ADVERTISEMENT

‘ಅರಣ್ಯದೊಳಗೆ ಜಾನುವಾರು ನಿರ್ಬಂಧ ಆದೇಶ ರದ್ದುಪಡಿಸಿ’

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:57 IST
Last Updated 26 ಜುಲೈ 2025, 6:57 IST
ಅರಣ್ಯದೊಳಗೆ ಜಾನುವಾರುಗಳ ನಿರ್ಬಂಧ ಖಂಡಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ಶುಕ್ರವಾರ ಚಾಮರಾಜನಗರದ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು
ಅರಣ್ಯದೊಳಗೆ ಜಾನುವಾರುಗಳ ನಿರ್ಬಂಧ ಖಂಡಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ಶುಕ್ರವಾರ ಚಾಮರಾಜನಗರದ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು   

ಚಾಮರಾಜನಗರ: ಅರಣ್ಯದೊಳಗೆ ಜಾನುವಾರುಗಳಿಗೆ ಪ್ರವೇಶ ನಿರ್ಬಂಧಿಸಿ ಕಾಡಂಚಿನ ರೈತರಿಗೆ ಕಿರುಕುಳ ನೀಡಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಶುಕ್ರವಾರ ಎಚ್ಚರಿಕೆ ನೀಡಿದರು.

ನಗರದ ಅರಣ್ಯ ಇಲಾಖೆ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಸರ್ಕಾರಕ್ಕೆ ಅರಣ್ಯ ಸಂವರ್ಧನೆ ಮಾಡುವ ಕಾಳಜಿ ಇದ್ದರೆ ಕಾಡಿನೊಳಗೆ ನಿಯಮಬಾಹಿರವಾಗಿ ನಿರ್ಮಿಸಿರುವ ಅಕ್ರಮ ರೆಸಾರ್ಟ್‌, ಹೋಂ ಸ್ಟೇ, ಜಂಗಲ್‌ ಲಾಡ್ಜ್‌ ಹಾಗೂ ಕಟ್ಟಡ‌ಗಳನ್ನು ತೆರವುಗೊಳಿಸಲಿ, ಗಣಿಗಾರಿಕೆ ನಿಷೇಧಿಸಲಿ, ಜಾನುವಾರುಗಳು ಮೇಯಲು ಅಡ್ಡಿಪಡಿಸಬಾರದು ಎಂದು ಒತ್ತಾಯಿಸಿದರು.

ಮದ್ರಾಸ್ ಹೈಕೋರ್ಟ್ ಆದೇಶ ಮುಂದಿಟ್ಟುಕೊಂಡು ಅರಣ್ಯದೊಳಗೆ ಜಾನುವಾರುಗಳು ಮೇಯಲು ಅಡ್ಡಿಪಡಿಸಬಾರದು. ಮಲೆ ಮಹದೇಶ್ವರ ವನ್ಯಜೀವಿ ವಲಯದಲ್ಲಿ 5 ಹುಲಿಗಳ ಅಸಹಜ ಸಾವಿಗೆ ಸರ್ಕಾರ ಮತ್ತು ಅರಣ್ಯ ಇಲಾಖೆ ನೇರ ಹೊಣೆ. ಅಧಿಕಾರಿಗಳ ನಡುವಿನ ಸಂವಹನ ಕೊರತೆ, ಗಸ್ತು ವ್ಯವಸ್ಥೆಯಲ್ಲಿನ ಲೋಪ ದುರಂತಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಗೊಬ್ಬರಕ್ಕಾಗಿ ತಮಿಳುನಾಡಿನಿಂದ ಅಕ್ರಮವಾಗಿ ಜಾನುವಾರುಗಳನ್ನು ತಂದು ಕಾಡಿನೊಳಗೆ ಮೇಯಿಸುತ್ತಿರುವುದು, ಹೊರ ರಾಜ್ಯಗಳಿಗೆ ಗೊಬ್ಬರ ಮಾರಾಟ ಮಾಡುತ್ತಿರುವುದು ಕಂಡುಬಂದರೆ ಕ್ರಮ ಕೈಗೊಳ್ಳಲಿ. ನೆರೆ ರಾಜ್ಯದ ಜಾನುವಾರುಗಳು ರಾಜ್ಯದ ಗಡಿ ಪ್ರವೇಶಿಸದಂತೆ ತಡೆಯೊಡ್ಡಲಿ. ಅರಣ್ಯದಂಚಿನಲ್ಲಿರುವ ರೈತರ ಜಾನುವಾರು ಸಮೀಕ್ಷೆ ನಡೆಸಿ ಕಾಡಿನೊಳಗೆ ಮೇಯಿಸಲು ಅವಕಾಶ ನೀಡಬೇಕು ಎಂದು ಕರೆಹಳ್ಳಿ ಹುಂಡಿ ಭಾಗ್ಯರಾಜ್ ಆಗ್ರಹಿಸಿದರು.

ದಶಕಗಳಿಂದ ಕಾಡಂಚಿನ ರೈತರು ಅರಣ್ಯದೊಳಗೆ ಜಾನುವಾರುಗಳನ್ನು ಮೇಯಿಸುತ್ತಿದ್ದು ಸಹಜೀವನ ನಡೆಸಿಕೊಂಡು ಬಂದಿದ್ದಾರೆ. ಮಾನವ–ಪ್ರಾಣಿ ಸಂಘರ್ಷದಿಂದ ರೈತರು ರೋಸಿ ಹೋಗಿದ್ದಾರೆ. ಸರ್ಕಾರ ನಿಯಮಗಳ ನೆಪವೊಡ್ಡಿ ಕಾಡಂಚಿನ ರೈತರ ಬದುಕನ್ನು ಕಿತ್ತುಕೊಳ್ಳಬಾರದು, ಕಾಡಿನೊಳಗೆ ಜಾನುವಾರು ಪ್ರವೇಶ ನಿರ್ಬಂಧ ಆದೇಶ ವಾಪಸ್ ಪಡೆಯಬೇಕು ಎಂದರು.

ನಿಯಮ ಉಲ್ಲಂಘನೆ ಆರೋಪ:

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರಿಗೆ ಶಿಷ್ಟಾಚಾರದ ಹೆಸರಿನಲ್ಲಿ ನಿರ್ಬಂಧಿತ ಅವಧಿಯಲ್ಲಿ ನೆಲ್ಲಿಕತ್ತರಿ ಅರಣ್ಯದೊಳಗೆ ಪ್ರವೇಶಿಸಲು ಅನುಮತಿ ನೀಡಿರುವುದು ಖಂಡನೀಯ. ನಾಗರಹೊಳೆ ಹಾಗೂ ಬಂಡೀಪುರ ಅರಣ್ಯದೊಳಗೆ ಹುಲ್ಲುಗಾವಲು ನಿರ್ಮಾಣಕ್ಕೆ ಮಾನವಶ್ರಮ ಬಳಸದೆ ಜೆಸಿಬಿ, ಹಿಟಾಚಿ ಬಳಸಿರುವುದು ನಿಯಮಗಳ ಉಲ್ಲಂಘನೆಯಾಗಿದ್ದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹಳ್ಳಿಕೆರೆಹುಂಡಿ ಭಾಗ್ಯರಾಜ್ ಒತ್ತಾಯಿಸಿದರು.

ಇದೇವೇಳೆ ಬಿಆರ್‌ಟಿ ವಲಯದ ಡಿಸಿಎಫ್‌ ಶ್ರೀಪತಿ ಅವರಿಗೆ ಮನವಿ ಸ್ವೀಕರಿಸಲಾಯಿತು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಗೌರವ ಅಧ್ಯಕ್ಷ ಅಂಡುವಿನಹಳ್ಳಿ ಎಚ್‌.ಎಸ್‌.ರಾಜು, ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಮುಖಂಡರಾದ ವಳಗೆರೆ ಗಣೇಶ್, ಕೆರೆಹುಂಡಿ ರಾಜಣ್ಣ, ಅಂಡುವಿನಹಳ್ಳಿ ಮಹೇಶ್, ದೇವಣ್ಣ, ಮಲಿಯೂರು ಮಹೇಂದ್ರ, ಮಲಿಯೂರ್ ಸತೀಶ್, ನಾಗೇಂದ್ರ, ಮಹೇಶ್, ಸ್ಯಾಂಡ್ರಳ್ಳಿ ಬಸವರಾಜ್, ನಾಗರಾಜು, ಊರ್ದಳ್ಳಿ ರಾಮಣ್ಣ, ನಾಗರಾಜಪ್ಪ ಮುಕುಡಹಳ್ಳಿ, ರಾಜು, ಚೇತನ್ ಕುಮಾರ್, ಕಿಳ್ಳಿಪುರ ಶ್ರೀಕಂಠ, ರವಿ ಮರೆಯಾಲ, ಚಿಕ್ಕಕಾಳಪ್ಪ. ಅರಳಿಕಟ್ಟೆ ಪ್ರಭುಸ್ವಾಮಿ, ಸಿದ್ದಲಿಂಗಪ್ಪ, ಮಹೇಶ್ ಹೊನ್ನೇಗೌಡನಹಳ್ಳಿ ಇದ್ದರು.

‘ಅಕ್ರಮ ಒತ್ತುವರಿ ತೆರವುಗೊಳಿಸಿ’ 

ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ ರೆಸಾರ್ಟ್ ಹೋಂಸ್ಟೇ ಜಂಗಲ್‌ಲಾಡ್ಜ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಬಂಡವಾಳಶಾಹಿಗಳು ರಾಜಕಾರಣಿಗಳು ಅರಣ್ಯ ಜಾಗದಲ್ಲಿ ಫಾರಂಹೌಸ್ ಕಟ್ಟಿಕೊಂಡು ವಿಲಾಸಿ ಜೀವನ ನಡೆಸುತ್ತಿದ್ದಾರೆ. ಇಂತಹ ಅಕ್ರಮಗಳ ಬಗ್ಗೆ ಕ್ರಮವಹಿಸದ ಅಧಿಕಾರಿಗಳು ರೈತವಿರೋಧಿ ನೀತಿ ಅನುಸರಿಸುತ್ತಿರುವುದು ಖಂಡನೀಯ. ಜಾನುವಾರುಗಳು ಅರಣ್ಯದೊಳಗೆ ಮೇವು ಮೇಯ್ದರೆ ಕಾಡು ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಎಂಬ ಸಚಿವರ ಹೇಳಿಕೆ ಮೂರ್ಖತನದಿಂದ ಕೂಡಿದೆ ಎಂದು ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.