ಸಂತೇಮರಹಳ್ಳಿ: ‘ಜಾನುವಾರುಗಳ ಆರೋಗ್ಯ ಕಾಪಾಡುವ ಹಿನ್ನೆಲೆಯಲ್ಲಿ ರೈತರು ಕಡ್ಡಾಯವಾಗಿ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಲು ಮುಂದಾಗಬೇಕು’ ಎಂದು ಪಶು ವೈದ್ಯಾಧಿಕಾರಿ ಡಾ.ರಾಘವೇಂದ್ರ ತಿಳಿಸಿದರು.
ಸಮೀಪದ ಹೆಗ್ಗವಾಡಿಪುರ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಸಂತೇಮರಹಳ್ಳಿ ಪಶು ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 7ನೇ ಸುತ್ತಿನ ಕಾಲುಬಾಯಿ ಹಾಗೂ ಚರ್ಮಗಂಟು ರೋಗ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
‘ಜಾನುವಾರುಗಳ ಬಾಯಿಯಲ್ಲಿ ಹಾಗೂ ಕಾಲಿನಲ್ಲಿ ಹುಣ್ಣೆ, ಅತಿಯಾದ ಜ್ವರ ವೈರಸ್‌ನಿಂದ ರೋಗ ಕಾಣಿಸಿಕೊಳ್ಳುತ್ತದೆ. ಇಂತಹ ರೋಗ ಲಕ್ಷಣ ಕಂಡು ಬಂದ ಕೂಡಲೇ ಸ್ಥಳೀಯ ಪಶು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸಬೇಕು. ಸಂತೇಮರಹಳ್ಳಿ ಪಶು ಆಸ್ಪತ್ರೆ ವ್ಯಾಪ್ತಿಗೆ ಕಾವುದವಾಡಿ, ಬಸವಟ್ಟಿ, ದೇಶವಳ್ಳಿ, ಹೆಗ್ಗವಾಡಿಪುರ, ಚುಂಗಡಿಪುರ, ಹೊಸಮೋಳೆ, ನಡುಕಲಮೋಳೆ, ಕೆಂಪನಪುರ ಹಾಗೂ ಸಂತೇಮರಹಳ್ಳಿ ಸೇರಿದಂತೆ 9 ಗ್ರಾಮಗಳು ಒಳಗೊಂಡಿದ್ದು, 1609 ಹಸು, 90 ಎಮ್ಮೆಗಳಿವೆ. ಈಗಾಗಲೇ ಏ.26 ರಿಂದ ಜೂನ್9ರವರೆಗೆ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈಗಾಗಲೆ ಸಿಬ್ಬಂದಿ ಮನೆ ಬಾಗಿಲಿಗೆ ತೆರಳಿ 1200 ಜಾನುವಾರುಗಳಿಗೆ ಲಸಿಕೆ ಹಾಕಿದ್ದಾರೆ. ಯಾರೂ ಉದಾಸೀನ ಮಾಡದೇ ತಮ್ಮ ಜಾನುವಾರುಗಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು’ ಎಂದು ತಿಳಿಸಿದರು.
ಪಶು ಆಸ್ಪತ್ರೆ ಸಿಬ್ಬಂದಿ ಮಹದೇವಸ್ವಾಮಿ, ಪಶು ಸಖಿಯರಾದ ಸುಂದರಮ್ಮ, ಮಂಜುಳಾ, ರಾಜೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.