ADVERTISEMENT

ಕೊಳ್ಳೇಗಾಲ: ಹೈಕೋರ್ಟ್‌ನಲ್ಲಿ ಅನರ್ಹ ಸದಸ್ಯರ ಮೇಲ್ಮನವಿ ವಜಾ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 16:52 IST
Last Updated 25 ಸೆಪ್ಟೆಂಬರ್ 2021, 16:52 IST
ಹೈಕೋರ್ಟ್‌
ಹೈಕೋರ್ಟ್‌   

ಕೊಳ್ಳೇಗಾಲ: ಇಲ್ಲಿನ ನಗರಸಭೆಯ ಏಳು ಅನರ್ಹ ಸದಸ್ಯರು ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್‌ ನಿಯಮವನ್ನು ಉಲ್ಲಂಘಿಸಿದ ಆರೋಪದಲ್ಲಿ ಬಿಎಸ್‌ಪಿಯಿಂದ ಆಯ್ಕೆಯಾಗಿದ್ದ ಗಂಗಮ್ಮ (ನಗರಸಭೆಯ ಅಧ್ಯಕ್ಷೆಯಾಗಿದ್ದರು), ಪ್ರಕಾಶ್ ಶಂಕನಪುರ, ರಾಮಕೃಷ್ಣ, ನಾಸಿರ್ ಷರೀಫ್, ನಾಗಸುಂದ್ರಮ್ಮ, ಪವಿತ್ರ, ನಾಗಮಣಿ ಅವರ ಸದಸ್ಯತ್ವನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಇದೇ ಸೆಪ್ಟೆಂಬರ್ 6ರಂದು ಆದೇಶ ಹೊರಡಿಸಿದ್ದರು.

ಏಳೂ ಸದಸ್ಯರು ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿತು.

ADVERTISEMENT

2018ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಬಿಎಸ್‍ಪಿ ಪಕ್ಷದಿಂದ 9 ಮಂದಿ ಗೆದ್ದಿದ್ದರು. ಶಾಸಕ ಎನ್.ಮಹೇಶ್ ಅವರನ್ನು ಬಿಎಸ್‍ಪಿಯಿಂದ ಉಚ್ಚಾಟನೆ ಮಾಡಿದ ಬಳಿಕ ಅವರ ಬೆಂಬಲಿಗಾರಿದ್ದ ಏಳು ಸದಸ್ಯರು ಶಾಸಕರೊಂದಿಗೆ ಗುರುತಿಸಿಕೊಂಡಿದ್ದರು.

2020ರ ಅಕ್ಟೋಬರ್‌ 29ರಂದು ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಬಿಎಸ್‍ಪಿಯಿಂದ ಸದಸ್ಯೆ ಜಯಮರಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಪಕ್ಷದ ವತಿಯಿಂದ ಎಲ್ಲ ಸದಸ್ಯರಿಗೂ ವಿಪ್ ಜಾರಿ ಮಾಡಿದ್ದರು. ಆದರೆ ಮಹೇಶ್‌ ಜೊತೆ ಗುರುತಿಸಿಕೊಂಡಿದ್ದ ಈ ಏಳು ಮಂದಿ ಸದಸ್ಯರು ವಿಪ್ ಉಲ್ಲಂಘಿಸಿ ಗಂಗಮ್ಮ ಮತ್ತು ಬಿಜೆಪಿ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕವಿತಾ ಪರ ಮತ ಚಲಾಯಿಸಿದ್ದರು.

ಪಕ್ಷದ ವಿಪ್‌ ಉಲ್ಲಂಘಿಸಿರುವ ಬಗ್ಗೆಜಯಮರಿ ಅವರು ನಗರಸಭೆಯ ಆಯುಕ್ತರಿಗೆ ದೂರು ನೀಡಿದ್ದರು. ಅವರನ್ನು ಅದನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ರವಾನೆ ಮಾಡಿದ್ದರು.

‘ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿರುವುದನ್ನು ‘ಪ್ರಜಾವಾಣಿ’ಗೆ ದೃಢಪಡಿಸಿರುವ ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ನಾಗಯ್ಯ ಅವರು, ಪಕ್ಷದ ಪರವಾಗಿ ಹಿರಿಯ ವಕೀಲ ಪೊನ್ನಣ್ಣ ಹಾಗೂ ಸುರೇಶ್‌ ವಾದ ಮಂಡಿಸಿದ್ದರು. ಆದೇಶದ ಪ್ರತಿ ಇನ್ನಷ್ಟೇ ಸಿಗಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.