ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾಸ್ಥಳವಾಗಿರುವ, ನಿತ್ಯ ಸಾವಿರಾರು ಭಕ್ತರು ಭೇಟಿನೀಡುವ ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ಅನೈರ್ಮಲ್ಯ ಹೆಚ್ಚಾಗಿದ್ದು ಭಕ್ತರ ಆತಂಕಕ್ಕೆ ಕಾರಣವಾಗಿದೆ.
ಮಾದಪ್ಪನ ಭಕ್ತರು ಪವಿತ್ರ ಎಂದು ಭಾವಿಸುವ ಕ್ಷೇತ್ರದ ಕಲ್ಯಾಣಿಯಲ್ಲಿ ಅನೈರ್ಮಲ್ಯ ತುಂಬಿಕೊಂಡಿದ್ದು ಭಕ್ತರು ಪಾಚಿಗಟ್ಟಿದ ನೀರಿನಲ್ಲಿ ಮಿಂದು ದೇವರ ದರ್ಶನಕ್ಕೆ ತೆರಳಬೇಕಾದ, ಹರಕೆ ತೀರಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಕಲ್ಯಾಣಿಯೊಳಗೆ ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡಿದ್ದು ನೀರಿನ ಬಣ್ಣ ಸಂಪೂರ್ಣ ಬದಲಾಗಿದೆ.
ಭಕ್ತರು ಉಟ್ಟು ಬಿಸಾಡಿದ ವಸ್ತ್ರಗಳು ಸಹಿತ ಕಸ, ಕಡ್ಡಿ, ಪ್ಲ್ಯಾಸ್ಟಿಕ್ ತ್ಯಾಜ್ಯಗಳು ಎಲ್ಲೆಡೆ ಹರಡಿದ್ದು ಅನೈರ್ಮಲ್ಯ ತಾಂಡವಾಡುತ್ತಿದೆ. ಕಲ್ಯಾಣಿಯ ಮೆಟ್ಟಿಲುಗಳು ಸಂಪೂರ್ಣವಾಗಿ ಪಾಚಿ ಕಟ್ಟಿಕೊಂಡಿದ್ದು ನೀರು ಸಹ ಮಲಿನವಾಗಿದೆ. ಸೋಮವಾರವಷ್ಟೆ ಭಕ್ತರಾದ ಕುಮಾರ್ ಎಂಬುವರು ಕಲ್ಯಾಣಿಯೊಳಗೆ ಬಿದ್ದು ಗಂಭೀರ ಪೆಟ್ಟುಮಾಡಿಕೊಂಡಿದ್ದಾರೆ.
ಕಲ್ಯಾಣಿಯೊಳಗೆ ಮುಳುಗಲು ಹೋದವರು ನಿತ್ಯವೂ ಕಾಲುಜಾರಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಲೇ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಶುಚಿತ್ವದ ಕಡೆಗೆ ಗಮನ ಹರಿಸಿಲ್ಲ. ಕಲ್ಯಾಣಿಯಲ್ಲಿ ಪುಟ್ಟ ಮಕ್ಕಳೂ ಸ್ನಾನಕ್ಕೆ ಇಳಿಯುತ್ತಿದ್ದು ಅಪಾಯಕ್ಕೆ ಸಿಲುಕಿದ ಸಂದರ್ಭ ರಕ್ಷಣೆಗೆ ಧಾವಿಸಲು ರಕ್ಷಣಾ ಸಿಬ್ಬಂದಿ ಇರುವುದಿಲ್ಲ. ರಕ್ಷಣಾ ಪರಿಕರಗಳೂ ಸ್ಥಳದಲ್ಲಿ ಲಭ್ಯವಿರುವುದಿಲ್ಲ ಎಂಬುದು ಭಕ್ತರ ಆರೋಪ.
ಸ್ನಾನಕ್ಕೆ ನೀರು ಯೋಗ್ಯವಾಗಿಲ್ಲವಾದರೂ ಸ್ನಾನಕ್ಕೆ ಅವಕಾಶ ನೀಡಲಾಗಿದೆ. ಮುಡಿಕೊಡುವ ಭಕ್ತರೂ ಇಲ್ಲಿಯೇ ಮೀಯುತ್ತಿದ್ದು ಸ್ನಾನಕ್ಕೆ ಶಾಂಪು, ಸೋಪು ಬಳಕೆ ಮಾಡುತ್ತಿರುವುದರಿಂದ ನೀರು ಸಂಪೂರ್ಣವಾಗಿ ಮಲಿನಗೊಂಡಿದೆ. ಇಷ್ಟಾದರೂ ನೀರನ್ನು ಶುದ್ಧೀಕರಿಸುವ ಗೋಜಿಗೆ ಯಾರೂ ಹೋಗಿಲ್ಲ ಎಂಬುದು ಭಕ್ತರಾದ ಮಹದೇವ್ ಆರೋಪ.
ಕಲ್ಯಾಣಿ ಕೊಳದಲ್ಲಿ ಮಲಿನಗೊಂಡಿರುವ ನೀರಿನಲ್ಲಿ ಸ್ನಾನ ಮಾಡಿದರೆ ಸಾಂಕ್ರಾಮಿಕ ರೋಗಗಳು ಬರುವ ಆತಂಕ ಇದ್ದು ಕೂಡಲೇ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಅಧಿಕಾರಿಗಳು ಗಮನ ಹರಿಸಬೇಕು. ಭಕ್ತರ ಹಿತದೃಷ್ಠಿಯಿಂದ ಸ್ನಾನ ಘಟ್ಟವನ್ನು ಸ್ವಚ್ಛಗೊಳಿಸಬೇಕು, ಪಾಚಿಯನ್ನು ತೆಗೆಸಬೇಕು, ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂಬುದು ಭಕ್ತರ ಆಗ್ರಹ.
ಕಲ್ಯಾಣಿ ಬಳಿ ಸ್ನಾನಕ್ಕೆ ಹಾಗೂ ಶೌಚಕ್ಕೆ ಕೇವಲ ಒಂದು ಸಾಮೂಹಿಕ ಶೌಚಾಲಯ ಹಾಗೂ ಸ್ನಾನಗೃಹ ನಿರ್ಮಿಸಲಾಗಿದೆ. ಸಾವಿರಾರು ಭಕ್ತರು ಭೇಟಿನೀಡುವ ಕ್ಷೇತ್ರದಲ್ಲಿ ಅಗತ್ಯಕ್ಕೆ ತಕ್ಕಷ್ಟು ಸ್ನಾನಗೃಹ ಹಾಗೂ ಶೌಚಗೃಹಗಳನ್ನು ನಿರ್ಮಿಸಬೇಕು. ಮುಖ್ಯವಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಭಕ್ತ ಮಹೇಶ್ ಆಗ್ರಹಿಸಿದ್ದಾರೆ.
ಮಲೆ ಮಹಾದೇಶ್ವರ ಬೆಟ್ಟದ ಅಂತರ ಗಂಗೆಯ ಬಳಿ ನೂತನ ಕಲ್ಯಾಣಿ ಕೊಳವನ್ನು ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಿರ್ಮಿಸಲಾಗಿದೆ. ಕ್ಷೇತ್ರಕ್ಕೆ ಹರಕೆ ಹೊತ್ತುಬರುವ ಸಾವಿರಾರು ಭಕ್ತರು ಮಾದಪ್ಪನ ದರ್ಶನ ಪಡೆಯುವ ಮುನ್ನ ಅಂತರಗಂಗೆಯಲ್ಲಿ ಪುಣ್ಯಸ್ನಾನ ಮಾಡುವುದು ವಾಡಿಕೆ. ಆದರೆ ಅಂತರಗಂಗೆಯ ನೀರು ಮಲಿನಗೊಂಡಿರುವುದರಿಂದ ಸಾಂಕ್ರಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಮಲೆ ಮಹದೇಶ್ವರಬೆಟ್ಟಕ್ಕೆ ಪಾಪ ಕಳೆದುಕೊಳ್ಳಲು ಭಕ್ತರು ಬರುತ್ತಾರೆ. ಸಂಕಷ್ಟಗಳು ಬಾರದಿರಲಿ, ಆರೋಗ್ಯ, ಆಯಸ್ಸು ಹೆಚ್ಚಾಗಲಿ ಎಂದು ಅಂತರಗಂಗೆ ಹಾಗೂ ಕಲ್ಯಾಣಿ ಕೊಳದಲ್ಲಿ ಮುಳುಗೇಳುತ್ತಾರೆ. ಇಂತಹ ಕಲ್ಯಾಣಿಕೊಳ ಮಲಿನಗೊಂಡಿದ್ದು ಸಂಪೂರ್ಣ ಪಾಚಿಗಟ್ಟಿರುವುದು ನೋವಿನ ಸಂಗತಿ.
–ಕುಮಾರ, ಹುಣಸೂರಿನ ಎಮ್ಮಿಗೆ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.