡಿಕೆಗಳನ್ನು ತುರ್ತಾಗಿ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮಗಳು ಕಾವೇರಿ ನದಿ ತೀರದಿಂದ ಕೇವಲ 10-15 ಕಿಲೋಮೀಟರ್ ವ್ಯಾಪ್ತಿಯಲ್ಲಿರುವುದರಿಂದ ಗ್ರಾಮಗಳಿಗೆ ಕಾವೇರಿ ನೀರು ಒದಗಿಸಬೇಕು. ಮಾರ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿರುವ ಪುರಾತನ ಕೆರೆಗಳಾದ ಹಾಲೇರಿ ಕೆರೆ, ಕೀರಪಾತಿ ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರು ತುಂಬಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಿ ರೈತರಿಗೆ ಅನುಕೂಲ ಆಗುತ್ತದೆ. ಅರಣ್ಯ ಪ್ರದೇಶದಲ್ಲಿ ನೀರಿಗಾಗಿ ಪರಿತಪಿಸುತ್ತಿರುವ ಪ್ರಾಣಿ, ಪಕ್ಷಿ, ಜಾನುವಾರುಗಳಿಗೂ ನೀರು ಸಿಗಲಿದೆ. ಹಾಗೆಯೇ, ವಡಕ್ಕೆ ಹಳ್ಳ ಗ್ರಾಮದ ದೊಡ್ಡಹಳ್ಳಕ್ಕೆ ದಂಟಳ್ಳಿ ಮಾರ್ಗವಾಗಿ ಕಾವೇರಿ ನದಿಯಿಂದ ನೀರು ಹರಿಸುವುದರಿಂದ ಸಾವಿರಾರು ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚುತ್ತದೆ. ಕುರಟ್ಟಿ ಹೊಸೂರು ಹಾಗೂ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ಹಾಗೂ ಹಳ್ಳ-ಕೊಳ್ಳಗಳಿಗೆ ನೀರು ಹರಿಸುವುದರಿಂದ ಸಾವಿರಾರು ಕೊಳವೆ ಬಾವಿಗಳಲ್ಲೂ ಸಹ ಅಂತರ್ಜಲ ಮರುಪೂರಣ ಮಾಡಿದಂತಾಗುತ್ತದೆ. ಜೆತೆಗೆ ದಂಟಳ್ಳಿ ಪಕ್ಕದಲ್ಲಿ ಹರಿಯುವ ಕಾವೇರಿ ನದಿಗೆ ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.