ADVERTISEMENT

ಆಸ್ಪತ್ರೆ ನಿರ್ಮಿಸಿಕೊಡಲು ಕಾಡು ಜನರ ಒತ್ತಾಯ

ಬಿಳಿಗಿರಿಬೆಟ್ಟ: ಅರಣ್ಯ ಇಲಾಖೆಯಿಂದ ಸೋಲಿಗರ ಕುಂದು ಕೊರತೆ ಸಭೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 2:57 IST
Last Updated 6 ಆಗಸ್ಟ್ 2025, 2:57 IST
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ಯರಕನಗದ್ದೆ ಪೋಡಿನ ಸಮುದಾಯ ಭವನದಲ್ಲಿ ಅರಣ್ಯ ಇಲಾಖೆ ಸೋಮವಾರ ಆಯೋಜಿಸಿದ್ದ ಆದಿವಾಸಿಗಳ ಕುಂದು ಕೊರತೆ ಸಭೆಯಲ್ಲಿ ಸೋಲಿಗರು ಭಾಗವಹಿಸಿದ್ದರು
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ಯರಕನಗದ್ದೆ ಪೋಡಿನ ಸಮುದಾಯ ಭವನದಲ್ಲಿ ಅರಣ್ಯ ಇಲಾಖೆ ಸೋಮವಾರ ಆಯೋಜಿಸಿದ್ದ ಆದಿವಾಸಿಗಳ ಕುಂದು ಕೊರತೆ ಸಭೆಯಲ್ಲಿ ಸೋಲಿಗರು ಭಾಗವಹಿಸಿದ್ದರು   

ಯಳಂದೂರು: ತಾಲ್ಲೂಕಿನ ಬಿಳಿಗಿರಿಬೆಟ್ಟದ ಎರಕನಗದ್ದೆ ಪೋಡಿನಲ್ಲಿ ಸೋಮವಾರ ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಗಿರಿವಾಸಿಗಳ ಕುಂದು ಕೊರತೆ ಸಭೆ ನಡೆಯಿತು.

ಜಿಲ್ಲಾ ಬುಡಕಟ್ಟು ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ಮಾತನಾಡಿ, ‘ಅರಣ್ಯ ಇಲಾಖೆ ಕಳೆದ ವಾರ 70ರ ದಶಕದ ಆಸ್ಪತ್ರೆಯನ್ನು ಸೋಲಿಗರ ಗಮನಕ್ಕೆ ತಾರದೆ ನೆಲಸಮ ಮಾಡಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಆಸ್ಪತ್ರೆ ಇದ್ದ ಸ್ಥಳದಲ್ಲಿ ಮತ್ತೆ ನಿರ್ಮಿಸಿಕೊಡಲು ಅವಕಾಶ ಇದೆ. 25ಕ್ಕೂ ಹೆಚ್ಚಿನ ಸೀಗೆಬೆಟ್ಟ ಮತ್ತು ಯರಕನಗದ್ದೆ ಪೋಡಿನ ರೈತರಿಗೆ ಭೂಮಿ ಹಕ್ಕು ಮಂಜೂರು ಮಾಡಬೇಕು, ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಕ್ಕೆ ಅಡ್ಡಿ ಮಾಡಬಾರದು. ಮಾನವ ವನ್ಯಜೀವಿ ಸಂಘರ್ಷದ ಸಮಯದಲ್ಲಿ ಜನರಿಗೆ ತೊಂದರೆ ಕಂಡುಬಂದರೆ ತಕ್ಷಣ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

ಡಿಸಿಎಫ್ ಶ್ರೀಪತಿ ಮಾತನಾಡಿ, ‘ಬಿಳಿಗಿರಿ ಬೆಟ್ಟದ ಅರಣ್ಯ ಇಲಾಖೆಗೆ ಸೇರಿದ ಸ್ಥಳಗಳಲ್ಲಿ ಒತ್ತುವರಿ ಗುರುತಿಸಲಾಗಿದೆ. ಹಿಂದೆ ನಿರ್ಮಿಸಿದ್ದ ಆಸ್ಪತ್ರೆ ಸ್ಥಳವೂ ಒತ್ತುವರಿಯಾಗಿತ್ತು. ಇಲ್ಲಿ ಆರೋಗ್ಯ ಕೇಂದ್ರ ಸ್ಥಗಿತಗೊಂಡು ಹಲವು ವರ್ಷಗಳೇ ಉರುಳಿವೆ. ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಒಂದು ತಿಂಗಳ ಗಡುವು ನೀಡಿದರೂ ಸಂಬಂಧಪಟ್ಟವರು ಮಾಹತಿ ನೀಡಿಲ್ಲ. ಹಾಗಾಗಿ, ಇಲಾಖೆಗೆ ಸೇರಿದ ಸ್ಥಳದಲ್ಲಿನ ಅನುಪಯುಕ್ತ ಕಟ್ಟಡ ತೆರವುಗೊಳಿಸಲಾಗಿದೆ. ಬಂಗ್ಲೇಪೋಡಿನ ಅರಣ್ಯ ಇಲಾಖೆಗೆ ಸೇರಿದ ಕಟ್ಟಡದಲ್ಲಿ ಸಂಸ್ಥೆ ಆಸ್ಪತ್ರೆ ನಡೆಸಲು ನೆರವು ನೀಡಲಾಗುವುದು’ ಎಂದರು.

ADVERTISEMENT

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ಕರ್ ಅಕ್ಷಯ್, ಆರ್ಎಫ್ಒ ಸತೀಶ್, ಮುಖಂಡರಾದ ಕೇತಮ್ಮ, ಕಾರನ ಕೇತೇಗೌಡ, ಮರಯನ ಕ್ಯಾತೇಗೌಡ, ಬಿರಿ ಮಾದೇಗೌಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.