ADVERTISEMENT

ಗುಂಡ್ಲುಪೇಟೆ: ಬೇಡಿಕೆಗಳ ‌ಈಡೇರಿಕೆಗೆ ‘ಸಹಿ ಸಂಗ್ರಹ’ ಚಳವಳಿ

ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 15:20 IST
Last Updated 24 ಜೂನ್ 2025, 15:20 IST
ಗುಂಡ್ಲುಪೇಟೆ ಪಟ್ಟಣದಲ್ಲಿ ಗ್ರಾಮ ಪಂಚಾಯಿತಿ ನೌಕರರು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು
ಗುಂಡ್ಲುಪೇಟೆ ಪಟ್ಟಣದಲ್ಲಿ ಗ್ರಾಮ ಪಂಚಾಯಿತಿ ನೌಕರರು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು   

ಗುಂಡ್ಲುಪೇಟೆ: ವೈಜ್ಞಾನಿಕವಾಗಿ ಕನಿಷ್ಠ ಕೂಲಿ ನಿಗದಿ ಮಾಡಬೇಕು, ಕಾರ್ಮಿಕರ ವಿರುದ್ಧ ಹಾಗೂ ಬಂಡವಾಳಗಾರರ ಪರ ಕಾನೂನುಗಳ ಜಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ‘ಸಹಿ ಸಂಗ್ರಹ’ ಚಳವಳಿ ನಡೆಸಿ ಪ್ರತಿಭಟಿಸಲಾಯಿತು.

ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಸಮಾವೇಶಗೊಂಡ ಗ್ರಾಮ ಪಂಚಾಯಿತಿ ನೌಕರರು ಸಹಿ ಸಂಗ್ರಹಿಸಿದರು. ನ್ಯಾಯಯುತ ಬೇಡಿಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಿದ ಸಂದರ್ಭ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಸಂಘದ ಮುಖಂಡರ ಸಭೆ ಕರೆದು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು.

19 ಬೇಡಿಕೆಗಳನ್ನು ಕೂಲಂಕಷವಾಗಿ ಚರ್ಚಿಸಿ ಪಿಂಚಣಿ, ಸೇವಾ ಹಿರಿತನ, ಭತ್ಯೆ ಹೆಚ್ಚಳ, ಪಂಚಾಯಿತಿಗಳ ಮೇಲ್ದರ್ಜೆಗೇರಿಸಿ ಪ್ರತಿ ಪಂಚಾಯಿತಿಗೂ ಲೆಕ್ಕ ಸಹಾಯಕರ ನೇಮಕ ಮಾಡುವುದು, ಆರೋಗ್ಯ ವಿಮೆ ಸಹಿತ ಇತರೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದದರಿಂದ ಮುಷ್ಕರ ಕೈಬಿಡಲಾಗಿತ್ತು.

ADVERTISEMENT

ಆಶ್ವಾಸನೆ ಬಳಿಕವೂ ಬೇಡಿಕೆಗಳು ಈಡೇರದ ಪರಿಣಾಮ ರಾಜ್ಯದ ಎಲ್ಲ ತಾಲ್ಲೂಕು ಪಂಚಾಯಿತಿಗಳು ಹಾಗೂ ಕಾರ್ಮಿಕ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಮುಖಂಡರು ತಿಳಿಸಿದರು.

ಬಳಿಕ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷ ಚಿಕ್ಕತುಪೂರು ಮಲ್ಲು, ತಾಲ್ಲೂಕು ಅಧ್ಯಕ್ಷ ಬೊಮ್ಮನಹಳ್ಳಿ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಅಣ್ಣೂರು ಸಿದ್ದರಾಜು, ಮಂಜು, ಸಂಪತ್ತು, ಲೋಕೇಶ, ಚಿನ್ನರಾಜು, ಶಿವಮ್ಮ, ನಾಗರಾಜು ಸೇರಿದಂತೆ ಗ್ರಾಮ ಪಂಚಾಯಿತಿ ನೌಕರರು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.