ಚಾಮರಾಜನಗರ: ಜೂನ್ 24ರಂದು ನಡೆಯುವ ‘ದೇವನಹಳ್ಳಿ ಚಲೋ’ ಹೋರಾಟಕ್ಕೆ ಜಿಲ್ಲೆಯಿಂದ 500ಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದು ಸಾಮೂಹಿಕ ನಾಯಕತ್ವದ ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆಯ ಮುಖಂಡ ಹೊನ್ನೂರು ಪ್ರಕಾಶ್ ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ರೈತರು, ಪ್ರಗತಿಪರ ಸಂಘಟನೆಗಳು ದೇವನಹಳ್ಳಿ ಚಲೋನಲ್ಲಿ ಭಾಗವಹಿಸಲಿವೆ. ಪ್ರತಿ ತಾಲ್ಲೂಕಿನಿಂದಲೂ ನೂರಾರು ಹೋರಾಟಗಾರರು ಭಾಗವಹಿಸಲಿದ್ದಾರೆ’ ಎಂದರು.
ರಾಜ್ಯ ಸರ್ಕಾರ ಕಾರ್ಪೊರೆಟ್ ಲಾಬಿಗೆ ಮಣಿದು ಬಲವಂತವಾಗಿ ರೈತರಿಂದ ಫಲವತ್ತಾದ ಕೃಷಿಭೂಮಿಯನ್ನು ಕಿತ್ತುಕೊಳ್ಳುತ್ತಿರುವುದು ಖಂಡನೀಯ. ಸರ್ಕಾರಕ್ಕೆ ಒಂದಿಂಚೂ ಕೃಷಿ ಭೂಮಿಯನ್ನು ಬಿಟ್ಟುಕೊಡುವುದಿಲ್ಲ. ರಾಜ್ಯದಾದ್ಯಂತ ರೈತರು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಈಗಾಗಲೇ ಲಕ್ಷಾಂತರ ಎಕರೆ ಕೃಷಿಭೂಮಿಯನ್ನು ವಶಪಡಿಸಿಕೊಂಡು ಭೂ ಬ್ಯಾಂಕ್ ನಿರ್ಮಾಣ ಮಾಡಿಕೊಂಡಿದ್ದರೂ ಭೂಮಿ ದಾಹ ತೀರಿಲ್ಲ. ಸಣ್ಣ ರೈತರ ಬದುಕಿಗೆ ಆಧಾರವಾಗಿದ್ದ ಕೃಷಿ ಭೂಮಿಯನ್ನು ಕಿತ್ತು ಕೈಗಾರಿಕೋದ್ಯಮಿಗಳಿಗೆ ಹಂಚಿಕೆ ಮಾಡುತ್ತಿದೆ. ಕೈಗಾರಿಕಾ ಉದ್ದೇಶಕ್ಕೆ ನೀಡಲಾದ ಭೂಮಿಯನ್ನು ಉದ್ಯಮಿಗಳು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುತ್ತಿದ್ದಾರೆ. ನೆಪ ಮಾತ್ರಕ್ಕೆ ಕೈಗಾರಿಕೆ ಆರಂಭಿಸಿ ನಷ್ಟದ ಲೆಕ್ಕ ನೀಡಿ ಭೂಮಿ ಕಬಳಿಸುತ್ತಿದ್ದಾರೆ ಎಂದು ದೂರಿದರು.
ಸರ್ಕಾರ ಸರ್ವಾಧಿಕಾರಿಯಂತೆ ರೈತರ ಭೂಮಿಯನ್ನು ಬಲವಂತವಾಗಿ ಕಿತ್ತುಕೊಂಡು ಬೀದಿಗೆ ತಳ್ಳುತ್ತಿದೆ. ಅಧಿಕಾರ ಇಲ್ಲದಿದ್ದಾಗ ರೈತರ ಬಗ್ಗೆ ಕಾಳಜಿ ತೋರುವ ನಾಯಕರು ಅಧಿಕಾರ ಹಿಡಿದ ಕೂಡಲೇ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ದೇವನಹಳ್ಳಿ ಬಳಿ ರೈತರಿಂದ 1,177 ಎಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಮಾಡ್ರಳ್ಳಿ ಪಾಪಣ್ಣ, ಚನ್ನಮಲ್ಲಪ್ಪ ಮೇಲಾಜಿಪುರ, ಪ್ರಭುಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.