ADVERTISEMENT

ಜಿಲ್ಲೆಯ ವಿವಿಧ ಕಡೆ ಭರ್ಜರಿ ಮಳೆ

ರಸ್ತೆಗಳಲ್ಲೇ ಹರಿದ ನೀರು, ವಾಹನಗಳ ಸಂಚಾರಕ್ಕೆ ತೊಂದರೆ, ತಗ್ಗುಪ್ರದೇಶಗಳಿಗೆ ನುಗ್ಗಿ ಅವಾಂತರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 10:11 IST
Last Updated 24 ಸೆಪ್ಟೆಂಬರ್ 2019, 10:11 IST
ಚಾಮರಾಜನಗರದ ಡೀವಿಯೇಷನ್‌ ರಸ್ತೆಯಲ್ಲಿ ಮೊಣಕಾಲು ಮಟ್ಟಕ್ಕೆ ನಿಂತ ನೀರಿನಲ್ಲೇ ಸಾಗಿದ ವಾಹನ ಸವಾರರು ಚಿತ್ರ: ಸಿ.ಆರ್‌.ವೆಂಕಟರಾಮು
ಚಾಮರಾಜನಗರದ ಡೀವಿಯೇಷನ್‌ ರಸ್ತೆಯಲ್ಲಿ ಮೊಣಕಾಲು ಮಟ್ಟಕ್ಕೆ ನಿಂತ ನೀರಿನಲ್ಲೇ ಸಾಗಿದ ವಾಹನ ಸವಾರರು ಚಿತ್ರ: ಸಿ.ಆರ್‌.ವೆಂಕಟರಾಮು   

ಚಾಮರಾಜನಗರ: ಜಿಲ್ಲಾ ಕೇಂದ್ರ ಚಾಮರಾಜನಗರ, ಕೊಳ್ಳೇಗಾಲ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೋಮವಾರ ರಾತ್ರಿ ಗುಡುಗು ಸಿಡಿಲಿನಿಂದ ಕೂಡಿದ ಭರ್ಜರಿ ಮಳೆ ಬಿದ್ದಿದೆ.

ನಗರದಲ್ಲಿ ಸಂಜೆ ಏಳು ಗಂಟೆಗೆ ಆರಂಭವಾದ ಮಳೆ 9 ಗಂಟೆವರೆಗೂ ಎಡೆಬಿಡದೆ ಸುರಿಯಿತು. ಚಾಮರಾಜನಗರ ತಾಲ್ಲೂಕಿನಾದ್ಯಂತ ಉತ್ತಮವಾಗಿ ಮಳೆ ಬಿದ್ದಿದೆ. ಹರದನಹಳ್ಳಿ, ಹೊಂಗನೂರು, ಬಿಸಿಲ್ವಾಡಿ, ವೆಂಕಟಯ್ಯನ ಛತ್ರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ 9 ಗಂಟೆಯ ಹೊತ್ತಿಗೆ 70 ಮಿ.ಮೀಗಿಂತಲೂ ಹೆಚ್ಚು ಮಳೆಯಾಯಿತು.

ಯಳಂದೂರು ಪಟ್ಟಣ, ಬಿಳಿಗಿರಿರಂಗನ ಬೆಟ್ಟ ಸೇರಿದಂತೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಕೊಳ್ಳೇಗಾಲ ನಗರ ಹಾಗೂ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಜಡಿ ಮಳೆಯಾಗಿದೆ. ಮಹದೇಶ್ವರ ಬೆಟ್ಟದಲ್ಲೂ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.

ADVERTISEMENT

ಗುಂಡ್ಲುಪೇಟೆ ಹಾಗೂ ಹನೂರು ಭಾಗದಲ್ಲೂ ಮಳೆಯಾಗಿದೆ. ಭಾನುವಾರ ರಾತ್ರಿಯೂ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿತ್ತು.

ಸೋಮವಾರ ಬೆಳಿಗ್ಗೆಯಿಂದಲೇ ಜಿಲ್ಲೆಯಾದ್ಯಂತ ಬಿಸಿಲಿನ ವಾತಾವರಣ ಇತ್ತು. ಸಂಜೆಯ ವೇಳೆಗೆ ಮೋಡ ಕಪ್ಪಿಟ್ಟಲು ಆರಂಭವಾಯಿತು. ನಗರದಲ್ಲಿ ರಾತ್ರಿ 7 ಗಂಟೆಗೆ ಹನಿಹನಿಯಾಗಿ ಸುರಿಯಲು ಆರಂಭಿಸಿದ ಮಳೆ ನಂತರ ಬಿರುಸು ಪಡೆದು ಸತತ ಎರಡು ಗಂಟೆ ಕಾಲ ಭರ್ಜರಿಯಾಗಿ ಸುರಿಯಿತು. ಚಾಮರಾಜನಗರ ಹೋಬಳಿಯಲ್ಲಿ ರಾತ್ರಿ 8.45ರ ಹೊತ್ತಿಗೆ 70 ಮಿ.ಮೀ ಮಳೆಯಾಯಿತು.

ತಗ್ಗು ಪ್ರದೇಶಗಳಿಗೆ ನೀರು: ಭಾರಿ ಮಳೆಯಿಂದಾಗಿ ಚಾಮರಾಜನಗರ, ಕೊಳ್ಳೇಗಾಲಗಳಲ್ಲಿ ಚರಂಡಿಗಳು ಕಟ್ಟಿ ರಸ್ತೆಯಲ್ಲೇ ನೀರು ಹರಿಯಿತು.

ನಗರದ ಸಂತೇಮರಹಳ್ಳಿ ವೃತ್ತದಿಂದ ಭುವನೇಶ್ವರಿ ವೃತ್ತಕ್ಕೆ ಬರುವ ಡೀವಿಯೇಷನ್‌ ರಸ್ತೆಯಲ್ಲಿ ಮೊಣಕಾಲು ಮಟ್ಟಕ್ಕೆ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸಿದರು. ಭುವನೇಶ್ವರಿ ವೃತ್ತದಿಂದ ಚಾಮರಾಜೇಶ್ವರ ದೇವಸ್ಥಾನದತ್ತ ಹೋಗುವ ರಸ್ತೆಯಲ್ಲೂ ಭಾರಿ ಪ್ರಮಾಣದಲ್ಲಿ ನೀರು ನಿಂತಿತ್ತು.

ಎರಡೂ ನಗರಸಭೆಗಳ ವ್ಯಾಪ್ತಿಯಲ್ಲಿ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು ಅವಾಂತರ ಸೃಷ್ಟಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.