ADVERTISEMENT

ಯಳಂದೂರು: ಕಾಲುಬಾಯಿ ಜ್ವರ ಮುಕ್ತ ತಾಲ್ಲೂಕಿಗೆ ಪಣ

ಅ. 14 ರಿಂದ 23 ರವರೆಗೆ ಕಾಲುಬಾಯಿ ಜ್ವರ ಲಸಿಕಾ ಅಭಿಯಾನ

ನಾ.ಮಂಜುನಾಥ ಸ್ವಾಮಿ
Published 10 ಅಕ್ಟೋಬರ್ 2019, 20:00 IST
Last Updated 10 ಅಕ್ಟೋಬರ್ 2019, 20:00 IST
ಯಳಂದೂರು ಪಟ್ಟಣದ ಪಶು ಇಲಾಖೆ ಆವರಣದಲ್ಲಿ ವೈದ್ಯ ಡಾ. ನಾಗರಾಜು ಅವರು ರೋಗ ಪೀಡಿತ ಹಸುವಿಗೆ ಚಿಕಿತ್ಸೆ ನೀಡುತ್ತಿರುವುದು
ಯಳಂದೂರು ಪಟ್ಟಣದ ಪಶು ಇಲಾಖೆ ಆವರಣದಲ್ಲಿ ವೈದ್ಯ ಡಾ. ನಾಗರಾಜು ಅವರು ರೋಗ ಪೀಡಿತ ಹಸುವಿಗೆ ಚಿಕಿತ್ಸೆ ನೀಡುತ್ತಿರುವುದು   

ಯಳಂದೂರು: ಜಾನುವಾರುಗಳಿಗೆ ಬಾಧಿಸುವ ಕಾಲುಬಾಯಿ ಜ್ವರವನ್ನು ಹತೋಟಿಗೆ ತಂದು ಎಲ್ಲಗ್ರಾಮಗಳನ್ನು ಕಾಲುಬಾಯಿ ಜ್ವರ ಮುಕ್ತ ಪ್ರದೇಶವಾಗಿ ಮಾಡಲು ತಾಲ್ಲೂಕು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಪಣ ತೊಟ್ಟಿದೆ.

ಜಿಲ್ಲೆಯಾದ್ಯಂತ ಇದೇ 14ರಿಂದ 23ರವರೆಗೆ ಕಾಲುಬಾಯಿ ಜ್ವರ ಲಸಿಕಾ ಅಭಿಯಾನ ನಡೆಯಲಿದ್ದು, ಅದರಂತೆ ತಾಲ್ಲೂಕಿನಲ್ಲೂ ಸಿಬ್ಬಂದಿ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ.

ತಾಲ್ಲೂಕಿನ ಕೃಷಿಕರ ಪ್ರಧಾನ ಕಸುಬು ಹೈನುಗಾರಿಕೆ. ಬಹುಪಾಲು ರೈತರು ಕೃಷಿಯೊಂದಿಗೆಕುರಿ, ಆಡನ್ನು ಸಾಕುತ್ತಾರೆ. ಹೀಗಾಗಿ ಪ್ರಮುಖ ಆದಾಯದ ಮೂಲವಾಗಿ ಜಾನುವಾರು ಸಾಕಣೆ ಮಾಡುತ್ತಾರೆ. ಮಹಿಳೆಯರು ಹಸು, ಎಮ್ಮೆ ಹಾಲನ್ನು ಡೇರಿಗೆ ಹಾಕುವ ಮೂಲಕ ಆದಾಯ ಪಡೆಯುತ್ತಿದ್ದಾರೆ.

ADVERTISEMENT

ಇಲಾಖೆಯ ಅಂಕಿ ಅಂಶಗಳ ಪ್ರಕಾರ,ತಾಲ್ಲೂಕಿನಲ್ಲಿ 10,899 ಜಾನುವಾರುಗಳಿವೆ. 9,623 ದನಗಳು, 1,262 ಎಮ್ಮೆಗಳು, 14 ಹಂದಿ, ಕುರಿ ಹಾಗೂ ಮೇಕೆಗಳಿವೆ. ಕಾಲುಗಳಲ್ಲಿ ಗೊರಸು ಹೊಂದಿರುವ ದನ, ಎಮ್ಮೆ, ಹಂದಿ, ಕುರಿ ಹಾಗೂ ಮೇಕೆಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಮಾರ್ಚ್–ಏಪ್ರಿಲ್ ತಿಂಗಳಲ್ಲಿಈ ರೋಗ ಕಾಣಿಸಿಕೊಳ್ಳುವುದು ಹೆಚ್ಚು.

2018ರಲ್ಲಿ ತಾಲ್ಲೂಕಿನ 28 ಗ್ರಾಮಗಳಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿತ್ತು. ಹಸು, ಕರು ಮತ್ತು ಎಮ್ಮೆ ಸೇರಿದಂತೆ 22 ಜಾನುವಾರುಗಳಿಗೆ ಈ ರೋಗ ತಗುಲುತ್ತದೆ.

ಪಂಚಾಯಿತಿ ಸಿಬ್ಬಂದಿ ನೆರವು: ‘ಆಶಾ ಕಾರ್ಯಕರ್ತೆಯರು, ಪಿಡಿಒ ಮತ್ತು ಎಲ್ಲ ಗ್ರಾಮ ಪಂಚಾಯಿತಿ ಸಿಬ್ಬಂದಿ 14ರಿಂದ 23ರವರೆಗೆ ನಡೆಯಲಿರುವ ಲಸಿಕಾ ಅಭಿಯಾನಕ್ಕೆ‌ ನೆರವಾಗಲಿದ್ದಾರೆ. ಈ ಹಿಂದೆ 15 ಸುತ್ತುಗಳಲ್ಲಿ ಜ್ವರದ ಲಸಿಕೆ ಹಾಕಲಾಗಿತ್ತು. ಇದೇ ಮೊದಲ ಬಾರಿಗೆ 16ನೇ ಸುತ್ತಿನಲ್ಲಿ ಕುರಿ ಮತ್ತು ಮೇಕೆಗಳಿಗೂ ಲಸಿಕೆ ಹಾಕಲಾಗುತ್ತದೆ. 10 ದಿನಗಳ ಅಭಿಯಾನದಲ್ಲಿ ಎಲ್ಲ ಜಾನುವಾರುಗಳಿಗೆ ಜ್ವರ ನಿರೋಧಕ ಲಸಿಕೆ ಹಾಕುವ ಗುರಿ ನಿಗದಿ ಪಡಿಸಲಾಗಿದೆ’ ಎಂದುತಹಶೀಲ್ದಾರ್ ವರ್ಷಾ ಒಡೆಯರ್ ಹೊಸಹಳ್ಳಿ ಅವರುಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದರು.

‘ಅಭಿಯಾನಕ್ಕೆ 12 ಲಸಿಕೆದಾರರು ಮತ್ತು ಮೇಲ್ವಿಚಾರಕರನ್ನು ಒಳಗೊಂಡ 3 ವಿಶೇಷ ತಂಡ ರಚಿಸಲಾಗಿದೆ. ಸಿಬ್ಬಂದಿಯು ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ನೀಡುತ್ತಾರೆ’ ಎಂದರು.

‘ತಾಲ್ಲೂಕನ್ನು ಕಾಲುಬಾಯಿ ಜ್ವರ ಮುಕ್ತ ಮಾಡಲು ಲಸಿಕೆ ಅಭಿಯಾನ ಆಯೋಜಿಸಲಾಗಿದೆ. ಅಭಿಯಾನಕ್ಕೆ 3 ವಾಹನ ಬಳಸಿಕೊಳ್ಳಲಾಗುತ್ತಿದೆ. 3 ತಿಂಗಳ ಮೇಲಿನ ಎಲ್ಲ ಜಾನುವಾರುಗಳಿಗೂ ಕಡ್ಡಾಯವಾಗಿ ಲಸಿಕೆ ನೀಡಲಾಗುತ್ತದೆ’ ಎಂದು ಯಳಂದೂರು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜಿ.ಎನ್. ನಾಗರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.