ADVERTISEMENT

ಪ್ರತಿ ಮನೆಯಲ್ಲೂ ತ್ರಿವರ್ಣಧ್ವಜ: ಮಕ್ಕಳಿಂದ ಜಾಗೃತಿ

ಸ್ವಾತಂತ್ರ್ಯದ ಅಮೃತಮಹೋತ್ಸವ; ಶಾಲಾ, ಕಾಲೇಜುಗಳಲ್ಲಿ ವಿತರಣೆ, ಅಧಿಕಾರಿಗಳಿಂದಲೂ ಅರಿವು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 15:31 IST
Last Updated 11 ಆಗಸ್ಟ್ 2022, 15:31 IST
ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳು ನೆಲದಲ್ಲಿ ಮಲಗಿ ಅಶೋಕ ಚಕ್ರವನ್ನು ನಿರ್ಮಾಣ ಮಾಡಿ, ಮಧ್ಯಾದಲ್ಲಿ ತ್ರಿವರ್ಣಧ್ವಜ ಹಿಡಿದು ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಿದರು
ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳು ನೆಲದಲ್ಲಿ ಮಲಗಿ ಅಶೋಕ ಚಕ್ರವನ್ನು ನಿರ್ಮಾಣ ಮಾಡಿ, ಮಧ್ಯಾದಲ್ಲಿ ತ್ರಿವರ್ಣಧ್ವಜ ಹಿಡಿದು ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಿದರು   

ಚಾಮರಾಜನಗರ: ಸ್ವಾ‌ತಂತ್ರ್ಯದ ಅಮೃತಮಹೋತ್ಸವ ಅಂಗವಾಗಿ ರೂಪಿಸಲಾಗಿರುವ ಪ್ರತಿ ಮನೆಯಲ್ಲೂ ತ್ರಿವರ್ಣಧ್ವಜ (ಹರ್‌ ಘರ್‌ ತಿರಂಗಾ) ಅಭಿಯಾನದ ಭಾಗವಾಗಿ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ.

ಅಂಗನವಾಡಿ, ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿಗಳು, ಗ್ರಾಮ ಪಂಚಾಯತಿಗಳು ಸೇರಿದಂತೆ ಎಲ್ಲ ಕಡೆಗಳಲ್ಲೂ ಮಕ್ಕಳು, ಅಧಿಕಾರಿಗಳು ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಭಿಯಾನದ ಭಾಗವಾಗಿ ಇದೇ 13ರಿಂದ 15ರವರೆಗೆ ಮನೆಗಳು, ಅಂಗನವಾಡಿ, ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕು.

ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಜಾಥಾ, ಸ್ಪರ್ಧೆಗಳು, ಬಾವುಟಗಳ ಪ್ರದರ್ಶನ ನಡೆದವು.

ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹೆಮ್ಮೆ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ADVERTISEMENT

ಹಳ್ಳಿಕೆರೆಹುಂಡಿಯ ಜೆ.ಎಸ್.ಎಸ್. ಪ್ರೌಢಶಾಲೆ, ಕೊಳ್ಳೇಗಾಲ ತಾಲ್ಲೂಕು ಮಧುವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ರಾಷ್ಟ್ರಧ್ವಜದ ಬಗ್ಗೆ ಗೌರವ ಮೂಡಿಸುವ ಕುರಿತ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿರುವ ಅಶೋಕ ಚಕ್ರದ ಮಾದರಿಯನ್ನು ಪಿರಮಿಡ್ ರೀತಿಯಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರದರ್ಶಿಸಿ ಗಮನ ಸೆಳೆದರು. ಹನೂರು ತಾಲ್ಲೂಕಿನ ಹಳೆ ಮಾರ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಜಾಥಾ ನಡೆಸಿದರು.

ಪೂರ್ವಭಾವಿ ಕಾರ್ಯಕ್ರಮ:ಪರಿಶಿಷ್ಟ ವರ್ಗಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಆಶ್ರಮ ಶಾಲೆಗಳಲ್ಲೂ ಗುರುವಾರ ಜಾಗೃತಿ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳು, ಶಿಕ್ಷಕರು, ನಿಲಯ ಪಾಲಕರೊಂದಿಗೆ ವಿವಿಧ ಬುಡಕಟ್ಟು ಹಾಡಿ ಪೋಡುಗಳಿಗೆ ತೆರಳಿ ಧ್ವಜ ವಿತರಿಸಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಬಗ್ಗೆ ತಿಳಿ ಹೇಳಿದರು.

ಸ್ವಾತಂತ್ರ್ಯದ ಹೋರಾಟ, ತ್ಯಾಗದ ಮಹತ್ವ ಸಾರುವ ಹಿನ್ನೆಲೆಯಲ್ಲಿ ಚಿಣ್ಣರು ಜಾಥಾ ನಡೆಸಿದರು. ರಾಷ್ಟ್ರಧ್ವಜ ಪ್ರದರ್ಶಿಸಿ ದೇಶಾಭಿಮಾನ ವ್ಯಕ್ತಪಡಿಸಿದರು.

ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟ, ಜೀರಿಗೆ ಗದ್ದೆ, ನಕ್ಕುಂದಿ, ಕೋಣನಕೆರೆ, ಹಿರಿಯಂಬಲ, ಪೊನ್ನಾಚಿ, ಬೈಲೂರು, ಕಂಚಗಳ್ಳಿ, ರಾಚಪ್ಪಾಜಿ ನಗರ, ಗಾಣಿಗ ಮಂಗಲ, ಯಳಂದೂರು ತಾಲ್ಲೂಕಿನ ಪುರಾಣಿಪೋಡು, ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ, ಮದ್ದೂರು, ಬರಗಿ ಆಶ್ರಮ ಶಾಲೆಗಳ ಮಕ್ಕಳು ಭಾಗವಹಿಸಿದ್ದರು.

ಒಡೆಯರಪಾಳ್ಯ, ಬಂಡಳ್ಳಿ, ಕೊಳ್ಳೇಗಾಲ ಪಟ್ಟಣ, ಮಲೆಮಹದೇಶ್ವರಬೆಟ್ಟ ಸೇರಿದಂತೆ ವಿವಿದೆಡೆ ಇರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.